ವಿದ್ಯಾರ್ಥಿಗಳಿಗೆ ಕಸ್ತೂರಿ ರಂಗನ್ ಆದರ್ಶ ವ್ಯಕ್ತಿ

ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶರಣರ ಮೆಚ್ಚುಗೆ

ಚಿತ್ರದುರ್ಗ, ಅ.17- ಗಗನ ಯಾತ್ರಿಗಳಾಗಬೇಕೆಂಬ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನಿ ಡಾ. ಕಸ್ತೂರಿ ರಂಗನ್ ಬಹುದೊಡ್ಡ ಆದರ್ಶ ವ್ಯಕ್ತಿಗಳಾಗಿದ್ದಾರೆ ಎಂದು  ಮುರುಘಾ ಮಠದ ಶೂನ್ಯ ಪೀಠಾಧ್ಯಕ್ಷರಾದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಇಲ್ಲಿನ ಮುರುಘಾ ಮಠದ ವತಿಯಿಂದ ಇಂದು ಸಂಜೆ ಏರ್ಪಾಡಾಗಿದ್ದ ಮುರುಘಾ ಮಠದ ಪ್ರತಿಷ್ಠಿತ `ಬಸವ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಶರಣರು ಆಶೀರ್ವಚನ ನೀಡಿದರು.

 ವಿದ್ಯಾರ್ಥಿಗಳು ಮೊದಲು ಸಮಾಜ ಮತ್ತು ಪ್ರಕೃತಿ ಎನ್ನುವ ಪುಸ್ತಕವನ್ನು ಓದಬೇಕು.  ನಂತರ ನಿಮ್ಮ ನಿಮ್ಮ ಕ್ಷೇತ್ರಗಳ ಅಧ್ಯಯನ ಮಾಡಬೇಕು ಎಂದು ಶರಣರು ಕಿವಿ ಮಾತು ಹೇಳಿದರು.

ಬಸವಶ್ರೀ ಪ್ರಶಸ್ತಿ ಸಾಮಾಜಿಕ ಸಾಮರಸ್ಯವನ್ನು ಮೂಡಿಸುವಂತದ್ದು, ಅದಕ್ಕೆ ಗಡಿ-ಮಿತಿಗಳಿಲ್ಲ.  ಅದು ಅತ್ಯುತ್ತಮವಾದ ಕೆಲಸ ಮಾಡುತ್ತದೆ.  ಕಸ್ತೂರಿ ರಂಗನ್‍ ಅವರ ಸಂಶೋಧನಾ ಲೇಖನಗಳ ಸಂಖ್ಯೆ 240.  ಅವರ ಸಾಧನೆಗಳಿಗೆ ನೊಬೆಲ್ ಪ್ರಶಸ್ತಿ ಸಿಗುವ ಸಾಧ್ಯತೆಯೂ ದೂರವಿಲ್ಲ.  ಇಂದಿನ ಯುವ ವಿಜ್ಞಾನಿಗಳಿಗೆ ಮಾದರಿಯಾಗಿ ಡಾ.ಕಸ್ತೂರಿ ರಂಗನ್‍ ನಿಲ್ಲುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

2020ನೇ ಸಾಲಿನ ಬಸವ ಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಇಸ್ರೋ ಮಾಜಿ ಅಧ್ಯಕ್ಷರೂ ಆದ ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್, ತಮಗೆ ಬಸವಶ್ರೀ ಪ್ರಶಸ್ತಿ ದೊರೆತಿರುವುದು ನನ್ನ ಸೌಭಾಗ್ಯ ಎಂದು ಹೇಳಿದರು.

ಬಸವಣ್ಣನವರು ಒಬ್ಬ ಗುರುವಾಗಿ, ಸಮಾಜ ಸುಧಾರಕ ಕಾರ್ಯಕ್ಕೆ ಮಹತ್ವ ಮತ್ತು ಗೌರವವನ್ನು ನೀಡಿದವರು.  ಸಮಾಜಕ್ಕೆ ವಚನ ಸಂವಿಧಾನವನ್ನು ನೀಡಿದವರು. ಅನುಭವ ಮಂಟಪದ ಮೂಲಕ ಜಗತ್ತಿಗೆ ಮೊದಲ ಪ್ರಜಾಪ್ರಭುತ್ವದ ಮೌಲ್ಯವನ್ನು ತೋರಿಸಿಕೊಟ್ಟವರು ಎಂದು ತಿಳಿಸಿದರು. 

ಶರಣ ಸಂಸ್ಕೃತಿ ಉತ್ಸವದ ಗೌರವಾಧ್ಯಕ್ಷರಾದ ಶ್ರೀ  ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ವರ್ಣ, ವರ್ಗ ಎಲ್ಲವನ್ನೂ ಒಳಗೊಂಡಿರುವ ಪ್ರಸ್ತುತ ಸಂದರ್ಭದಲ್ಲಿ ಜಾತ್ಯತೀತ ನಿಲುವನ್ನು ತಳೆಯಲು ಎದೆಗಾರಿಕೆ ಬೇಕು.  ಅದು ಮುರುಘಾ ಶರಣರಿಂದ ಮಾತ್ರ ಸಾಧ್ಯ ಎಂದರು.

ಬಸವಣ್ಣನವರು 900 ವರ್ಷಗಳ ಹಿಂದೆಯೇ ಶ್ರೀ ಸಾಮಾನ್ಯನಿಗೆ ಸ್ವಾತಂತ್ರ್ಯವನ್ನು ಕೊಟ್ಟರೆ, ಬ್ರಿಟಿಷರಿಂದ ಸ್ವಾತಂತ್ರ್ಯ ಬಂದು ಕೇವಲ 75 ವರ್ಷಗಳು ಮಾತ್ರ ಕಳೆದಿವೆ.  ಪರಮಪೂಜ್ಯರ ಕ್ರಿಯಾಶೀಲ ಕಾರ್ಯಗಳಿಗೆ ನಮ್ಮ ನೈತಿಕ ಬೆಂಬಲ ಸದಾ ಇರುತ್ತದೆ. ದಲೈ ಲಾಮಾರಿಗೆ ಬಸವಶ್ರೀ ಪ್ರಶಸ್ತಿ ಕೊಟ್ಟ ಸಂದರ್ಭದಲ್ಲಿ ಚೀನಾದಿಂದಲೂ ವಿರೋಧ ವ್ಯಕ್ತವಾಗಿತ್ತು. ಆಗ ಶ್ರೀಮಠದ ಹೆಸರು ದೇಶ ವಿದೇಶಗಳಿಗೂ ಹರಡಿದ್ದು ಸಾಕ್ಷಿಯಾಗಿದೆ ಎಂದು ತಿಳಿಸಿದರು.  

ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥನಂದ ಸ್ವಾಮೀಜಿ ಮಾತನಾಡಿ,  ಕರ್ನಾಟಕ ರಾಜ್ಯದಲ್ಲಿ ಬಹಳ ಹಿಂದಿನಿಂದಲೂ ಮಠಗಳ ಕೊಡುಗೆ ಅಪಾರವಾಗಿದೆ.  ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಮಠಗಳು ಅತ್ಯುನ್ನತ  ಸೇವೆಗಳನ್ನು ಮಾಡುತ್ತಾ ಬಂದಿವೆ ಎಂದರು. 

ಇದೇ ಸಂದರ್ಭದಲ್ಲಿ ಶ್ರೀ ಶಿವಮೂರ್ತಿ ಮುರುಘಾ ಶರಣರು ರಚಿಸಿರುವ `ಜರ್ನಿ ಆಫ್ ಮೈಸ್ಟಿಕ್ ಎಕ್ಸ್‌ಪೀರಿಯನ್ಸ್’ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಬಸವಶ್ರೀ ಪ್ರಶಸ್ತಿ ಪತ್ರವನ್ನು ಡಾ.ಸಿ.ಟಿ.ಜಯಣ್ಣ ಮತ್ತು ಡಾ.ಗೌರಮ್ಮ ವಾಚನ ಮಾಡಿದರು.

ಎಸ್.ಜೆ.ಎಂ.ವಿದ್ಯಾಪೀಠದ ಅಡಿಯಲ್ಲಿನ ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡುತ್ತಿರುವ ಕು. ಐಶ್ವರ್ಯ ಸುಮಾರು 5 ಕಿಲೋ ಮೀಟರ್ ಉದ್ದದ ದಾರದಲ್ಲಿ 17 ಗಂಟೆಗಳಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರ ಭಾವಚಿತ್ರವನ್ನು ರಚಿಸಿ ಶ್ರೀಗಳಿಗೆ ಸಮರ್ಪಿಸಿದರು. 

ಉತ್ಸವದ ಕಾರ್ಯಾಧ್ಯಕ್ಷ ಕೆ.ಎನ್.ನವೀನ್ ಮಾತನಾಡಿದರು. ಶ್ರೀ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಶಿಕ್ಷಣಾಧಿಕಾರಿ ಬಿ.ಸಿದ್ದಪ್ಪ, ಹರ ಚರ ಗುರು ಮೂರ್ತಿಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!