ಸಂಕಷ್ಟದಲ್ಲಿರುವ ರೈತರ ನೆರವಿಗೆ ಮಧ್ಯ ಪ್ರವೇಶಿಸಿ

ರೈತ ಸಂಘದ ಸಭೆಯಲ್ಲಿ ಸರ್ಕಾರಕ್ಕೆ ಮನವಿ

ದಾವಣಗೆರೆ, ಜು.12- ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ರಾಷ್ಟ್ರೀಕೃತ, ಖಾಸಗಿ ಬ್ಯಾಂಕುಗಳು ಅಲ್ಲದೇ ಖಾಸಗಿ ಲೇವಾದೇವಿದಾರರು ರೈತರಿಗೆ ಸಾಲ ತೀರಿಸುವಂತೆ ಒತ್ತಡ ಹಾಕುತ್ತಿದ್ದು, ಸಂಕಷ್ಟದಲ್ಲಿರುವ ರೈತರಿಗೆ ದಿಕ್ಕು ತೋಚದಂತಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಸೂಕ್ತ ನಿರ್ದೇಶನ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು, ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ನಗರದ ಎಪಿಎಂಸಿ ಆವರಣದಲ್ಲಿ ಇಂದು ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ರೈತರ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸಲು ತೀರ್ಮಾನಿಸಲಾಗಿದೆ.

ಲಾಕ್‌ಡೌನ್ ದಿನಗಳಲ್ಲಿ ತರಕಾರಿ ಮತ್ತು ಹಣ್ಣು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಪರಿಹಾರದ ಹಣ ಕನ್ನಡಿಯೊಳಗಿನ ಗಂಟಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಈ ಬಗ್ಗೆ ಕೂಲಂಕುಶ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಭತ್ತದ ಬೆಳೆಯು ಸುಮಾರು 2 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, 6 ಲಕ್ಷ ಟನ್ ಉತ್ಪಾದನೆಯಾಗಿದೆ. ಕೇಂದ್ರದ ಎಂಎಸ್‌ಪಿ ದರ 1950 ಇದ್ದರೂ, ರೈತರ ಮಾರಾಟದ ಬೆಲೆ 1450 ರಿಂದ 1500 ಇದೆ. ಇದರಿಂದಾಗಿ ಪ್ರತಿ ಕ್ವಿಂಟಾಲ್‍ಗೆ 500 ರೂ. ನಷ್ಟ ಆಗುತ್ತಿದ್ದು, ಜಿಲ್ಲೆಯೊಂದರಲ್ಲೇ ಸಾವಿರಾರು ಕೋಟಿ ನಷ್ಟ ರೈತರಿಗೆ ಆಗಲಿದೆ. ಅಲ್ಲದೇ ಮೆಕ್ಕೆಜೋಳ ಬೆಳೆಯು 1.50 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಮಳೆ ಅಭಾವದಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಹೇಳಿದರು.

ತುರ್ತಾಗಿ ರೈತರ ಖಾತೆಗೆ ಪರಿಹಾರದ ಹಣ ಜಮಾ ಮಾಡಬೇಕು ಎಂದು ಒತ್ತಾಯಿಸಲಾಗಿದ್ದು, ಜುಲೈ 7ರಂದು ನವಲಗುಂದದ ನರಗುಂದದಲ್ಲಿ ನಡೆಯಲಿರುವ ರೈತ ಹುತಾತ್ಮರ ದಿನಾಚರಣೆಗೆ ಜಿಲ್ಲೆಯಿಂದ 200 ರೈತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಕಬ್ಬಳ ಪ್ರಸಾದ್, ಕಾರ್ಯದರ್ಶಿ ದೂಳೇರ ಗದ್ದಿಗೇಶ್ ಕರೇಕಟ್ಟೆ, ಎಂ.ಪರಶುರಾಮಪ್ಪ, ನಾಗರಕಟ್ಟೆ ಎನ್.ಟಿ. ಜಯನಾಯ್ಕ, ರಾಂಪುರದ ಆರ್.ಜಿ. ಬಸವ ರಾಜ್, ಆರ್. ಶಂಕರನಾಯ್ಕ, ಲಿಂಗರಾಜ ಪಾಮೇನಹಳ್ಳಿ  ಹಾಗು ಇತರರು ಇದ್ದರು.

error: Content is protected !!