ದಾವಣಗೆರೆ, ಅ. 15- ಉತ್ತರ ಪ್ರದೇಶದ ಲಖೀಂಪುರದಲ್ಲಿ ನಡೆದ ರೈತರ ಮಾರಣ ಹೋಮ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ, ಉಗ್ರವಾದ ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಮೃತ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ಘೋಷಿಸಬೇಕೆಂದು ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಂಚಾಲಕ ಆವರಗೆರೆ ಹೆಚ್.ಜಿ. ಉಮೇಶ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಜಯದೇವ ವೃತ್ತದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ರೈತ ಹುತಾತ್ಮರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಉದ್ದೇಶಪೂರ್ವಕವಾಗಿ ಕಾರು ಹಾಯಿಸಿ ಕೊಲೆಗೈದಿರುವುದು ಅತ್ಯಂತ ಖಂಡನೀಯ. ಮೃತರ ಅವಲಂಬಿತ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿಯನ್ನು ನೀಡಬೇಕು. ಈ ಘಟನೆಗೆ ಕಾರಣರಾದ ಕೇಂದ್ರ ಸರ್ಕಾರದ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ರೈತರನ್ನು ವಿನಾಕಾರಣ ಕೊಲೆಗೈಯ್ಯುತ್ತಿರುವ ಬಿಜೆಪಿ ಸರ್ಕಾರವನ್ನು ತೊಲಗಿಸಬೇಕು. ಕೇಂದ್ರ ಸಚಿವರು ತಮ್ಮ ಗೂಂಡಾ ಪ್ರವೃತ್ತಿ ಬಿಡಬೇಕು. ಬಿ
ಜೆಪಿ ತನ್ನ ಅನಾಗರಿಕ ಸಂಸ್ಕೃತಿಯಿಂದ ಹೊರಬೇಕು. ರೈತರ ಮತ್ತು ಕಾರ್ಮಿಕರ ಐಕ್ಯತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರಗಳು ಆಳ್ವಿಕೆ ನಡೆಸಬೇಕಾಗಿದೆ ಎಂದರು.
ರೈತ ಮುಖಂಡ ಮಲ್ಲಾಪುರ ದೇವರಾಜ್, ಮಧು ತೊಗಲೇರಿ ಮಾತನಾಡಿದರು. ಇದೇ ವೇಳೆ ಮುಂಬತ್ತಿ ಹಚ್ಚುವ ಮೂಲಕ ಒಂದು ನಿಮಿಷ ಮೌನಾಚರಣೆ ಮಾಡಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಆವರಗೆರೆ ಚಂದ್ರು, ಹೆಗ್ಗೆರೆ ರಂಗಪ್ಪ, ರಮೇಶ್ ಸಿ. ದಾಸರ್, ಇ. ಶ್ರೀನಿವಾಸ್, ಐರಣಿ ಚಂದ್ರು, ಭೀಮಾರೆಡ್ಡಿ, ಸರೋಜಮ್ಮ, ಶಿಲ್ಪ, ಅನಿಲ್ ಕುಮಾರ್, ಕೆ. ನಾಗಪ್ಪ, ಭಾರತಿ, ಮಹಮ್ಮದ್ ಜಿಕ್ರಿಯಾ, ಆದಿಲ್ ಖಾನ್ ಮತ್ತಿತರರು ಭಾಗವಹಿಸಿದ್ದರು.