ಸಂಸದರು ಹರಿಹರದಿಂದ ಹೆಚ್ಚು ಮತ ಪಡೆದಿರುವುದನ್ನು ಮರೆಯದಿರಲಿ

ಸಂಸದ ಸಿದ್ದೇಶ್ವರ ಅವರು ವಿಶ್ವಾಸಕ್ಕೆ ಧಕ್ಕೆ ಉಂಟು ಮಾಡದಿರಲಿ 

– ಶಂಕರ್ ಖಟಾವ್‌ಕರ್, ನಗರಸಭೆ ಸದಸ್ಯರು, ಹರಿಹರ.

ಹರಿಹರ, ಜೂ.12- ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವಂತೆ ಆಗ್ರಹಿಸಿ, ನಗರದ ನಾಗರಿಕ ಹೋರಾಟ ಸಮಿತಿಯಿಂದ ತಹಶೀಲ್ದಾರ್‌ ಅವರಿಗೆ ಗಾಂಧಿ ವೃತ್ತದಲ್ಲಿ ಇಂದು ಮನವಿ  ಅರ್ಪಿಸಲಾಯಿತು.

ಸಮಾಜ ಸೇವಕ ಎನ್.ಹೆಚ್. ಶ್ರೀನಿವಾಸ್ ನಂದಿಗಾವಿ ಮಾತನಾಡಿ,  ಈಗಾಗಲೇ ನಗರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವಂತೆ ಸರ್ಕಾರದ ಗಮನ ಸೆಳೆಯಲು ಮೊದಲ ಹಂತವಾಗಿ ಸಹಿ ಸಂಗ್ರಹ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಮಾರು 10 ಸಾವಿರ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಆಗಮಿಸಿ, ಸಹಿ ಮಾಡುವ ಮೂಲಕ ಬಲ ನೀಡಿದ್ದಾರೆ ಎಂದು ತಿಳಿಸಿದರು.

ನಗರಸಭೆ ಸದಸ್ಯ ಶಂಕರ್ ಖಟಾವ್‌ಕರ್ ಮಾತನಾಡಿ, ಜಿಲ್ಲೆಯ ಸಂಸದರು ಇತ್ತೀಚೆಗೆ ಆರೋಗ್ಯ ಸಚಿವರು ಬಂದಾಗ ಹೇಳಿರುವ ಹೇಳಿಕೆ ಸ್ಥಳೀಯ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ. ಸಂಸದರು ಈ ತಾಲ್ಲೂಕಿನಲ್ಲಿ ಹೆಚ್ಚು ಮತವನ್ನು ಪಡೆದಿದ್ದಾರೆ ಎಂಬುದನ್ನು ಮೊದಲು ಅರಿಯಬೇಕು. ಹರಿಹರಕ್ಕೆ ವೈದ್ಯಕೀಯ  ಕಾಲೇಜು ಒಂದು ವೇಳೆ ಕೈ ತಪ್ಪಿದರೆ, ಹರಿಹರ ತಾಲ್ಲೂಕಿನ ಜನತೆ ನಿಮ್ಮ ಮೇಲೆ ಇಷ್ಟು ವರ್ಷಗಳಿಂದ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಉಂಟಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.

ಮಾಜಿ ದೂಡಾ ಸದಸ್ಯ ಹೆಚ್. ನಿಜಗುಣ ಮಾತನಾಡಿ, 2006 ರಲ್ಲಿ ಸರ್ಕಾರವು ಹರಿಹರ, ದಾವಣಗೆರೆ ಅಭಿವೃದ್ಧಿ ಪ್ರಾಧಿಕಾರ ವನ್ನು ಸ್ಥಾಪಿಸಿ ಅದರಲ್ಲೂ ಸಹ ದಾವಣಗೆರೆಗೆ ಹೆಚ್ಚು ಅನುಕೂಲ ಆಗುವಂತೆ ಮಾಡಿಕೊಂ ಡಿದೆ.  ಸ್ಮಾರ್ಟ್ ಸಿಟಿ ಯೋಜನೆಯಡಿಯ ಅಭಿವೃದ್ಧಿ ಕೆಲಸಗಳೂ ಸಹ ದಾವಣಗೆರೆ ನಗರಕ್ಕೆ ಹೆಚ್ಚು ಆಗಿವೆ ಎಂದು ಹೇಳಿದರು.

ವಕೀಲ ಎಂ. ನಾಗೇಂದ್ರಪ್ಪ, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ
ಮತ್ತಿತರರು ಮಾತನಾಡಿದರು.     

ಈ ಸಂದರ್ಭದಲ್ಲಿ ಸಾಹಿತಿ ಸಿ.ವಿ. ಪಾಟೀಲ್, ನಗರಸಭೆ ಮಾಜಿ ಸದಸ್ಯ ಬಿ.ಕೆ. ಸೈಯದ್ ರೆಹಮಾನ್, ನಾಗರಾಜ್ ಮೆಹರ್ವಾಡೆ, ಸಾಹಿತಿ ಕಲೀಂ ಬಾಷಾ, ಜಿಗಳಿ ಮಂಜುನಾಥ್, ಶಿವಪ್ರಕಾಶ್ ಶಾಸ್ತ್ರಿ, ಮರಿ ಯೋಜಿ ರಾವ್, ರುದ್ರೇಗೌಡ, ಹಲಸಬಾಳು ಬಸವರಾಜಪ್ಪ, ಜಿ.ವಿ. ಪ್ರವೀಣ್, ಸುಚೇತ್ ಪೂಜಾರ್, ಮಹಾಂತೇಶ್, ವಿಜಯ ಕುಮಾರ್ ಬೆಣ್ಣೆ, ಕಿರಣ್,   ಪತ್ರಕರ್ತರಾದ ಬಿ. ವಾಸುದೇವ, ಶೇಖರಗೌಡ, ಎಂ. ಚಿದಾ ನಂದ ಕಂಚಿಕೇರಿ, ಶಾಂಭವಿ, ವಿಶ್ವನಾಥ್, ಮಂಜುನಾಥ್, ಕೀರ್ತಿಕುಮಾರ್, ಸುಬ್ರಹ್ಮಣ್ಯ ನಾಡಿಗೇರ, ಮಂಜುನಾಥ್ ಪೂಜಾರ್, ಹೆಚ್. ಸುಧಾಕರ, ಸುರೇಶ್ ಕುಣೆಬೆಳಕೆರೆ ಮಂಜುನಾಥ್, ಶಿವಪ್ಪ, ನಾಗರಾಜ್ ಹಾಗೂ ಇತರರು ಹಾಜರಿದ್ದರು.  

ಪಿಎಸ್‌ಐ ಸುನೀಲ್ ಬಸವರಾಜ್ ತೆಲಿ ಅವರು ಬಂದೋಬಸ್ತ್ ಮಾಡಿದ್ದರು.

error: Content is protected !!