ದಾವಣಗೆರೆ, ಏ.23- ಜಿಲ್ಲೆಯಲ್ಲಿ ಶುಕ್ರವಾರ 200 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 1266ಕ್ಕೆ ಏರಿಕೆಯಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 145, ಹರಿಹರ 14, ಜಗಳೂರು 7, ಚನ್ನಗಿರಿ 15, ಹೊನ್ನಾಳಿ 15 ಹಾಗೂ ಹೊರ ಜಿಲ್ಲೆಯ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. 60 ಜನರು ಸೋಂಕು ಮುಕ್ತ ರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 24359 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 22829 ಜನರು ಗುಣಮುಖರಾಗಿದ್ದಾರೆ. 264 ಜನ ಸಾವನ್ನಪ್ಪಿದ್ದಾರೆ.
ಹರಿಹರ : ತಾಲ್ಲೂಕಿನಲ್ಲಿ 27 ಕೊರೊನಾ ಸೋಂಕಿತರು
ಹರಿಹರ, ಏ.23- ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ 27 ಕೊರೊನಾ ರೋಗದ ಪ್ರಕರಣಗಳು ದೃಢಪಟ್ಟಿವೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ತಿಳಿಸಿದರು.
ಅವರು ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ತಾಲ್ಲೂಕಿನಲ್ಲಿ ಪುರುಷರು 17 ಹಾಗೂ ಮಹಿಳೆಯರು 10 ಜನರಿಗೆ ಕೊರೊನಾ ರೋಗವು ದೃಢಪಟ್ಟಿದ್ದು, ಇಲ್ಲಿಯವರೆಗೆ ತಾಲ್ಲೂಕಿನಲ್ಲಿ ಒಟ್ಟು 127 ಜನರಿಗೆ ಕೊರೊನಾ ರೋಗವು ದೃಢಪಟ್ಟಿದ್ದು, ಇದರಲ್ಲಿ ಕೆಲವರು ಗುಣಮುಖರಾಗಿದ್ದು ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಕೊರೊನಾ ರೋಗದ ಬಾಧೆ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವುದರಿಂದ ಸರ್ಕಾರದ ಮಾರ್ಗಸೂಚಿ ಅನ್ವಯ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಗರದಲ್ಲಿ ಅಗತ್ಯ ವಸ್ತುಗಳ ಅಂಗಡಿ ಹೊರತುಪಡಿಸಿ, ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ. ಸಾರ್ವಜನಿಕರು ಅಂತರವನ್ನು ಕಾಯ್ದುಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸರ್ಕಾರದ ಕಾನೂನು ಪಾಲನೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದರೆ, ಅಂತಹ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಶನಿವಾರ ಮತ್ತು ಭಾನುವಾರ ಎಲ್ಲ ಬಗೆಯ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವುದಕ್ಕೆ ಸೂಚನೆ ನೀಡಲಾಗಿದೆ. ಇದಕ್ಕೆ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಮನೆಯಲ್ಲೇ ಇದ್ದು ಸರ್ಕಾರದ ಆದೇಶವನ್ನು ಪಾಲನೆ ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.