ದಾವಣಗೆರೆ, ಅ.12- ನಗರ ಹಾಗೂ ಸುತ್ತ ಮುತ್ತ ಮಂಗಳವಾರ ಸಂಜೆ ಮಿಂಚು-ಗುಡುಗು ಸಹಿತ ಭಾರೀ ಮಳೆ ಸುರಿಯಿತು.
ಸಂಜೆ ಸುಮಾರು 5.15ರ ವೇಳೆಗೆ ಆರಂಭವಾದ ಮಳೆ 6.45ರವರೆಗೂ ಧಾರಾಕಾರವಾಗಿ ಸುರಿಯಿತು. ನಂತರ ಕೆಲವೇ ನಿಮಿಷಗಳ ಬಿಡುವು ನೀಡಿ ಮತ್ತೆ ಆರಂಭವಾಯಿತು. ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಪಿ.ಬಿ. ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ನೀರು ರಭಸವಾಗಿ ಹರಿಯತೊಡಗಿತ್ತು. ಎಪಿಎಂಸಿ ಮೇಲ್ಸೇತುವೆಯ ಎರಡೂ ಬದಿಗಳ ರಸ್ತೆಗಳಲ್ಲಿ ಎರಡು ಅಡಿಗಳಷ್ಟು ನೀರು ಹರಿಯುತ್ತಿತ್ತು. ಭಾರತ್ ಕಾಲೋನಿಯ ದೊಡ್ಡ ಚರಂಡಿ ತುಂಬಿ ರಸ್ತೆಯಲ್ಲಿ ರಭಸವಾಗಿ ನೀರು ಹರಿಯುತ್ತಿದ್ದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಶಂಕರ್ ವಿಹಾರ ಬಡಾವಣೆ, ನೀರಾವರಿ ಇಲಾಖೆಯ ಕ್ವಾರ್ಟ್ರಸ್‌ಗಳಲ್ಲಿ ನೀರು ತುಂಬಿಕೊಂಡಿತ್ತು. ಪಿ.ಬಿ. ರಸ್ತೆಯ ಅಗ್ನಿಶಾಮಕ ದಳದ ಕಛೇರಿ ಮುಂಭಾಗದ ರಸ್ತೆಯಲ್ಲಿ ನೀರು ಹೆಚ್ಚಾಗಿ ನಿಂತು. ಕೆಲ ಕಾಲ ವಾಹನ ಸವಾರರು ಪರದಾಡಬೇಕಾಯಿತು. ವಸಂತ ರಸ್ತೆಯ ರೈಲ್ವೇ ಕೆಳಸೇತುವೆ ಹಾಗೂ ಹೊಸ ಕೋರ್ಟ್ ರಸ್ತೆ ಬಳಿಯ ರೈಲ್ವೇ ಕೆಳಸೇತುವೆಯಲ್ಲಿ ನೀರು ತುಂಬಿಕೊಂಡಿತ್ತು. ಹಲವಾರು ಬಡಾವಣೆಗಳ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.