ದಾವಣಗೆರೆ,ಜು.12- ಸಹಕಾರಿ ಬ್ಯಾಂಕುಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸುವಲ್ಲಿ ತನ್ನದೇ ಆದ ಹೆಸರು ಮಾಡಿರುವ ಮಧ್ಯ ಕರ್ನಾಟಕದ ದಾವಣಗೆರೆಯ ಶಿವ ಸಹಕಾರಿ ಬ್ಯಾಂಕ್ ತನ್ನ ಶಾಖೆಯನ್ನು ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಆರಂಭಿಸಿದೆ.
ಮೆಣಸಿನಕಾಯಿಗೆ ದೇಶದ ಭೂಪಟದಲ್ಲಿ ಗುರುತಿಸಿಕೊಂಡಿರುವ ಬ್ಯಾಡಗಿ ನಗರದ ಶ್ರೀ ಬಸವೇಶ್ವರ ನಗರದಲ್ಲಿರುವ ಎಪಿಎಂಸಿ ಹತ್ತಿರದ ಬೂದಿಹಾಳ್ ಮಠ್ ಬಿಲ್ಡಿಂಗ್ ನಲ್ಲಿ ಇಂದು ಏರ್ಪಾಡಾಗಿದ್ದ ಸರಳ ಸಮಾರಂಭದಲ್ಲಿ ಶಿವ ಸಹಕಾರಿ ಬ್ಯಾಂಕ್ ಶಾಖೆ ಕಾರ್ಯಾರಂಭ ಮಾಡಿತು.
ಸಾರ್ವಜನಿಕರು, ಬ್ಯಾಂಕಿನ ಷೇರುದಾರರು, ಗ್ರಾಹಕರು, ಠೇವಣಿದಾರರು, ಗಣ್ಯರು ಮತ್ತು ಹಿತೈಷಿಗಳ ಚಪ್ಪಾಳೆಗಳ ಮಧ್ಯೆ ಬ್ಯಾಡಗಿಯ ಗಜಾನನ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸುರೇಶ್ ಬಿ. ಪಾಟೀಲ್ ಅವರು ಟೇಪು ಕತ್ತರಿಸುವುದರ ಮೂಲಕ ಶಿವ ಬ್ಯಾಂಕ್ ಶಾಖೆಯನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಆಶಯ ನುಡಿಗಳನ್ನಾಡಿದ ಸುರೇಶ್ ಬಿ. ಪಾಟೀಲ್, ಭಾರತೀಯ ರಿಸರ್ವ್ ಬ್ಯಾಂಕಿನ ಕಠಿಣ ನಿಬಂಧನೆಗಳ ನಡುವೆಯೂ ಸಹಕಾರಿ ಬ್ಯಾಂಕುಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಶ್ರಮಿಸುತ್ತಿವೆ ಎಂದು ಉದಾಹರಣೆಗಳೊಂದಿಗೆ ಹೇಳಿದರು.
ಲಾಕರ್ ವಿಭಾಗದ ಉದ್ಘಾಟನೆಯನ್ನು ನೆರವೇರಿಸಿದ ಹಾವೇರಿಯ ಕೈಗಾರಿಕೆ ಮತ್ತು ವಾಣಿಜ್ಯ ಮಹಾಸಂಸ್ಥೆಯ ಮಾಜಿ ಅಧ್ಯಕ್ಷ ಶಿವನಗೌಡ ರಾಜಶೇಖರಗೌಡ ಪಾಟೀಲ್ ಅವರು ಮಾತನಾಡಿ, ಗ್ರಾಹಕರಿಗೆ
ಸ್ಪಂದಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸಿದ್ದಲ್ಲಿ ಯಾವುದೇ ಉದ್ಯಮ ಅಭಿವೃದ್ಧಿಯತ್ತ ಯಶಸ್ಸು ಗಳಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿವ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ, ದಾವಣಗೆರೆಯ ಹಿರಿಯ ವಾಣಿಜ್ಯೋದ್ಯಮಿಗಳೂ ಆದ ಮಾಗನೂರು ಸಂಗಮೇಶ್ವರ ಗೌಡ್ರು ಮಾತನಾಡಿ, ಶಿವ ಸಹಕಾರಿ ಬ್ಯಾಂಕ್ ತನ್ನ ಶಾಖೆಯನ್ನು ಬ್ಯಾಡಗಿಯಲ್ಲಿ ಪ್ರಾರಂಭಿಸುವುದರ ಮೂಲಕ ತನ್ನ ಬ್ಯಾಂಕಿನ ಗ್ರಾಹಕರ ಬಹುದಿನಗಳ ಬೇಡಿಕೆ ಮತ್ತು ಕನಸು ಈಡೇರಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಶಿವ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಐಗೂರು ಸಿ. ಚಂದ್ರಶೇಖರ್, ಗ್ರಾಹಕರ ಸೇವೆಯಲ್ಲಿ 46ನೇ ವರ್ಷದಲ್ಲಿರುವ ಈ ಬ್ಯಾಂಕ್ ದಾವಣಗೆರೆ ಯಲ್ಲಿ ಪ್ರಧಾನ ಕಚೇರಿಯನ್ನೊಳಗೊಂಡಂತೆ 5 ಶಾಖೆಗಳು, ಹರಿಹರ, ಚಿತ್ರದುರ್ಗ ಸೇರಿದಂತೆ, ಒಟ್ಟು 7 ಶಾಖೆಗಳು ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು, ಇದೀಗ ತನ್ನ 8ನೇ ಶಾಖೆಯನ್ನು ಬ್ಯಾಡಗಿಯಲ್ಲಿ ಆರಂಭಿಸಿರುವುದಾಗಿ ತಿಳಿಸಿದರು.
ಸಿರಿಗೆರೆಯ ತರಳಬಾಳು ಬೃಹನ್ಮಠದ ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಆಯೋಜನೆ ಗೊಂಡಿದ್ದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಬ್ಯಾಡಗಿಯ ಗಜಾನನ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಶ್ರೀಮತಿ ಗಂಗಾಂಬಿಕಾದೇವಿ ಮತ್ತು ಇತರರು ಉಪಸ್ಥಿತರಿದ್ದರು.
ಶಿವ ಸಹಕಾರಿ ಬ್ಯಾಂಕ್ ನಿರ್ದೇಶಕರು ಗಳಾದ ದೊಗ್ಗಳ್ಳಿ ಎಂ. ಬಸವರಾಜ್,
ಬಿ.ಎಸ್. ಪ್ರಕಾಶ್ ಬಸ್ತಿಹಳ್ಳಿ, ಕೆ.ಜಿ.ಡಿ. ಪ್ರಭು, ಕೆ.ಪಿ. ಪ್ರದೀಪ್, ಆನೆಕೊಂಡ ಗೌಡ್ರ ಸಿದ್ದಪ್ಪ, ಜಿ.ಪಿ. ವಾಗೀಶಬಾಬು, ಜೆ.ಎಸ್. ಸಿದ್ದಪ್ಪ, ಶ್ರೀಮತಿ ಎಸ್. ವಸಂತ, ಶ್ರೀಮತಿ
ಡಿ. ನಿರ್ಮಲ, ವೃತ್ತಿಪರ ನಿರ್ದೇಶಕರುಗಳಾದ ಈ. ಚಂದ್ರಣ್ಣ, ಎಸ್.ರಾಜಶೇಖರ್, ವ್ಯವಸ್ಥಾ ಪನಾ ಸಮಿತಿ ಸದಸ್ಯರುಗಳಾದ ಎಂ.ಜಿ. ರಾಜಶೇಖರಯ್ಯ, ಎನ್.ಟಿ. ಮಂಜುನಾಥ್, ಬಿ. ಕುಬೇರಪ್ಪ ಅವರುಗಳು ಸಮಾರಂಭಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಬೀಳ್ಕೊಟ್ಟರು.
ಶಿವ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎ.ಆರ್. ಸಿದ್ದರಾಮಪ್ಪ ಅವರು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು. ಶಾಖಾ ವ್ಯವಸ್ಥಾಪಕ ಜಿ.ಎಂ. ನಾಗಪ್ಪ ಕಾರ್ಯಕ್ರಮ ನಿರೂಪಿಸಿದರು.