ಕೃಷಿ ಕಾಯ್ದೆ: ಕೇಂದ್ರ ಹಠ ಹಿಡಿದರೆ ರೈತರ ಐಕ್ಯ ಹೋರಾಟ

ರೈತರು ಹಾಗೂ ರೈತ ಸಂಘಟನೆಗಳಿಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಕರೆ

ದಾವಣಗೆರೆ, ಫೆ. 21 – ಕೇಂದ್ರ ಸರ್ಕಾರ ಹಠಮಾರಿತನದ ಧೋರಣೆ ಬಿಟ್ಟು ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯದಿದ್ದರೆ, ರೈತರು ಹಾಗೂ ರೈತ ಸಂಘಟನೆಗಳು ಒಂದು ವೇದಿಕೆ – ಒಂದು ದನಿಯಾಗಿ ಐಕ್ಯ ಹೋರಾಟ ಮಾಡಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಕರೆ ನೀಡಿದ್ದಾರೆ.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ನಗರದ ನಾಯಕ ವಿದ್ಯಾರ್ಥಿ ನಿಲಯದ ವಾಲ್ಮೀಕಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ §ಕೃಷಿ ಮಸೂದೆಗಳ ಕುರಿತ ಸಂವಾದ ಕಾರ್ಯಕ್ರಮ¬ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೇಂದ್ರ ಸರ್ಕಾರ ವಿವೇಚನೆಯಿಂದ ವರ್ತಿಸಬೇಕು, ಕಾಯ್ದೆಗಳ ಕುರಿತು ರೈತರ ಜೊತೆ ಚರ್ಚಿಸಬೇಕು. ರೈತರ ಭದ್ರತೆಯಿಂದ ದೇಶದ ಭದ್ರತೆ  ಎಂಬುದನ್ನು ತಿಳಿಯಬೇಕು. ಕೆಲವೇ ಕಾರ್ಪೊರೇಟ್‌ಗಳ ಹಿತರಕ್ಷಣೆಗೆ ಸರ್ಕಾರ ಮುಂದಾಗಬಾರದು ಎಂದವರು ಕಿವಿಮಾತು ಹೇಳಿದರು.

ರೈತರ ಹೋರಾಟ ಸರ್ಕಾರವನ್ನೇ ಬದಲಿಸಬಲ್ಲದು ಎಂಬುದನ್ನು ರಾಜ್ಯದ ನರಗುಂದ ಹೋರಾಟ ತೋರಿಸಿದೆ. ಕಾಯ್ದೆಗಳನ್ನು ವಾಪಸ್ ಪಡೆಯದಿದ್ದರೆ ಐಕ್ಯ ಚಳುವಳಿ ಕಟ್ಟಲು ರೈತರು ಮುಂದಾಗಬೇಕು. ಇದರಲ್ಲಿ ರೈತ ಸಂಘಟನೆಗಳು, ಮುಖಂಡರು, ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಹಾಗೂ ಯುವಜನರು ಭಾಗಿಯಾಗಬೇಕು ಎಂದವರು ಹೇಳಿದರು.

ಕೇಂದ್ರದ ಕೃಷಿ ಕಾಯ್ದೆಗಳು ಎ.ಪಿ.ಎಂ.ಸಿ.ಯನ್ನು ಪರೋಕ್ಷವಾಗಿ ಮುಚ್ಚಿಸುತ್ತವೆ. ಗುತ್ತಿಗೆ ಕೃಷಿಗೆ ದಾರಿ ಮಾಡಿಕೊಟ್ಟು ಆಹಾರ ಭದ್ರತೆಗೆ ಧಕ್ಕೆ ತರಲಿವೆ. ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಕಪ್ಪು ಹಣ ಹೊಂದಿರುವವರು, ಭೂಬ್ಯಾಂಕ್ ಸ್ಥಾಪಿಸುವವರು ಹಾಗೂ ರಿಯಲ್ ಎಸ್ಟೇಟ್‌ದಾರರು ರೈತರ ಜಮೀನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎ.ಐ.ಟಿ.ಯು.ಸಿ. ಕಾರ್ಯಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ, ರೈತರು ಹಾಗೂ ಕಾರ್ಮಿಕರ ಮೇಲೆ ದೌರ್ಜನ್ಯ ನಡೆದರೆ ಕಿಚ್ಚು ತಡೆಯಲು ಆಗುವುದಿಲ್ಲ. ಈ ಕಿಚ್ಚಿಗೆ ಸಿಲುಕಿದ ಯಾವುದೇ ಸರ್ಕಾರ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ ವಹಿಸಿದ್ದರು.

ವೇದಿಕೆಯ ಮೇಲೆ ರಾಜ್ಯ ಕಬ್ಬು ಬೆಲೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್, ರೈತ ಕೃಷಿ ಕಾರ್ಮಿಕರ ಸಂಘಟನೆಯ ರಾಜ್ಯಾಧ್ಯಕ್ಷ ಸುನೀತ್ ಕುಮಾರ್, ಮಾನವ ಹಕ್ಕುಗಳ ವೇದಿಕೆಯ ಕಾರ್ಯದರ್ಶಿ ಎಲ್.ಹೆಚ್. ಅರುಣ್ ಕುಮಾರ್, ಪೀಪಲ್ಸ್ ಲಾಯರ್ಸ್ ಗಿಲ್ಡ್ ಅಧ್ಯಕ್ಷ ಅನೀಸ್ ಪಾಷ,  ವಕೀಲ ಎನ್.ಎಂ. ಆಂಜನೇಯ ಗುರೂಜಿ, ವಕೀಲರ ಸಂಘದ ಪದಾಧಿಕಾರಿ ಮಂಜುಳ, ಆಮ್ ಆದ್ಮಿ ಪಾರ್ಟಿಯ ಆದಿಲ್ ಖಾನ್ ಉಪಸ್ಥಿತರಿದ್ದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ರೈತ ಕೃಷಿ ಕಾರ್ಮಿಕ ಸಂಘಟನೆ ಜಿಲ್ಲಾ ಸಂಚಾಲಕ ಅಣಬೇರು ತಿಪ್ಪೇಸ್ವಾಮಿ ಸ್ವಾಗತಿಸಿದರು. ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಹೆಚ್.ಜಿ. ಉಮೇಶ್ ನಿರೂಪಿಸಿದರೆ, ಎಐಕೆಎಸ್ ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿ ಆವರಗೆರೆ ಬಾನಪ್ಪ ವಂದಿಸಿದರು.

error: Content is protected !!