ದಾವಣಗೆರೆ, ಅ.14- ವಿಜಯದಶಮಿ ಅಂಗ ವಾಗಿ ನಗರದಲ್ಲಿ ಸಾರ್ವಜನಿಕ ವಿಜಯ ದಶಮಿ ಉತ್ಸವ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಶೋಭಾಯಾತ್ರೆ ಸಂಭ್ರಮದಿಂದ ನಡೆಯಿತು.
ಬೇತೂರು ರಸ್ತೆಯಲ್ಲಿನ ಶ್ರೀ ವೆಂಕಟೇಶ್ವರ ವೃತ್ತದಲ್ಲಿ ಬೆಳಿಗ್ಗೆ 11.30 ಗಂಟೆಗೆ ಚಾಮುಂಡೇಶ್ವರಿ ಮೂರ್ತಿಗೆ ಜಡೇಶ್ವರ ಶಾಂತಾಶ್ರಮದ ಶ್ರೀ ಶಿವಾನಂದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಡೊಳ್ಳು ಕುಣಿತ, ನಂದಿಕೋಲು, ಸಮಾಳ, ಗೊಂಬೆಗಳ ಕುಣಿತ, ವಾದ್ಯಗಳು ಸೇರಿದಂತೆ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಜಿಲ್ಲಾಡಳಿತವು ಡಿ.ಜೆ.ಗೆ ಅನುಮತಿ ನೀಡದೇ ಇದ್ದ ಕಾರಣ ಡೊಳ್ಳಿನ ಸದ್ದಿಗೆ ಯುವಕರು ದಣಿ ವರಿಯದೆ ಕುಣಿದರು. ಪ್ರಮುಖ ವೃತ್ತಗಳಲ್ಲಿ ಯುವಕರು ಯಾತ್ರೆಯಲ್ಲಿ ಆಗಮಿ ಸುತ್ತಿದ್ದ ಜನರಿಗೆ ದಾಹ ತಣಿಸಲು ಶರಬತ್ತು, ಮಜ್ಜಿಗೆ, ನೀರು ವಿತರಿಸಲಾಗುತ್ತಿತ್ತು.
ಭಗತ್ಸಿಂಗ್, ಸಾರ್ವಕರ್, ಅಂಬೇಡ್ಕರ್, ಗೋಳ್ವಾಲ್ಕರ್, ಶ್ರೀರಾಮ, ಕನ್ನಿಕಾಪರಮೇಶ್ವರಿ, ದುರ್ಗಾಂಭಿಕೆ, ಆಂಜನೇಯ ಸೇರಿದಂತೆ ವಿವಿಧ ದೇವರ ಭಾವಚಿತ್ರ ಇರುವ ಸ್ತಬ್ಧಚಿತ್ರಗಳು ಮೆರ ವಣಿಗೆಯಲ್ಲಿದ್ದವು. ಜನರು ಕಟ್ಟಡಗಳ ಮೇಲೇರಿ ಮೆರವಣಿಗೆ ವೀಕ್ಷಿಸುತ್ತಿದ್ದರು. ದಾರಿಯುದ್ದಕ್ಕೂ ಕೇಸರಿ ಬಾವುಟಗಳನ್ನು ಕಟ್ಟಲಾಗಿತ್ತು.
ಶೋಭಾಯಾತ್ರೆಯು ವೆಂಕಟೇಶ್ವರ ವೃತ್ತದಿಂದ ಆರಂಭವಾಗಿ ಬಂಬೂಬಜಾರ್ ರಸ್ತೆ, ಹಾಸಬಾವಿ ಸರ್ಕಲ್, ಚೌಕಿಪೇಟೆ ರಸ್ತೆ, ಚಾಮರಾಜ್ ಪೇಟೆ, ವಿಜಯಲಕ್ಷ್ಮಿ ರಸ್ತೆ, ಹಗೇದಿಬ್ಬ ಸರ್ಕಲ್, ದುರ್ಗಾಂಬಿಕಾ ದೇವಸ್ಥಾನ ರಸ್ತೆ, ಹೊಂಡದ ವೃತ್ತ, ಅರುಣಾ ಟಾಕೀಸ್ ರಸ್ತೆಯ ಮೂಲಕ ಪಿಬಿ ರಸ್ತೆ ಸೇರಿ ಶ್ರೀ ಬೀರಲಿಂಗೇಶ್ವರ ಆವರಣ ತಲುಪಿತು.
ಮಹಾನಗರ ಪಾಲಿಕೆ ಮೇಯರ್ ಎಸ್.ಟಿ.ವೀರೇಶ್, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಸಾರ್ವಜನಿಕ ವಿಜಯದಶಮಿ ಸಮಿತಿಯ ಕೆ.ಬಿ.ಶಂಕರನಾರಾಯಣ, ವೈ.ಮಲ್ಲೇಶ್, ಸತೀಶ್ ಪೂಜಾರಿ, ಎನ್.ರಾಜಶೇಖರ್, ಪಾಲಿಕೆ ಸದಸ್ಯರಾದ ಕೆ.ಎಂ. ವೀರೇಶ್, ಆರ್.ಎಲ್.ಶಿವಪ್ರಕಾಶ್, ಶಿವನಗೌಡ ಪಾಟೀಲ್, ಬಿಜೆಪಿ ಮುಖಂಡರಾದ ಶ್ರೀನಿವಾಸ್ ದಾಸಕರಿಯಪ್ಪ, ಪಿ.ಸಿ. ಶ್ರೀನಿವಾಸ್, ಸಂಘಟನೆಗಳ ಮುಖಂಡರಾದ ಜೊಲ್ಲೆ ಗುರು ಮತ್ತಿತರರು ಭಾಗವಹಿಸಿದ್ದರು. ಮುಖಂಡರುಗಳು ಕೇಸರಿ ಶಾಲು, ಕೇಸರಿ ಪೇಟ ತೊಟ್ಟು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ವೆಂಕಟೇಶ್ವರ ವೃತ್ತದಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡುವ ವೇಳೆ ಮುಸ್ಲಿಂ ಮುಖಂಡರು ಆಗಮಿಸಿ ಶುಭಾಶಯ ಕೋರಿದರು.
ನಿಷೇಧದ ನಡುವೆಯೂ ನಡೆದ ಮೆರವಣಿಗೆ: ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಯಾವುದೇ ಮೆರವಣಿಗೆಗಳನ್ನು ನಡೆಸುವಂತಿಲ್ಲ ಎಂದು ಜಿಲ್ಲಾಡಳಿತ ಸೂಚಿಸಿತ್ತು. ಆದಾಗ್ಯೂ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಶೋಭಾಯಾತ್ರೆ ಬಿಗಿ ಪೊಲೀಸ್ ಬಂದೋ ಬಸ್ತ್ ನಡುವೆಯೇ ಜರುಗಿತು. ಅತಿ ಸೂಕ್ಷ್ಮ ಪ್ರದೇಶದಲ್ಲಿ ಸಿಸಿ ಕ್ಯಾಮೆರಗಳನ್ನು ಅಳವಡಿಸಲಾಗಿತ್ತು.