ಬ್ಯಾಂಕುಗಳ ನಡುವಿನ ಸ್ಪರ್ಧೆಯಲ್ಲೂ ಲಾಭದಲ್ಲಿ ಅಂಬಾಭವಾನಿ ಬ್ಯಾಂಕ್ ಮುಂಚೂಣಿ

26ನೇ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಹಿರಿಯ ಲೆಕ್ಕಪರಿಶೋಧಕ ಎ. ಕಿರಣ್ ಕುಮಾರ್ ಸಂತಸ

ದಾವಣಗೆರೆ,ಅ.17- ರಾಷ್ಟ್ರೀಕೃತ ಮತ್ತು ಇತರೆ ಬ್ಯಾಂಕುಗಳ ನಡುವಿನ ಸ್ಪರ್ಧೆ ಹಾಗೂ ಕೊರೊನಾ ಅಲೆಯ ಮಧ್ಯೆಯೂ ಶ್ರೀ ಅಂಬಾಭವಾನಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಾಭದಾಯಕದಲ್ಲಿ ಮುನ್ನಡೆದಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಹಿರಿಯ ಲೆಕ್ಕಪರಿ ಶೋಧಕ ಎ. ಕಿರಣ್ ಕುಮಾರ್ ಹರ್ಷ ವ್ಯಕ್ತಪಡಿಸಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಮೊನ್ನೆ ನಡೆದ ಶ್ರೀ ಅಂಬಾಭವಾನಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ 26ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತೀಯ ರಿಸರ್ವ್ ಬ್ಯಾಂಕ್ ಕಠಿಣ ನಿಬಂಧನೆಗಳಲ್ಲೂ ತಮ್ಮ ಬ್ಯಾಂಕ್ ಯಶಸ್ವಿಯಾಗಿ ಮುನ್ನಡೆದಿದೆ ಎಂದು ಹೇಳಿದರು.

2021, ಮಾರ್ಚ್ ಅಂತ್ಯಕ್ಕೆ 2940 ಸದಸ್ಯರಿರುವ ಈ ಬ್ಯಾಂಕ್ 1.51 ಕೋಟಿ ರೂ. ಷೇರು ಬಂಡವಾಳ ಹೊಂದಿದೆ. 19.23 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, ಸದಸ್ಯರ ಅಗತ್ಯಕ್ಕನುಗುಣವಾಗಿ 10.11 ಕೋಟಿ ರೂ. ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ 51.54 ಲಕ್ಷ ರೂ. ಲಾಭ ಗಳಿಸಿದ್ದು, 14 ಲಕ್ಷ ರೂ.ಗಳನ್ನು ಮುಂಗಡವಾಗಿ ಆದಾಯ ತೆರಿಗೆ ಪಾವತಿಸಿರುವುದರಿಂದ 37.54 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಂಕಿ -ಅಂಶಗಳೊಂದಿಗೆ ವಿವರಿಸಿದ ಅವರು, ಬ್ಯಾಂಕ್ ತನ್ನ ಸದಸ್ಯರಿಗೆ ಶೇ. 14 ರಂತೆ ಲಾಭಾಂಶ ನೀಡಲು ತೀರ್ಮಾನಿಸಿದೆ ಎಂದು ಘೋಷಿಸಿದರು.

ಒಟ್ಟಿನಲ್ಲಿ ಸಾರ್ವಜನಿಕರ – ಗ್ರಾಹಕರ ಸಹಕಾರ, ಸದಸ್ಯರ ಪ್ರೋತ್ಸಾಹ, ಸಿಬ್ಬಂದಿ ವರ್ಗದವರ ಶ್ರಮ ಮತ್ತು ಆಡಳಿತ ಮಂಡಳಿ ನಿರ್ದೇಶಕರ ಇಚ್ಛಾಶಕ್ತಿಯಿಂದಾಗಿ ಅನೇಕ ಸಮಸ್ಯೆ ಗಳ ನಡುವೆಯೂ ಶ್ರೀ ಅಂಬಾಭವಾನಿ ಬ್ಯಂಕ್  ಸಮಾಜದಲ್ಲಿ ವಿಶ್ವಾಸಾರ್ಹ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆದುಕೊಳ್ಳಲು ಕಾರಣವಾಗಿದೆ ಎಂದು ಪ್ರತಿಪಾದಿಸಿದ ಕಿರಣ್ ಕುಮಾರ್, ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. 

ಬ್ಯಾಂಕ್ ಉಪಾಧ್ಯಕ್ಷ ಜಿ.ಎಂ. ಪರಶುರಾಮರಾವ್ ಮಾತನಾಡಿ, ತಮ್ಮ ಬ್ಯಾಂಕ್ ಗ್ರಾಹಕರನ್ನು ಆಕರ್ಷಿಸುವಲ್ಲಿ ಮತ್ತು ವಿಶ್ವಾಸ ಮೂಡಿಸುವಲ್ಲಿ ತಾಂತ್ರಿಕ ಹಾಗೂ ಗ್ರಾಹಕರ ಸೇಹಿ ಸ್ವೇವಾ ಸೌಲಭ್ಯವನ್ನು ಒದಗಿಸುವ ನಿಟ್ಚಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ದೂಡಾ ಮಾಜಿ ಅಧ್ಯಕ್ಷರೂ, ಬ್ಯಾಂಕಿನ ಮಾಜಿ ಅಧ್ಯಕ್ಷರೂ, ಹಾಲಿ ಹಿರಿಯ ನಿರ್ದೇಶಕರು ಆದ ಡಿ. ಮಾಲತೇಶರಾವ್ ಜಾಧವ್ ಮಾತನಾಡಿ, ಬ್ಯಾಂಕ್ ಸ್ಥಾಪಿಸಿದ ಮಹನೀಯರ ಸೇವೆಯನ್ನು ಸ್ಮರಿಸಿ, ಅವರ ಆಶೋತ್ತರಗಳನ್ನು ಈಡೇರಿಸುವ ದಿಸೆಯಲ್ಲಿ ಬ್ಯಾಂಕ್ ನಿರ್ವಹಿಸುತ್ತಿರುವ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು. 

ಸಭೆಯ ಕಾರ್ಯಸೂಚಿಯನ್ನು ನಿರ್ದೇಸಕ ಗೋಪಿನಾಥ ಸಾ ಓದಿದರು. ಆಡಳಿತ ಮಂಡಳಿ ತಯಾರಿಸಿದ 26ನೇ ವಾರ್ಷಿಕ ಮಹಾಸಭೆಯ ವರದಿಯನ್ನು ನಿರ್ದೇಶಕ ಡಾ. ತಿಪ್ಪೇಸ್ವಾಮಿ ಏಕಬೋಟೆ ಮಂಡಿಸಿದರು. ಲಾಭ – ನಷ್ಟ ಮತ್ತು ಅಢಾವೆ ಪತ್ರಿಕೆಯ ಮಾಹಿತಿಯನ್ನು ನಿರ್ದೇಶಕರಾದ  ಡಾ. ಎಸ್. ರಜನಿ ಅವರು ಸಭೆಯ ಗಮನಕ್ಕೆ ತಂದರು.

ಲಾಭ ವಿಲೇವಾರಿ ಕುರಿತಂತೆ ನಿರ್ದೇಶಕ ಕೆ.ಎನ್. ಮಂಜೋಜಿರಾವಾ ಗಾಯಕ್‌ವಾಡ್ ಅವರು ಮಾಹಿತಿ ನೀಡಿದರು. ಮುಂಗಡ ಪತ್ರವನ್ನು ಮಂಜೂರು ಮಾಡುವ ವಿಚಾರವನ್ನು ನಿರ್ದೇಶಕ ಬಾಬು ಸಭೆಗೆ ಮಂಡಿಸಿ ಸದಸ್ಯರಿಂದ ಅನುಮೋದನೆ ಪಡೆದರು.

ನಿರ್ದೇಶಕರುಗಳಾದ ಎಂ.ಎಸ್. ವಿಠಲ್, ಮೋಹನ್ ಟಿ. ಏಕಬೋಟೆ, ಡಿ. ವೆಂಕಟೇಶ ಕಾಟೆ, ಎಲ್. ಅಣ್ಣೋಜಿರಾವ್, ಆರ್.ಕೆ. ಆನಂದರಾವ್, ಕು. ಎಂ. ಗೌರಬಾಯಿ, ಶ್ರೀಮತಿ ಗೀತಾ ಮೋಹನ್, ಸಿಎ ರಾಜು ವಿ. ಮಹೇಂದ್ರಕರ್ ಅವರುಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನೂತನ ನಿರ್ದೇಶಕರುಗಳಾಗಿರುವ ಆರ್.ಜಿ. ಸತ್ಯನಾರಾಯಣ, ಎಸ್. ಬಾಬುರಾವ್ ಸಾಳಂಕಿ, ಶಿವಾಜಿರಾವ್, ಜಗನ್ನಾಥ ಎಸ್. ಗಂಜೀಗಟ್ಟಿ,  ಪಿ.ಜೆ. ಪಾಂಡುರಂಗರಾವ್, ಎಂ.ಡಿ. ಗಿರಿಧರ್, ಶ್ರೀಮತಿ ಬಿ.ಎಂ. ಶ್ಯಾಮಲಾ, ಶ್ರೀಮತಿ ಎಸ್.ಅನಿತಾಬಾಯಿ, ವೃತ್ತಿಪರ ನಿರ್ದೇಶಕರಾಗಿರುವ ವಕೀಲ ಎ.ಸಿ.ರಾಘವೇಂದ್ರ ಅವರುಗಳನ್ನು ಸ್ವಾಗತಿಸಲಾಯಿತು.

ಶ್ರೀಮತಿ ಎಂ.ಸಿ. ಮಂಜುಳಾ ಅವರ ಪ್ರಾರ್ಥನೆಯ ನಂತರ ನಿರ್ದೇಶಕ ಅಶೋಕ ರಾಯಭಾಗಿ ಸ್ವಾಗತಿಸಿದರು.

ಬ್ಯಾಂಕಿನ ವ್ಯವಸ್ಥಾಪಕ ನಾಗರಾಜ್ ಗೌಡನಕಟ್ಟೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಹಾಯಕ ವ್ಯವಸ್ಥಾಪಕ ಅನಿಲ್ ಟಿ. ಮಾಳದಕರ್, ಲೆಕ್ಕಾಧಿಕಾರಿ ಕೃಷ್ಣಕಾಂತ್ ಅವರುಗಳು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.

error: Content is protected !!