ಜಮೀನು, ನೀರು ಇದ್ದ ಮಾತ್ರಕ್ಕೆ ಕಾಲೇಜು ಸ್ಥಾಪನೆಗೆ ಕೇಂದ್ರ ವೈದ್ಯಕೀಯ ಇಲಾಖೆ ಒಪ್ಪದು: ಸಚಿವ ಭೈರತಿ
ಹರಿಹರ, ಜು.13- ಕೇವಲ ಜಮೀನು, ನೀರು ಇದ್ದ ಮಾತ್ರಕ್ಕೆ ಹರಿಹರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕೇಂದ್ರ ವೈದ್ಯಕೀಯ ಇಲಾಖೆ ಒಪ್ಪುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸ್ಪಷ್ಟಪಡಿಸಿದ್ದಾರೆ.
ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತಂತೆ ನಗರದ ಹೊರ ವಲಯದ ಕಾಗಿನೆಲೆ ಗುರುಪೀಠದ ಸಭಾಂಗಣದಲ್ಲಿ ತಾಲ್ಲೂಕಿನ ವಿವಿಧ ಮಠದ ಶ್ರೀಗಳ ಮತ್ತು ಸಚಿವರ ಹಾಗೂ ಸಂಸದರು ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಅದರದೇ ಆದ ನಿಬಂಧನೆಗಳಿರುತ್ತವೆ. ಕಳೆದ ಮೂರು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ಪ್ರಾರಂಭಿಸುತ್ತಿರುವ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ಸಮಸ್ಯೆಗಳಿಗೇ ಪರಿಹಾರ ದೊರೆತಿಲ್ಲ. ದಾವಣಗೆರೆ ನಗರದಲ್ಲಿನ ಚಿಗಟೇರಿ ಸಾರ್ವಜನಿಕ ಆಸ್ಪತ್ರೆ 930 ಹಾಸಿಗೆ ಇದ್ದದ್ದನ್ನು ಕೋವಿಡ್ ಸಮಯದಲ್ಲಿ ಇನ್ನೂ 230 ಹಾಸಿಗೆ ಹೆಚ್ಚು ಮಾಡಿದ್ದರ ಮಾನದಂಡಗಳ ಮೇಲೆ ಅಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾಗಿದೆ. ಆದರೆ ಹರಿಹರದಲ್ಲಿ ಕಾಲೇಜು ಸ್ಥಾಪನೆ ಕಷ್ಟದ ವಿಷಯ ಎಂದು ಸಚಿವರು ಹೇಳಿದರು.
ಹರಿಹರ ನಗರದಲ್ಲಿ ಪ್ರಸ್ತುತ ಇರುವ ಆಸ್ಪತ್ರೆಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಮಾಡಬಹುದು. ಜಯದೇವ ಆಸ್ಪತ್ರೆಯವರ ಜೊತೆಗೆ ಮಾತನಾಡಿ ಇನ್ನೂ 50 ಬೆಡ್ ಆಸ್ಪತ್ರೆ ತೆರೆಯುವುದಕ್ಕೆ ವ್ಯವಸ್ಥೆ ಮಾಡಬಹುದು ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಒಂದು ಸುಸಜ್ಜಿತ ವೈದ್ಯಕೀಯ ಕಾಲೇಜು ಸ್ಥಾಪನೆಯಾಗ ಬೇಕಾದರೆ ಅನೇಕ ಮಾನದಂಡಗಳಿರುತ್ತವೆ. 1200 ಬೆಡ್ ಆಸ್ಪತ್ರೆ ಇರಬೇಕು. ಹಲವಾರು ರೀತಿಯಲ್ಲಿ ವೈದ್ಯಕೀಯ ವ್ಯವಸ್ಥೆಗಳಿರಬೇಕು. ಹರಿಹರ ನಗರದಲ್ಲಿ 100 ಬೆಡ್ ಆಸ್ಪತ್ರೆ ಮತ್ತು 20 ಎಕರೆ ಜಮೀನು ಇಟ್ಟುಕೊಂಡು ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಿ ಎಂದು ಕೇಳಿದರೆ ಸಾಧ್ಯವಾಗದು ಎಂದು ಅಭಿಪ್ರಾಯಪಟ್ಟರು.
ದಾವಣಗೆರೆ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 930 ಹಾಸಿಗೆ ಇದ್ದದ್ದನ್ನು 1200 ಬೆಡ್‌ಗೆ ಏರಿಸಲಾಗಿದೆ. ಹಾಗೂ ನಗರದ ಜನತೆ 8 ರಿಂದ 10 ವರ್ಷಗಳಿಂದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒತ್ತಾಯ ಮಾಡುತ್ತಿದ್ದಾರೆ. ಸಂವಿಧಾನದ ಪತ್ರದಲ್ಲಿ ಏನು ಬರೆದಿರುತ್ತದೋ ಅದನ್ನು ಮೀರಿ ಏನು ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕಾಗಿನಲೆ ಕನಕ ಗುರುಪೀಠದ ಶ್ರೀ ಜಗದ್ಗುರು ಶ್ರೀ ನಿರಂಜನನಾಂದಪುರಿ ಮಹಾಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವ ಸಲುವಾಗಿ ಮಾಡಿದ ಮನವಿ ಮೇರೆಗೆ ಇಲ್ಲಿ ಸಭೆ ನಡೆಸಲಾಗುತ್ತಿದೆ. ಕಾಲೇಜು ಸ್ಥಾಪನೆ ಬಗೆಗಿನ ತೊಂದರೆ-ತೊಡಕುಗಳು ಬಾರದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಹೇಳಿದರು.
ವರ್ತಕ ಶಿವಪ್ರಕಾಶ್ ಶಾಸ್ತ್ರಿ, ಹರಿಹರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನೇಕ ರೀತಿಯ ಮೂಲಭೂತ ಸೌಕರ್ಯಗಳು ಇರುವುದರಿಂದ ಇಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು.
ಮಾಜಿ ನಗರಸಭೆ ಸದಸ್ಯ ನಾಗರಾಜ್ ಮೆಹರ್ವಾಡೆ, ನಗರದಲ್ಲಿ ಬೇಸಿಗೆ ಸಮಯ ಬಂದರೆ ಸಾರ್ವಜನಿಕರು ಕುಡಿಯುವ ನೀರಿಗೆ ಪರದಾಡುತ್ತಾರೆ. ಆಗಾಗಿ ಅಗಸನಕಟ್ಟೆ ಕೆರೆ ಅಭಿವೃದ್ಧಿ ಪಡಿಸಿ ಎಂದು ಹೇಳಿದರು.
ದೂಡಾ ಅಧ್ಯಕ್ಷ ಶಿವಕುಮಾರ್ ರಾಜನಹಳ್ಳಿ ಮಾತನಾಡಿ, ಅಗಸನಕಟ್ಟೆ ಕೆರೆ ಸ್ಥಳವು 25 ಎಕರೆ ಪ್ರದೇಶದಲ್ಲಿ 20 ಎಕರೆ ಪ್ರದೇಶವನ್ನು ಉಳ್ಳವರು ಆಕ್ರಮಿಸಿಕೊಂಡಿದ್ದಾರೆ ಇದನ್ನು ತೆರವುಗೊಳಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮೀಜಿ, ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ನಂದಿಗುಡಿ ಮಠದ ವೃಷಭಪುರಿ ಸ್ವಾಮೀಜಿ, ವೇಮನಪೀಠದ ವೇಮನಾನಂದ ಸ್ವಾಮೀಜಿ, ಮುಸ್ಲಿಂ ಧರ್ಮದ ಶಂಶುದ್ದೀನ್ ಸಾಬ್ ಬರ್ಕಾತಿ, ಕ್ರೈಸ್ತ ಧರ್ಮದ ಫಾದರ್ ಅಂತೋನಿ, ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಬಿ.ಪಿ. ಹರೀಶ್, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಡಿವೈಎಸ್ಪಿ ನರಸಿಂಹರಾಜು, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಗ್ರಾಮಾಂತರ ಪಿಎಸ್‌ಐ ಡಿ. ರವಿಕುಮಾರ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ನಾಗರಿಕ ಹೋರಾಟ ಸಮಿತಿಯ ಎನ್ ಹೆಚ್. ಶ್ರೀನಿವಾಸ್ ನಂದಿಗಾವಿ, ಎಂ. ನಾಗೇಂದ್ರಪ್ಪ, ಬಿ.ಕೆ. ಸೈಯದ್ ರೆಹಮಾನ್, ಹೆಚ್.ಕೆ. ಕೊಟ್ರಪ್ಪ, ಹೆಚ್ ನಿಜಗುಣ, ಬೆಳ್ಳೂಡಿ ರಾಮಚಂದ್ರಪ್ಪ, ಟಿ.ಜೆ. ಮುರುಗೇಶಪ್ಪ, ಸಿ.ಎನ್. ಹುಲುಗೇಶ್, ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ನಾಗರಾಜ್ ಮೆಹರ್ವಾಡೆ, ಮಾಜಿ ನಗರಸಭೆ ಅಧ್ಯಕ್ಷ ಬಿ. ರೇವಣಸಿದ್ದಪ್ಪ, ಶಿಕ್ಷಕ ಬೀರಪ್ಪ, ಜಗದೀಶ್ ಚೂರಿ, ಪತ್ರಕರ್ತರಾದ ಟಿ. ಇನಾಯತ್, ಎಂ.ಚಿದಾನಂದ ಕಂಚಿಕೇರಿ ಶೇಖರಗೌಡ, ಹೆಚ್.ಸಿ. ಕೀರ್ತಿಕುಮಾರ್, ಕೆ. ಜೈಮುನಿ, ಆರ್. ಮಂಜುನಾಥ್, ಆರ್.ಬಿ. ಪ್ರವೀಣ್, ಪಿ.ಜೆ. ಮಹಾಂತೇಶ್, ಮರಿಯೋಜಿರಾವ್, ಚಂದ್ರಶೇಖರ್, ನಿರಂಜನ್, ಕರಿಬಸಪ್ಪ ಹಾಗೂ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.