ಸಚಿವ ಸಂಪುಟ ವಿಸ್ತರಣೆ ಸಿಎಂ ನಿಲುವಿಗೆ ಬದ್ಧ : ಭೈರತಿ

ಸಚಿವ ಸಂಪುಟ ವಿಸ್ತರಣೆ ಸಿಎಂ ನಿಲುವಿಗೆ ಬದ್ಧ : ಭೈರತಿ - Janathavaniದಾವಣಗೆರೆ, ಜು.12 – ಸಚಿವ ಸಂಪುಟ ವಿಸ್ತರಣೆ ಮಾಡುವುದು ಬಿಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಸಂಪುಟ ವಿಸ್ತರಣೆ ಸಂಬಂಧ ಚರ್ಚೆ ನಡೆಯಲಿದೆ. ಮುಖ್ಯಮಂತ್ರಿಗಳ ನಿಲುವಿಗೆ ನಾವೆಲ್ಲಾ ಬದ್ಧರಾಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಇಂದು ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮಾತು ಕೊಟ್ಟಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡಲಿದ್ದಾರೆ. ನನ್ನ ವಿಚಾರದಲ್ಲೂ ಮುಖ್ಯಮಂತ್ರಿಗಳು ಮಾತುಕೊಟ್ಟಂತೆ ನಡೆದುಕೊಂಡರು. ಶಾಸಕ ರಮೇಶ್ ಜಾರಕಿಹೊಳಿ ಅವರ ಪ್ರಕರಣ ಕೂಡ ಅಂತಿಮ ಹಂತಕ್ಕೆ ಬಂದಿದೆ. ಅವರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಮನವಿ

ಶಿವಮೊಗ್ಗ ಹಾಲು ಒಕ್ಕೂಟದಿಂದ ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಆಗಬೇಕೆನ್ನುವುದಕ್ಕೆ ನನ್ನ ಸಹ ಮತ ಇದೆ. ಈ ಸಂಬಂಧ ಸಹಕಾರ ಖಾತೆ ಸಚಿವರಿಗೆ ಈಗಾಗಲೇ ಮನವಿ ಮಾಡಲಾ ಗಿದ್ದು, ಸಾಧಕ – ಬಾಧಕಗಳ ಕುರಿತು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.

ಪ್ರತ್ಯೇಕ ಹಾಲು ಒಕ್ಕೂಟವಾದರೆ ದಾವಣಗೆರೆ ಜಿಲ್ಲೆಯಲ್ಲಿ ರೈತರು ಮತ್ತು ಹೈನುಗಾರಿಕೆಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ. ಇದಕ್ಕೆ ನಾನು ಕೈಜೋಡಿಸುತ್ತೇನೆ, ಜಿಲ್ಲಾ ಉಸ್ತುವಾರಿ ಸಚಿವನಾಗಿ ಇದಕ್ಕೆ ಸಹಮತ ವ್ಯಕ್ತಪಡಿಸುತ್ತೇನೆಂದರು.

ಬಿಜೆಪಿ ಸರ್ಕಾರ ಶೇ. 25 ಪರ್ಸೆಂಟ್ ಕಮೀಷನ್ ಸರ್ಕಾರ ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಭೈರತಿ, ವಿರೋಧ ಪಕ್ಷದ ನಾಯಕರಾಗಿ ಏನೋ ಒಂದು ಹೇಳಬೇಕು ಹೇಳುತ್ತಿದ್ದಾರೆ. ಅವರ ಆರೋಪಗಳು ಆಧಾರ ರಹಿತ ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಳಿ ವಯಸ್ಸಿನಲ್ಲೂ ಕೂಡ ಸುಮಾರು 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಸ್ಪಂದಿಸುತ್ತಿದ್ದಾರೆ. ಇದು ಜನರಿಗೂ ಗೊತ್ತಿದೆ. ನಾನೂ ಕೂಡ ಸಿದ್ದರಾಮಯ್ಯ ಅವರ ಜೊತೆ ಇದ್ದೆ. ಅವರು ಮುಂಜಾನೆ ಎಷ್ಟು ಹೊತ್ತಿಗೆ ಎದ್ದು ಮನೆಯಿಂದ ಹೊರಬಂದು ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದರು ಎನ್ನುವುದನ್ನು ಅರ್ಥ ಮಾಡಿಕೊಂಡು ನಂತರ ಬೇರೆಯವರಿಗೆ ಪಾಠ ಮಾಡಲಿ ಎಂದು ಟಾಂಗ್ ಕೊಟ್ಟರು.

error: Content is protected !!