ಬದುಕಿನಲ್ಲಿ ಒಳಿತು, ತೃಪ್ತಿ ಕಾಣಬೇಕಾದರೆ ಶಿಕ್ಷಕ ವೃತ್ತಿಯಿಂದ ಸಾಧ್ಯ

ಬಿಇಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸನ್ಮಾನ ಸ್ವೀಕರಿಸಿದ ಡಾ. ಈಶ್ವರಪ್ಪ

ದಾವಣಗೆರೆ, ಫೆ.23- ಬದುಕಿನಲ್ಲಿ ಒಳಿತು ಸಾಧಿಸಲು, ತೃಪ್ತಿ ಕಾಣಬೇಕಾದರೆ ಶಿಕ್ಷಕ ವೃತ್ತಿಯಿಂದ ಸಾಧ್ಯವಿದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ತಿಳಿಸಿದರು. 

ನಗರದ ಬಿಇಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗಣಕ ಯಂತ್ರ ಪ್ರಯೋಗಾಲಯ ಉದ್ಘಾಟನೆ, ವಿದ್ಯಾರ್ಥಿ ಸಂಘದ ಸಮಾರೋಪ ಹಾಗೂ ದೀಪದಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಎಲ್ಲರೂ ಶಿಕ್ಷಕರಾಗಲು ಸಾಧ್ಯವಿಲ್ಲ. ಆದರೆ, ಯಾವ ವೃತ್ತಿಯ ಮೇಲೆ ಆಸಕ್ತಿ ಇದೆಯೋ ಅದನ್ನು ಆಳವಾಗಿ ಅಧ್ಯಯನ ಮಾಡಬೇಕು. ಆಗ ವೃತ್ತಿಗೆ ಬದ್ಧತೆ, ನೈತಿಕತೆ, ಘನತೆಯನ್ನು ತಂದು ಕೊಡಬಹುದೆಂದರು.

ಶಿಕ್ಷಣದಲ್ಲಿ ಬುದ್ಧಿ, ಕರುಣೆ, ಕೌಶಲ್ಯ ಬಹಳ ಮುಖ್ಯವೆಂದು ಮಹಾತ್ಮ ಗಾಂಧೀಜಿ ತಿಳಿಸಿದ್ದಾರೆ. ಶಿಕ್ಷಕರು ಕೇವಲ ವಿದ್ಯಾರ್ಥಿಗಳಿಗೆ ಪಾಠ ಬೋಧಿಸುವುದಷ್ಟೇ ಅಲ್ಲದೇ, ಸಮಾಜದ ಸ್ವಾಸ್ಥ್ಯ, ಆರೋಗ್ಯ ಕಾಪಾಡುವ ಹೊಣೆಯನ್ನೂ ಹೊಂದಬೇಕು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಏನು ಮಾಡಬೇಕೆಂಬುದನ್ನು ಸ್ಪಷ್ಟವಾಗಿ ತಿಳಿದಿರಬೇಕು ಎಂದು ಹೇಳಿದರು.

ಆನ್‍ಲೈನ್ ಪಾಠದಲ್ಲಿ ಲ್ಯಾಪ್‍ಟಾಪ್, ಕಂಪ್ಯೂಟರ್ ಇರುತ್ತದೆಯೇ ಹೊರತು ಜೀವಂತಿಕೆ ಇರುವುದಿಲ್ಲ. ಆದರೆ ವಿದ್ಯಾರ್ಥಿಗಳ ಮುಂದೆ ನೇರವಾಗಿ ಪಾಠ ಮಾಡುವಾಗ ಪ್ರತಿ ತರಗತಿ ಸೃಜನಾತ್ಮಕ, ಕ್ರಿಯಾತ್ಮಕವಾಗಿರಲಿದೆ. ಶಿಕ್ಷಕರು ಸರಿಯಾಗಿ ಪಾಠ ಮಾಡಿದರೆ ಮಾತ್ರ ವಿದ್ಯಾರ್ಥಿಗಳು ಸರಿಯಾಗಿ ಕೇಳುತ್ತಾರೆ. ಇಲ್ಲದಿದ್ದರೆ ಮುಖದಲ್ಲಿ ಕೇಳುವ ಭಾವನೆ ಇರುವುದಿಲ್ಲ ಎಂದರು.

ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಮತ್ತು ಕ್ರಿಯಾಶೀಲ ಚಿಂತನೆ, ಸಹಯೋಗ, ಸಂವಹನ ಬೆಳೆಸಬೇಕು. ಶಿಕ್ಷಕರ ವಾಣಿಯೇ ಸರಸ್ವತಿ ರೂಪವಾಗಬೇಕು. ಸರಸ್ವತಿ ಕೇಂದ್ರ ಜಾನದ ಕೇಂದ್ರವಾಗಿಸುವ ಕರ್ತವ್ಯ ನಿಮ್ಮದು ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕೇವಲ ಜಾನ ಪಡೆಯುವುದು ಮುಖ್ಯವಲ್ಲ. ಕಲಿತದ್ದನ್ನು ಕೌಶಲ್ಯಗಳ ಮುಖೇನ ಸಮಾಜಕ್ಕೆ ಅನುಗುಣವಾಗಿ ಕೊಡುಗೆ ನೀಡುವುದು ಬಹಳ ಮುಖ್ಯ. ಮಹಾತ್ಮ ಗಾಂಧೀಜಿ ಅವರು ದೇಶದ ಜನರಿಗೆ ಹೊಟ್ಟೆ ತುಂಬಾ ಊಟ, ಮೈ ತುಂಬಾ ಬಟ್ಟೆ ಸಿಗುವ ತನಕ ತಾವೂ ಉತ್ತಮ ಉಡುಪು ತೊಡದೇ, ಊಟ ಮಾಡಲಿಲ್ಲ. ಅದರ ಫಲವಾಗಿ ಪ್ರಸ್ತುತ ಆಹಾರ ಉತ್ಪಾದನೆಯಾಗಿದ್ದು, ಜವಳಿ ಉದ್ಯಮ ಬೆಳೆದಿದೆ. ಇಂತಹ ಸಾಮಾಜಿಕ ಜವಾಬ್ದಾರಿ, ಹೊಣೆಗಾರಿಕೆ ನಮಗೆಲ್ಲರಿಗೂ ಇರಬೇಕೆಂದರು. 

ಗಣಕ ಯಂತ್ರ ಪ್ರಯೋಗಾಲಯ ಉದ್ಘಾಟಿಸಿದ ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ರಾಜನಹಳ್ಳಿ ರಮಾನಂದ್‌ ಮಾತನಾಡಿ, ನಾವು 60 ವರ್ಷದ ಹಿಂದೆ ಇಂಜಿನಿಯರಿಂಗ್ ಪದವಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹಾಲೆಂಡ್‍ಗೆ ಹೋದಾಗ, ಅಲ್ಲಿ ಜ್ಞಾನದ ಜೊತೆಗೆ ಸಮಾಜ, ಕುಟುಂಬವನ್ನು ಹೇಗೆ ಅಭ್ಯುದಯ ಮಾಡಬೇಕೆನ್ನುವುದರ ಬಗ್ಗೆ ತಿಳಿ ಹೇಳಿ ಕೊಡಲಾಗುತ್ತಿತ್ತು. ಒಂದು ಸಣ್ಣ ದೇಶದಲ್ಲಿ ಇಂತಹ ವಿಷ ಯಗಳನ್ನು ತಿಳಿಸಿಕೊಡುತ್ತಿದ್ದರು. ಈಗ ಕೇವಲ ವಿದ್ಯಾರ್ಜನೆ, ರಾಂಕ್, ಅಂಕಗಳಿಗೆ ಮಾತ್ರ ಸೀಮಿತವಾಗಿದೆ ಎಂದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ನೀತಾ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇ ಜಿನ ಆಡಳಿತಾಧಿಕಾರಿ ಪ್ರೊ. ವೈ. ವೃಷಭೇಂದ್ರಪ್ಪ, ನಿವೃತ್ತ ಪ್ರಾಚಾರ್ಯ, ಶಿಕ್ಷಣ ತಜ್ಞ  ಪ್ರೊ. ಪಿ.ಬಸವಕುಮಾರಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!