ಕುಂದೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ, ದಲಿತರ ಕೇರಿಗೆ ತೆರಳಿ ಅಹವಾಲು ಸ್ವೀಕಾರ
ಹೊನ್ನಾಳಿ,ಅ.17- ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಶನಿವಾರ ವಾಸ್ತವ್ಯ ಹೂಡಿರುವ ಕಂದಾಯ ಸಚಿವ ಆರ್.ಅಶೋಕ್, ಭಾನುವಾರ ಬೆಳಿಗ್ಗೆ ಹರಿಜನ ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಿ, ದುರ್ಗಾಂಬಿಕಾದೇವಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದುಕೊಂಡು ನಂತರ ದಲಿತರ ಮನೆಯಲ್ಲಿ ಉಪಹಾರ ಸೇವನೆ ಮಾಡುವ ಮೂಲಕ ಅವರ ಕುಂದುಕೊರತೆಗಳನ್ನು ಆಲಿಸಿದರು.
ನಿನ್ನೆ ಶನಿವಾರ ರಾತ್ರಿ ಇಲ್ಲಿನ ಸರ್ಕಾರಿ ಹಾಸ್ಟೆಲ್ನಲ್ಲಿ ವಾಸ್ತವ್ಯ ಹೂಡಿದ ಅಶೋಕ್, ಬೆಳಿಗ್ಗೆ ಏಳುತ್ತಿದ್ದಂತೆ ಶಾಸಕ ರೇಣುಕಾಚಾರ್ಯ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಮತ್ತಿತರೆ ಅಧಿಕಾರಿಗಳೊಂದಿಗೆ ವಾಯು ವಿಹಾರ ಮಾಡಿದರು. ನಂತರ ದಲಿತರ ಕೇರಿಗೆ ತೆರಳಿದ ಸಚಿವರು, ಶಾಂತರಾಜು ಶಾರದಮ್ಮ ಎಂಬುವವರ ಮನೆಗೆ ಭೇಟಿ ನೀಡಿ ಅವರ ಕುಟುಂಬ ಸದಸ್ಯರ ಜೊತೆ ಕುಳಿತು ರಾಗಿ ತಾಲಿಪಟ್ಟು, ತರಕಾರಿ ಉಪ್ಪಿಟ್ಟು, ಕೆಂಪಿಂಡಿ, ಶೇಂಗಾಚಟ್ನಿ, ಮೊಳಕೆಕಾಳು, ಜಾಮೂನು ಸೇವಿಸಿದರು.
ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಗ್ರಾಮ ವಾಸ್ತವ್ಯ ಎಂದರೆ `ಬಂದ ಸಿದ್ದ ಹೋದ ಸಿದ್ದ’ ಎಂಬುವುದಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ನಡುವಿನ ಕಂದಕ ದೂರವಾಗಬೇಕು. ಅಧಿಕಾರಿಗಳು ಸರ್ಕಾರಿ ಶಾಲೆಯಲ್ಲಿ ಮಲಗಬೇಕು. ಅಂಗನವಾಡಿಯಲ್ಲಿ ಊಟ ಮಾಡಬೇಕು. ಆಗ ಮಾತ್ರ ಗ್ರಾಮದ ವಾಸ್ತವಿಕ ಸ್ಥಿತಿ ಗೊತ್ತಾಗುತ್ತದೆ. ಅನೇಕ ಜನರು ಮಂತ್ರಿ ಗಳು, ಜಿಲ್ಲಾಧಿಕಾರಿ ಹಾಗೂ ಎಸಿಯವರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಜು ಗರ ಪಡುತ್ತಾರೆ. ಈ ಭಾವನೆ ದೂರವಾಗಬೇಕು ಎಂದು ಹೇಳಿದರು.
ಕುಂದೂರು ಗ್ರಾಮಸ್ಥರು ತೋರಿದ ಪ್ರೀತಿಗೆ ಚಿರಋಣಿ: ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ನನ್ನನ್ನು ಚಕ್ಕಡಿ ಮೂಲಕ ಭವ್ಯ ಮೆರವಣಿಗೆಯೊಂದಿಗೆ ಬರ ಮಾಡಿಕೊಂಡಿದ್ದು, ಊರಲ್ಲಿ ಹಬ್ಬದ ವಾತಾವರಣ, ಜನಪದ ಶೈಲಿಯಲ್ಲೇ ನೃತ್ಯ, ಭಜನೆ ಸೇರಿದಂತೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಮನಕ್ಕೆ ಸಂತೃಪ್ತಿಯಾಗಿದೆ. ಗ್ರಾಮಸ್ಥರು ತೋರಿಸಿದ ಪ್ರೀತಿಗೆ ಚಿರಋಣಿಯಾಗಿದ್ದೇನೆ. ಗ್ರಾಮ ವಾಸ್ತವ್ಯ ಯಶಸ್ವಿಯಾಗಿದೆ.
– ಆರ್.ಅಶೋಕ್, ಕಂದಾಯ ಸಚಿವರು
ಕರ್ನಾಟಕದ 227 ತಾಲ್ಲೂಕುಗಳಲ್ಲಿ ಈಗಾಗಲೇ ಗ್ರಾಮ ವಾಸ್ತವ್ಯ ಮಾಡಲಾಗಿದ್ದು, ಅಲ್ಲಿಯ ವಸ್ತುಸ್ಥಿತಿ ಅವಲೋಕಿಸಲಾಗಿದೆ. ಕಂದಾಯ ಇಲಾಖೆಯನ್ನು ಮನೆ ಮನೆಗೆ ತೆಗೆದುಕೊಂಡು ಹೋಗುವಂತೆ, ಬೇರೆ ಬೇರೆ ಇಲಾಖೆಗಳನ್ನು ಮನೆ ಬಾಗಿಲಿಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ. ದಲಿತರ ಕೇರಿಯ ಜನರು ಬಹುತೇಕ ಜಮೀನು, ಸೂರು ಕೊಡುವಂತೆ ಮನವಿ ಮಾಡುತ್ತಿದ್ದು, ಆದಷ್ಟು ಬೇಗ ಪೂರೈಸುತ್ತೇನೆ. ಆಶ್ರಯ ವತಿಯಿಂದ ಜಮೀನು ಕೊಡಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು.
ಇಲ್ಲಿನ ಗ್ರಾಮಸ್ಥರು ಸ್ಮಶಾನಕ್ಕೆ ಬೇಡಿಕೆ ಇಟ್ಟಿದ್ದು, ಇದಕ್ಕಾಗಿ ಇಡೀ ಊರು ಸುತ್ತಿ ಬಂದಿದ್ದೇವೆ. ಬೆಟ್ಟದ ಮೇಲೆ ಜಾಗ ಇದ್ದು, ಹೆಚ್ಚು ಕಲ್ಲು ಇರುವುದರಿಂದ ಶವಗಳನ್ನು ಸುಡಲು ಆಗುವುದಿಲ್ಲ. ಇಲ್ಲಿಯ ಗ್ರಾಮಸ್ಥರಿಗೆ ಜಮೀನು ಕೇಳಿದರೆ ನೀರಾವರಿ ಜಾಗ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ನಿಮ್ಮ ಊರಿಗೆ ಸ್ಮಶಾನ ಬೇಕೆಂದರೆ ನೀವೇ ಜಾಗ ಕೊಡಬೇಕು. ಈ ಹಿಂದೆ ಇಲ್ಲಿರುವ ಸರ್ಕಾರಿ ಶಾಲೆಗೆ ಯಾರೋ ಜಮೀನನ್ನು ದಾನವಾಗಿ ನೀಡಿದ್ದರಿಂದ ಇಂದು ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದುಕೊಳ್ಳುತ್ತಿದ್ದಾರೆ. ಹಾಗೆಯೇ ಜಮೀನು ಸಿದ್ಧ ಮಾಡಿಕೊಂಡು ತಿಳಿಸಿದರೆ ಸ್ಮಶಾನಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಈಗಾಗಲೇ ಇಲ್ಲಿನ ಸರ್ಕಾರಿ ಶಾಲೆಗೆ ಅನುದಾನ ಒದಗಿಸುವುದಾಗಿ ತಿಳಿಸಿದ್ದು, ಹೊಸ ಕಟ್ಟಡ ನಿರ್ಮಿಸಿ ಹಾಗೂ ತಾಲ್ಲೂಕು ಕಚೇರಿಗೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ರೇಣುಕಾಚಾರ್ಯ ಅವರು ಗ್ರಾಮಗಳ ಅಭಿವೃದ್ಧಿಗಾಗಿ 20 ಕೋಟಿ ರೂ. ಅನುದಾನ ತಂದಿದ್ದು. ಗ್ರಾಮದ ಬೆಳವಣಿಗೆಗೆ ಪೂರಕವಾಗುವ ಕೆಲಸ ಮಾಡಿದ್ದಾರೆ ಎಂದು ಶ್ಲ್ಯಾಘಿಸಿದರು.
ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಕೋವಿಡ್ ಬಿಕ್ಕಟ್ಟಿನಿಂದ ಸ್ಥಗಿತಗೊಂಡಿದ್ದ ಗ್ರಾಮ ವಾಸ್ತವ್ಯ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಪುನರಾರಂಭಗೊಂಡಿದೆ. ಈ ಸಂದರ್ಭದಲ್ಲಿ ಸಾವಿರಾರು ಅರ್ಜಿಗಳು ವಿಲೇವಾರಿಯಾಗಿವೆ. ಜಿಲ್ಲಾಡಳಿತ, ತಾಲ್ಲೂಕಾಡಳಿತ ಹಾಗೂ ಎಲ್ಲಾ ಇಲಾಖಾ ಅಧಿಕಾರಿಗಳು ಹಗಲು ರಾತ್ರಿ ಶ್ರಮಿಸಿ ಗ್ರಾಮ ವಾಸ್ತವ್ಯವನ್ನು ರಾಜ್ಯಕ್ಕೆ ಮಾದರಿ ಮತ್ತು ದಿಕ್ಸೂಚಿ ಕಾರ್ಯಕ್ರಮವನ್ನಾಗಿ ಮಾಡಿಕೊಟ್ಟಿದ್ದಾರೆ. ಇಲ್ಲಿಯ ಗ್ರಾಮಸ್ಥರ ಒಗ್ಗೂಡುವಿಕೆಯಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯತ್ ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ತಹಶೀಲ್ದಾರ್ ಬಸವನಗೌಡ ಕೋಟೂರ, ತಾ.ಪಂ ಉಪಕಾರ್ಯನಿರ್ವಹಣಾಧಿಕಾರಿ ರಾಮಭೋವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗಂಗಣ್ಣ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್ ರೇಷ್ಮ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.