ದಾವಣಗೆರೆ, ಅ. 14 – ಬಾಹ್ಯ ಜಗತ್ತಿನಂತೆೇ ಅಂತರಂಗದಲ್ಲೂ ಒಳಿತು ಹಾಗೂ ಕೆಡುಕಿನ ಸಂಘರ್ಷ ನಿರಂತರವಾಗಿ ನಡೆಯುತ್ತಿರುತ್ತದೆ. ಆಂತರಿಕ ಸಂಘರ್ಷದಲ್ಲಿ ಕೆಡುಕನ್ನು ಕೊಂದು, ಒಳಿತಿನ ಗೆಲುವು ಸಾಧಿಸಿದರೆ ವಿಜಯದಶಮಿ ಅರ್ಥಪೂರ್ಣವಾಗುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್ ವತಿಯಿಂದ ಸಾರ್ವಜನಿಕ ವಿಜಯದಶಮಿ ಮಹೋತ್ಸವದ ಅಂಗವಾಗಿ ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋ ಜಿಸಲಾಗಿದ್ದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಅಂಬುಛೇದನ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಒಳಿತು ಹಾಗೂ ಕೆಡುಕಿನ ನಡುವೆ ನಿರಂತರವಾಗಿ ಮಹಾ ಯುದ್ಧ ನಡೆಯುತ್ತಾ ಬಂದಿದೆ. ಅಂತಿಮವಾಗಿ ಗೆಲ್ಲವುದು ಒಳಿತೇ ಎಂಬುದರ ಸಂಕೇತವಾಗಿ ವಿಜಯ ದಶಮಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಹಿಂದೂ ಜಾಗರಣಾ ವೇದಿಕೆಯ ಮಾತೃ ಸುರಕ್ಷಾ ರಾಜ್ಯ ಸಂಚಾಲಕ ಶಿವಾನಂದ ಬಡಿಗೇರ್ ಪ್ರಧಾನ ಭಾಷಣ ಮಾಡಿ, ರಾಷ್ಟ್ರೀಯ ವಿಚಾರಧಾರೆಗಳನ್ನು ಪ್ರತಿಯೊಬ್ಬರಿಗೂ ಕಲಿಸುವ ಮುಕ್ತ ವಿವಿಯಂತೆ ಇರುವ ಆರ್‌ಎಸ್‌ಎಸ್ ಅನ್ನು ಕೆಲವು ರಾಜಕಾರಣಿಗಳು ಈಗಲೂ ಟೀಕಿಸುತ್ತಿರುವುದು ವಿಷಾದಕರ ಎಂದು ಹೇಳಿದರು.
ಆರ್‌ಎಸ್‌ಎಸ್ ರಾಷ್ಟ್ರೀಯ ವಿಚಾರಧಾರೆಯ ಮುಕ್ತ ವಿವಿ
ರಾಷ್ಟ್ರೀಯ ವಿಚಾರಧಾರೆಗಳನ್ನು ಪ್ರತಿಯೊಬ್ಬರಿಗೂ ಕಲಿಸುವ ಮುಕ್ತ ವಿವಿಯಂತೆ ಇರುವ ಆರ್‌ಎಸ್‌ಎಸ್ ಅನ್ನು ಕೆಲವು ರಾಜಕಾರಣಿಗಳು ಈಗಲೂ ಟೀಕಿಸುತ್ತಿದ್ದಾರೆ. ಮಾಜಿ ಪ್ರಧಾನಿ ನರಸಿಂಹರಾವ್ ಅವರು ಆರ್‌ಎಸ್‌ಎಸ್ ಅನ್ನು ನಿಷೇಧಿಸಿದ್ದರೂ ಅದು ಬೆಳೆದು ನಿಂತಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಮಾತೃ ಸುರಕ್ಷಾ ರಾಜ್ಯ ಸಂಚಾಲಕ ಶಿವಾನಂದ ಬಡಿಗೇರ್ ಹೇಳಿದ್ದಾರೆ. ಸರಸ್ವತಿ ಪೂಜೆ ಮಾಡಿದರೆ ಕೇಸರೀಕರಣ ಎಂದು ಬಿಂಬಿಸಲಾಗುತ್ತಿದೆ. 2025ರ ವೇಳೆಗೆ ಇಡೀ ಜಗತ್ತನ್ನು ಕೇಸರೀಕರಣ ಮಾಡುತ್ತೇವೆ. ಸನಾತನ ಧರ್ಮದಿಂದ ಜಗತ್ತನ್ನು ಆಳಬಹುದು ಎಂದವರು ತಿಳಿಸಿದ್ದಾರೆ.
ಕೊರೊನಾ ನಿರ್ಬಂಧ ಗಾಳಿಗೆ ತೂರಿದರೆ ಕ್ರಮ : ಡಿಸಿ
ಕೊರೊನಾ ನಿರ್ಬಂಧಗಳನ್ನು ಗಾಳಿಗೆ ತೂರಿದರೆ ಕಾನೂನು ಕ್ರಮ ತೆಗೆದುಕೊಳ್ಳುವು ದಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ. ಚರ್ಚುಗಳಲ್ಲಿ ಅಷ್ಟೊಂದು ಜನ ಸೇರಿದ್ದಾರೆ ಎಂದಾಗ ಎಫ್.ಐ.ಆರ್. ಮಾಡಿದ್ದೇವೆ. ಬೇರೆಡೆಯೂ ಸಹ ಇದೇ ರೀತಿ ಘಟನೆ ನಡೆದಾಗ ಕ್ರಮ ತೆಗೆದುಕೊಂಡಿದ್ದೇವೆ. ಕಾನೂನು ಕೈಗೆತ್ತಿಕೊಂಡರೆ ಕ್ರಮ ಕಟ್ಟಿಟ್ಟ ಬುತ್ತಿ. ಕಾನೂನು ಎಲ್ಲರಿಗೂ ಸಮಾನ, ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ನಾವು ತೂಗುತ್ತೇವೆ ಎಂದವರು ತಿಳಿಸಿದ್ದಾರೆ.
ಸ್ನೇಹಿತರ ದಿನ, ಪ್ರೇಮಿಗಳ ದಿನದ ಹೆಸರಿನಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸುವ ಕೆಲಸವಾಗುತ್ತಿದೆ. ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರ ಮತಾಂತರ ಮಾಡಲಾಗುತ್ತಿದೆ. ಲವ್ ಜಿಹಾದ್, ಗೋಹತ್ಯೆ ಹಾಗೂ ಮತಾಂತರಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಠ – ಮಂದಿರಗಳು ರಾಜಾಶ್ರಯದಲ್ಲಿ ನವದುರ್ಗೆಯನ್ನು ಆರಾಧಿಸುತ್ತಿವೆ. ದೇಶದ ಸಂಸ್ಕೃತಿ ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸಾರ್ವಜನಿಕ ವಿಜಯದಶಮಿ ಮಹೋತ್ಸವದ ಸಂಚಾಲಕ ಸತೀಶ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪೌರ ಕಾರ್ಮಿಕರ ಮುಖಂಡರಾದ ನೀಲಗಿರಿಯಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಅವರು ಸ್ವಾಗತಿಸಿದರು. ರೇಖ ಪದಕಿ ಪ್ರಾರ್ಥಿಸಿದರು.