ಜಗಳೂರಿನಲ್ಲಿ 10 ಕೋ.ರೂ. ಕಾಮಗಾರಿಗಳಿಗೆ ಚಾಲನೆ

ಜಗಳೂರು, ಜು.13 – ಕೋವಿಡ್‍ನಿಂದ ಮೃತರಾದ ಬಡ ಕುಟುಂಬಗಳಿಗೆ ಸರ್ಕಾರದಿಂದ 1 ಲಕ್ಷ ರೂ. ಪರಿಹಾರನ್ನು ಶೀಘ್ರವೇ ನೀಡಲಾಗುವುದು ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.

ಜಗಳೂರು ಪಟ್ಟಣದ ತರಳಬಾಳು ಸಮುದಾಯ ಭವನದಲ್ಲಿ ಇಂದು ಏರ್ಪಡಿಸಲಾಗಿದ್ದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಫುಡ್‍ಕಿಟ್ ವಿತರಿಸಿ ಅವರು ಮಾತನಾಡಿದರು.

ಜಗಳೂರಿನಲ್ಲಿ ಕೋವಿಡ್‍ನಿಂದ ಮೃತರಾದ 20 ಕುಟುಂಬಗಳಿವೆ. ಅವರೆಲ್ಲರಿಗೂ ಶಾಸಕ ರಾಮಚಂದ್ರಪ್ಪ ನವರ ಜೊತೆಗೂಡಿ ಪರಿಹಾರ ವಿತರಿ ಸಲಾಗುವುದು. ಹಾಗೂ ಪಟ್ಟಣದಲ್ಲಿ 10 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಜಗಳೂರು ತಾಲ್ಲೂಕು ಬರಪೀಡಿತವೆಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. ಸ್ಥಳೀಯ ಶಾಸಕರ ಶ್ರಮದ ಫಲವಾಗಿ 1,200 ಕೋಟಿ ರೂ. ಕಾಮಗಾರಿಗಳು ತಾಲ್ಲೂಕಿನಲ್ಲಿ ನಡೆಯುತ್ತಿದ್ದು, ತಾಲ್ಲೂಕು ಪ್ರಗತಿಯತ್ತ ಸಾಗುತ್ತಿದೆ. ಭದ್ರಾ ಮೇಲ್ದಂಡೆಯಿಂದ ತಾಲ್ಲೂಕಿಗೆ ನೀರು ಹರಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಕಾಮಗಾರಿಗಳಲ್ಲಿ ಪ್ರಮುಖ ಪಾತ್ರ ಕಾರ್ಮಿಕರದ್ದು. ಆದ್ದರಿಂದ ಕಾರ್ಮಿಕರು ಯಾವುದೇ ಸಂದರ್ಭದಲ್ಲಿಯೂ ಹಸಿವಿನಿಂದ ಬಳಲಬಾರದು. ಅದಕ್ಕಾಗಿ ಸಾಂಕೇತಿಕವಾಗಿ ಕಾರ್ಮಿಕರಿಗೆ 300 ಫುಡ್‍ಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದರು.

ನೋಂದಣಿಯಿಲ್ಲದ ಕಾರ್ಮಿಕರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆಯುವುದಿಲ್ಲ. ತಾಲ್ಲೂಕಿಗೆ ಒಟ್ಟು ಸರ್ಕಾರದಿಂದ 3000 ಕಿಟ್‍ಗಳನ್ನು ಈಗಾಗಲೇ ನೀಡಿದೆ. ಇದರ ಉಪಯೋಗವನ್ನು ಎಲ್ಲಾ ಫಲಾನುಭವಿಗಳು ಪಡೆಯುವಂತಾಗಲಿ ಎಂದು ಆಶಿಸಿದ ಸಚಿವರು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ತಾಲ್ಲೂಕನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು. ಕೋವಿಡ್‍ನಿಂದ ಮೃತಪಟ್ಟ ಕೆಲ ಕುಟುಂಬಗಳಿಗೆ ಸಚಿವರು ಇದೇ ಸಂದರ್ಭದಲ್ಲಿ ವೈಯಕ್ತಿಕವಾಗಿ ಧನಸಹಾಯ ಮಾಡಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ದಾವಣಗೆರೆಯನ್ನು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸುತ್ತಿದ್ದೇವೆ. ತಾಲ್ಲೂಕಿನಲ್ಲಿ ಅನೇಕ ಕಾಮಗಾರಿಗಳಿಗೆ 1,200 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.

ಲಾಕ್‍ಡೌನ್ ಸಂದರ್ಭದಲ್ಲಿ ಕಾರ್ಮಿಕರು ಆರ್ಥಿಕವಾಗಿ ನಷ್ಟ ಅನುಭವಿಸಿದ್ದು, ಆಯಾ ತಾಲ್ಲೂಕಿನ ಶಾಸಕರೊಡಗೂಡಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಾಧ್ಯವಾದಷ್ಟು ಉದ್ಯೋಗ ಸೃಷ್ಟಿಸುವಂತಹ ಕೆಲಸಗಳು ನಿರ್ಮಾಣವಾಗಬೇಕು ಎಂದರು.

ಶಾಸಕ ಎಸ್.ವಿ. ರಾಮಚಂದ್ರಪ್ಪ ಮಾತನಾಡಿ, ಸರ್ಕಾರ ನೀಡಿರುವ 1,200 ಕೋಟಿ ರೂ.ಅನುದಾನದಲ್ಲಿ ಜಗಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಐಬಿ ಸರ್ಕಲ್‍ನಿಂದ ದೊಣ್ಣೆಹಳ್ಳಿ ದ್ವಿಮುಖ ರಸ್ತೆವರೆಗೆ ವಿದ್ಯುದೀಕರಣ ಕಾಮಗಾರಿ, ಬಿ.ಆರ್ ಅಂಬೇಡ್ಕರ್ ಸರ್ಕಲ್‍ನಿಂದ ರಾಘವೇಂದ್ರ ಆಸ್ಪತ್ರೆವರೆಗೂ ರಸ್ತೆಗೆ ಎರಡೂ ಬದಿ ಪವರ್ ಬ್ಲಾಕ್ ಮತ್ತು ಗ್ರೀಲ್ ನಿರ್ಮಾಣ, ರಾಘವೇಂದ್ರ ಆಸ್ಪತ್ರೆಯಿಂದ ದೊಣ್ಣೆಹಳ್ಳಿ ರಸ್ತೆವರೆಗೆ ಎರಡು ಬದಿ ಪೆವರ್ ಬ್ಲಾಕ್ ಮತ್ತು ಗ್ರಿಲ್ ನಿರ್ಮಾಣ, ಬಿ.ಆರ್ ಅಂಬೇಡ್ಕರ್ ಸರ್ಕಲ್‍ನಿಂದ ತಾಲ್ಲೂಕು ಆಫೀಸ್‍ವರೆಗೆ ಮತ್ತು ತಾಲ್ಲೂಕು ಆಫೀಸಿನಿಂದ ಬಿದರಕೆರೆ ರಸ್ತೆಯ ವೈಭವ ಹೋಟೆಲ್‍ವರೆಗೆ ದ್ವಿಮುಖ ರಸ್ತೆ ನಿರ್ಮಾಣ ಹಾಗೂ ವಿದ್ಯುದೀಕರಣ ಕಾಮಗಾರಿ, ವಾರ್ಡ್ ನಂ.1ರಿಂದ 18 ರಲ್ಲಿ ತಲಾ ಒಂದು ಹೊಸ ಬಸ್ ನಿಲ್ದಾಣದ ಹತ್ತಿರ, ಪ್ರವಾಸಿ ಮಂದಿರ ಹತ್ತಿರ, ಚಳ್ಳಕೆರೆ ರಸ್ತೆಯ ಪಾರ್ಕ್ ಹತ್ತಿರ ಹಾಗೂ ವಾಲ್ಮೀಕಿ ಸಮುದಾಯ ಭವನದ ಹತ್ತಿರ ಮಿನಿ ಹೈಮಾಸ್ಟ್ ಲೈಟ್ ಅಳವಡಿಸುವ ಕಾಮಗಾರಿ, ವಾರ್ಡ್ ನಂ. 2 ರ ನಾಯಕರ ಕಾಲೋನಿಯಲ್ಲಿರುವ ಕೋಟೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಡಾ.ವಿಜಯ ಮಹಾಂತೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ .ರಿಷ್ಯಂತ್, ಡಿಹೆಚ್‍ಒ ಡಾ. ನಾಗರಾಜ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!