ಹರಿಹರ, ಏ.23- ನಗರದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವುದರಿಂದ ಸರ್ಕಾರದ ಮಾರ್ಗಸೂಚಿ ಅಡಿಯಲ್ಲಿ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತು ಪಡಿಸಿ, ಉಳಿದೆಲ್ಲಾ ಅಂಗಡಿ ಮುಂಗಟ್ಟು ಗಳನ್ನು ಬಂದ್ ಮಾಡಿಸಲಾಗಿದೆ.
ಇಂದು ದಿನಸಿ ಪದಾರ್ಥಗಳ ಅಂಗಡಿ, ಔಷಧಿ ಮಳಿಗೆಗಳು, ಪೆಟ್ರೋಲ್ ಬಂಕ್, ಹೋಟೆಲ್, ಬೇಕರಿ, ಬಾರ್, ಮಟನ್, ಚಿಕನ್, ಎಳನೀರು, ಹೂವು, ಸರ್ಕಾರಿ ಕಚೇರಿಗಳು, ಗೊಬ್ಬರದ ಅಂಗಡಿಗಳು ಮಾತ್ರ ತೆರೆದುಕೊಂಡು ವ್ಯಾಪಾರ ವಹಿವಾಟು ಮಾಡಿದರೆ, ಬಟ್ಟೆ, ಕಬ್ಬಿಣ-ಸಿಮೆಂಟ್, ಟೈಲರ್, ಬಂಗಾರ, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್, ಬೀಡಾ, ಹಾರ್ಡ್ವೇರ್, ಮೊಬೈಲ್, ಕೈಗಾರಿಕೆ, ಗ್ಯಾರೇಜ್, ಪೇಂಟ್, ಕಟಿಂಗ್, ಪೋಟೋ ಸ್ಟುಡಿಯೋ, ಎಗ್ ರೈಸ್, ಸ್ಟೇಷನರಿ, ಜೆರಾಕ್ಸ್, ಆಟೋಮೊಬೈಲ್ ಸೇರಿದಂತೆ ಹಲವು ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.
ವಿವಿಧ ರೀತಿಯ ಮುಂಜಾಗ್ರತೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ವ್ಯಾಪಾರ, ವಹಿವಾಟು ನಡೆಸುವ ಅಂಗಡಿಗಳಿಗೆ, ವಾಹನ ಚಲಾಯಿಸುವವರಿಗೆ ಅಧಿಕಾರಿಗಳು ದಂಡವನ್ನು ಹಾಕುತ್ತಿದ್ದಾರೆ. ಹೋಟೆಲ್ ಮತ್ತು ಬಾರ್ಗಳಲ್ಲಿ ಕುಳಿತುಕೊಳ್ಳುವುದಕ್ಕೆ ಅವಕಾಶ ನೀಡಿರುವುದಿಲ್ಲ. ಮನೆಗಳಿಗೆ ತೆಗೆದುಕೊಂಡು ಹೋಗಬಹುದಾಗಿದೆ. ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಬೆಳಿಗ್ಗೆ, ಸಂಜೆ ನಿತ್ಯ ಪೂಜೆಗೆ ಮಾತ್ರ ಅವಕಾಶ ನೀಡಿದ್ದು, ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧಗಳನ್ನು ಹೇರಲಾಗಿದೆ.
ನಗರದ ಸಿಪಿಐ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂ ದಿನ ಆಗುಹೋಗುಗಳ ಬಗ್ಗೆ ಚರ್ಚೆ ಕೂಡ ಮಾಡಲಾಯಿತು. ಸರ್ಕಾರ ಗಂಟೆಗೊಮ್ಮೆ ನಿರ್ಧಾರಗಳನ್ನು, ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಗೊಂದಲ ಉಂಟಾಗಿದ್ದು, ಗ್ರಾಮೀಣ ಪ್ರದೇಶದಿಂದ ಬಂದಂತಹವರಿಗೆ ಸಮಸ್ಯೆ ಆಗುತ್ತಿದ್ದು, ಸರ್ಕಾರದ ದಿಢೀರ್ ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ತಹಶೀಲ್ದಾರ್. ಕೆ. ಬಿ. ರಾಮಚಂದ್ರಪ್ಪ, ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮಿ, ಸಿಪಿಐ ಸತೀಶ್ ಕುಮಾರ್, ಪಿಎಸ್ಐ ಬಸವರಾಜ್ ತೆಲಿ, ಗ್ರಾಮಾಂತರ ಪಿಎಸ್ಐ ಡಿ. ರವಿಕುಮಾರ್, ಆರೋಗ್ಯ ಇಲಾಖೆಯ ಡಾ. ಚಂದ್ರಮೋಹನ್ ಇವರುಗಳ ನೇತೃತ್ವದಲ್ಲಿ ಎಲ್ಲ ಇಲಾಖೆಯ ಸಿಬ್ಬಂದಿಗಳು ಅಂಗಡಿ ಮುಂಗಟ್ಟನ್ನು ಬಂದ್ ಮಾಡುವ ಕಾರ್ಯದಲ್ಲಿ ತೊಡಗಿದ್ದರು.