ದಾವಣಗೆರೆ, ಏ.23- ಕೋವಿಡ್ ಮಾರ್ಗಸೂಚಿ ಪಾಲಿಸದೇ ಪ್ರಾಕ್ಟಿಕಲ್ ಪರೀಕ್ಷೆ ಎಂಬ ಕಾರಣಕ್ಕೆ ಹಾಸ್ಟೆಲ್ಗಳಲ್ಲೇ ವಿದ್ಯಾರ್ಥಿಗಳನ್ನು ಉಳಿಸಿಕೊಂಡಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ನಗರದ ಖಾಸಗಿ ಕಾಲೇಜೊಂದಕ್ಕೆ ಇಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಕಸ್ಮಾತ್ ಏನಾದರೂ ಅನಾಹುತವಾದರೆ ತಾವೇ ಕಾರಣವೆಂದು ವಿದ್ಯಾರ್ಥಿಗಳು, ಪಾಲಕರ ಬಳಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಹಾಸ್ಟೆಲ್ನಲ್ಲೇ ವಿದ್ಯಾರ್ಥಿಗಳನ್ನು ಇಟ್ಟುಕೊಂಡಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಕೋವಿಡ್ ಮಾರ್ಗಸೂಚಿಯಂತೆ ಶಾಲಾ-ಕಾಲೇಜುಗಳು ಬಂದ್ ಆಗಬೇಕು. ಆನ್ಲೈನ್ ಕ್ಲಾಸ್ ಮಾಡಬೇಕು. ವಿದ್ಯಾರ್ಥಿಗಳನ್ನು ಮನೆಗೆ ಕಳಿಸಬೇಕೆಂದಿದೆ. ಇಲ್ಲವಾದರೆ ಅಂತಹ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕಾಲೇಜು ಆಡಳಿತಕ್ಕೆ ಎಚ್ಚರಿಕೆ ನೀಡಿದರು. ಅಲ್ಲದೇ ಸರ್ಕಾರದ ನಿಯಮಾವಳಿ ಉಲ್ಲಂಘನೆ ಮಾಡದಂತೆ ಸೂಚನೆ ನೀಡಿದರು.
ಕಾಲೇಜು ಆವರಣದಲ್ಲಿ ಕಂಡ ವಿದ್ಯಾರ್ಥಿನಿಯರನ್ನು ಮಾತನಾಡಿಸಿದ ಜಿಲ್ಲಾಧಿಕಾರಿ, ಯಾವ ಊರು, ಕಾಲೇಜಿನಲ್ಲಿ ಪಾಠ ನಡೆಸಲಾಗುತ್ತಿದೆಯೇ? ಎಂದು ಪ್ರಶ್ನಿಸಿದಾಗ ರಾಯಚೂರು, ಬಳ್ಳಾರಿ ಹೀಗೆ ಬೇರೆ ಊರಿನ ಈ ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದು, ಯಾವುದೇ ಪಾಠ ನಡೆಯುತ್ತಿಲ್ಲ. ಏ.28ರಿಂದ ಪ್ರಾಕ್ಟಿಕಲ್ ಎಕ್ಸಾಂ ಇದ್ದು, ನಮಗೆ ಪಠ್ಯದ ವಿಷಯಗಳ ಬಗೆಗಿನ ಅನುಮಾನಗಳನ್ನು ಉಪನ್ಯಾಸಕರ ಬಳಿ ತಿಳಿಯಲು ಬಂದಿದ್ದೇವೆ ಎಂದು ತಿಳಿಸುತ್ತಿದ್ದಂತೆ, ಕೋವಿಡ್ ಹೆಚ್ಚುತ್ತಿರುವ ಕಾರಣ ಊರಿಗೆ ಪ್ರಯಾಣಿಸದೇ, ಕಾಲೇಜಿಗೆ ಹೋಗದೇ ಹಾಸ್ಟೆಲ್ ನಲ್ಲಿದ್ದು ಕೋವಿಡ್ ನಿಯಮ ಪಾಲಿಸುತ್ತಾ ಪರೀಕ್ಷೆಗೆ ತಯಾರಾಗುವಂತೆ ಮನವರಿಕೆ ಮಾಡಿದರು.
ಕಾಲೇಜು ಪಕ್ಕದಲ್ಲೇ ಇರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್ಗೂ ಭೇಟಿ ನೀಡಿದ ಜಿಲ್ಲಾಧಿಕಾರಿ, ಕೋವಿಡ್ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಿ ಜಾಗ್ರತೆಯಿಂದ ಇರುವಂತೆ ತಿಳಿಸಿದರು.