ಐತಿಹಾಸಿಕ ಜೈನ ಸನ್ಯಾಸ ದೀಕ್ಷೆ

ದಾವಣಗೆರೆ, ಫೆ.22- ಜೈನ್ ಧರ್ಮದ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಗರದಲ್ಲಿ 3 ತಲೆಮಾರಿನ ಒಂದೇ ಕುಟುಂಬದ ಐವರು ಜೈನ್ ಧರ್ಮದ ಸನ್ಯಾಸ ದೀಕ್ಷೆ ಪಡೆದರು. ಇವರೊಂದಿಗೆ ಚೆನ್ನೈನ ಓರ್ವರು ದೀಕ್ಷೆ ಪಡೆದಿದ್ದಾರೆ.

ನಗರಕ್ಕೆ ಸಮೀಪದ ಆವರಗೆರೆಯ ಶ್ರೀ ನಾಗೇಶ್ವರ್ ಭಗವಾನ್ ಮಂದಿರದಲ್ಲಿ ದೀಕ್ಷೆ ಪಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ವರ್ದಿಚಂದ್ ಜೀ (75), ಪುತ್ರ ಅಶೋಕ್ ಕುಮಾರ್ ವರ್ದಿಚಂದ್ ಜೀ (47), ಸೊಸೆ ಭಾವನಾ ಬೆನ್ ಅಶೋಕ್ ಕುಮಾರ್ ಜೀ (45) ಮೊಮ್ಮಕ್ಕಳಾದ ಪಕ್ಷಾಲ್ ಅಶೋಕ್‌ಕುಮಾರ್ ಜೀ (17), ಜಿನಾಂಕ್ ಅಶೋಕ್‌ಕುಮಾರ್ ಜೀ (15) ಮತ್ತು ಚೆನ್ನೈನ  ಲಕ್ಷಯ್ ಧರ್ಮೇಂದ್ರಕುಮಾರ್‌ ಜೀ  (23) ಜೈನ ಸನ್ಯಾಸತ್ವ ಸ್ವೀಕರಿಸಿದ್ದಾರೆ.

ದೀಕ್ಷಾರ್ಥಿಗಳು ತಮ್ಮ ಪೂರ್ವಾಶ್ರಮದ ಆಸ್ತಿಗಳನ್ನೆಲ್ಲಾ ದಾನ ಮಾಡಿದ್ದು, ತಮ್ಮ ದೀಕ್ಷೆಯ ದಿನದಲ್ಲಿ ತಮ್ಮ ಮೈ ಮೇಲಿದ್ದ ಬಂಗಾರದ ಆಭರಣಗಳನ್ನೂ ಸಹ ದಾನ ಮಾಡಿದ್ದಾರೆ. ದೀಕ್ಷೆ ಪಡೆದುಕೊಂಡ ಮೇಲೆ ಒಟ್ಟು 14 ವಸ್ತುಗಳನ್ನು ತಮ್ಮ ಜೀವನದಲ್ಲಿ ಧ್ಯಾನ ಪೂಜೆ ಮಾಡುವ ಸಾಮಗ್ರಿಗಳನ್ನು ಹರಾಜು ಹಾಕಲಾಯಿತು. 

ದೀಕ್ಷೆ ತೆಗೆದುಕೊಂಡ ಮೇಲೆ ಪಾಲನೆ ಮಾಡಬೇಕಾದ 5 ಮಹಾ ವ್ರತಗಳಾದ ಅಹಿಂಸ ಪರಿಪಾಲನೆ, ಸುಳ್ಳು, ಕಳ್ಳತನ, ಚರ-ಸ್ಥಿರ ಆಸ್ತಿಗಳನ್ನು ಹೊಂದದಿರುವುದು ಹಾಗೂ ಬ್ರಹ್ಮಚರ್ಯ ಪಾಲಿಸಿಕೊಂಡು ಹೋಗುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು. ಆಚಾರ್ಯ ವಿಜಯ ಉದಯ್ ಪ್ರಭ್ ಸುರೀಶ್ವರಜೀ ಅವರು ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ದೀಕ್ಷೆ ನೀಡಿದರು. ಗುರುಗಳಾದ ಆಚಾರ್ಯ ಶ್ರೀ  ಮೇಘದರ್ಶನ ಸುರೀಜಿ ಮಹಾರಾಜ್, ಆಚಾರ್ಯ ಶ್ರೀ ಹೀರಾಚಂದ್ರ ಸುರೀಜಿ ಮಹಾರಾಜ್ ಜೈನ ಪರಂಪರೆಯಂತೆ ಸನ್ಯಾಸ ದೀಕ್ಷೆ ನೀಡಿದರು.

ದೀಕ್ಷೆ ಪಡೆದ ಸನ್ಯಾಸಿಗಳು ಬೇರೆಯವರಿಗೆ ಯಾವುದೇ ತೊಂದರೆ ಕೊಡದಂತೆ ಆತ್ಮಕಲ್ಯಾಣಕ್ಕಾಗಿ ಬರಿಗಾಲಿನಲ್ಲಿ ಸಂಚರಿಸುತ್ತಾರೆ. ಇವರೆಲ್ಲಾ ಅಹಿಂಸಾ ತತ್ವವನ್ನು ಬೋಧಿಸುತ್ತಾರೆ ಎಂದು ದೇವಸ್ಥಾನದ ಟ್ರಸ್ಟಿ ಸಂಘವಿ ಮಹಾವೀರ್ ಜೈನ್ ತಿಳಿಸಿದ್ದಾರೆ.

ವರದಿಚಂದ್ ಜೀ ಹೆಸರು ಮುನಿರಾಜ್ ಹೇಮೋದಯಪ್ರಭಾ ವಿಜಯ್, ಅಶೋಕ್‌ಕುಮಾರ್ ವರ್ದಿಚಂದ್ ಹೆಸರು ಆತ್ಯೋದಯಪ್ರಭಾ ವಿಜಯ್, ಭಾವನಾ ಬೆನ್ ಅಶೋಕ್ ಕುಮಾರ್ ಹೆಸರು ಭವ್ಯ ದಯಾರತ್ನ, ಪಕ್ಷಾಲ್ ಅಶೋಕ್‌ಕುಮಾರ್ ಹೆಸರು ಪರಮೋದಯ ಪ್ರಭಾ ವಿಜಯ್, ಜಿನಾಕ್ ಅಶೋಕ್‌ಕುಮಾರ್ ಹೆಸರು ಜ್ಞಾನೋದಯ ಪ್ರಭಾ ವಿಜಯ್, ಲಕ್ಷಯ್ ಧರ್ಮೇಂದ್ರ ಕುಮಾರ್‌ ಹೆಸರು ಲಾಭೋದಯ ಪ್ರಭಾ ವಿಜಯ್ ಎಂಬುದಾಗಿ ದೀಕ್ಷಾರ್ಥಿಗಳ ಹೆಸರು ಬದಲಾಗಿವೆ ಎಂದು ಸಮಾಜದ ಗೌತಮ್ ಜೈನ್ ಹೇಳಿದ್ದಾರೆ.

error: Content is protected !!