ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಜಗಳೂರಿನ ಮಾಜಿ ಶಾಸಕ ರಾಜೇಶ್ ವ್ಯಾಕುಲತೆ
ಜಗಳೂರು, ಜು.12- ಬೇರೆ ತಾಲ್ಲೂಕಿ ನಿಂದ ಬಂದವರು ಈ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಲಿ ಶಾಸಕರು, ನನ್ನ ಆರೋಗ್ಯದ ಬಗ್ಗೆ ಹಬ್ಬಿಸಿರುವ ವದಂತಿ, ಅಪಪ್ರಚಾರ ಮಾಡಿರುವುದು, ಅವರ ಸಣ್ಣತನದ ಮಾತು, ನನ್ನ ಮನಸ್ಸಿಗೆ ನೋವು ತಂದಿದೆ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಕಾಂಗ್ರೆಸ್ ಪಕ್ಷದಿಂದ ತಮ್ಮ ಹುಟ್ಟುಹಬ್ಬದ ಅಂಗವಾಗಿ ಇಂದು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಅವರು ಮಾತನಾಡಿದರು.
ಸಿರಿಗೆರೆ ಶ್ರೀಗಳ ಆಶೀರ್ವಾದ: ಕೊರೊನಾ ಮಹಾಮಾರಿಗೆ ತುತ್ತಾಗಿ ಬ್ಲಾಕ್ ಫಂಗಸ್‍ನ ಪರಿಣಾಮ ನಾನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೇರಿದೆ. ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರಿಂದ ಸಿರಿಗೆರೆ ಶ್ರೀಗಳಿಗೆ ಮಾಹಿತಿ ತಿಳಿಸಿದ ಕೂಡಲೇ ಸಿರಿಗೆರೆ ಶ್ರೀಗಳು ನನಗೆ ಫೋನ್ ಮುಖಾಂತರ ಸಂಪರ್ಕಿಸಿ, ದುಬೈನ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ನೀಡಲು ನೆರವಾದರು ಎಂದು ಸ್ಮರಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹಕಾರದಿಂದ ಜಗಳೂರು ವಿಧಾನಸಭಾ ಕ್ಷೇತ್ರದ ಜನತೆಯ ಆಶೀರ್ವಾದದಿಂದ ಗುಣಮುಖನಾಗಿ ನಿಮ್ಮ ಮುಂದೆ ಬಂದಿದ್ದೇನೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ ನನ್ನ ಆರೋಗ್ಯ ವಿಚಾರಿಸಿದ್ದಾರೆ. ನಿಜಕ್ಕೂ ನಾನು ಪುಣ್ಯಭೂಮಿಯಲ್ಲಿ ಜನಿಸಿದ್ದೇನೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ ಸಾಗುತ್ತಿದೆ. ಪಕ್ಷ ಸಂಘಟನೆಯೊಂದಿಗೆ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ಪ್ರಯತ್ನ ನಡೆಸಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತ ಖಚಿತವಾಗಿದೆ. ಕಾರ್ಯಕರ್ತರು ನಿಷ್ಠರಾಗಿ, ಪ್ರಾಮಾಣಿಕತೆಯಿಂದ ಶ್ರಮಿಸ ಬೇಕು ಎಂದು ರಾಜೇಶ್ ಕರೆ ನೀಡಿದರು.
ಹೆಲಿಕಾಪ್ಟರ್ ಪ್ರಯಾಣ: ಕಾಂಗ್ರೆಸ್ ಕಾರ್ಯಕರ್ತರ, ಅಭಿಮಾನಿಗಳ ಒತ್ತಡಕ್ಕೆ ಮಣಿದು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿ, ಜಗಳೂರಿನಲ್ಲಿ 56 ನೇ ಹುಟ್ಟು ಹಬ್ಬವನ್ನು ಅಪಾರ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರುಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ರಾಜೇಶ್ ಆಚರಿಸಿಕೊಂಡರು.
ಮಾಜಿ ಶಾಸಕ ಎಚ್.ಪಿ. ರಾಜೇಶ್ ಹುಟ್ಟು ಹಬ್ಬದಲ್ಲಿ ಸಾಮಾಜಿಕ ಅಂತರವಿರದೇ ಕೊರೊನಾ ಲೆಕ್ಕಿಸದೇ ಅಭಿಮಾನಿಗಳು, ಕಾರ್ಯಕರ್ತರು ಮುಗಿಬಿದ್ದು, ತಮ್ಮ ನಾಯಕನಿಗೆ ಶುಭ ಹಾರೈಸುತ್ತಿದ್ದದ್ದು ಕಂಡು ಬಂದಿತು. ಇದೇ ವೇಳೆ ಮಹಾತ್ಮ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಕಾರ್ಯಕರ್ತರು ಅಭಿಮಾನಿಗಳು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಅರಸಿಕೆರೆ ಬ್ಲಾಕ್ ಅಧ್ಯಕ್ಷ ಕಮ್ಮತ್ತಹಳ್ಳಿ ಮಂಜುನಾಥ್, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್, ಬ್ಲಾಕ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿಗೌಡ, ಸಮಾಜ ಸೇವಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಎಸ್ಟಿ ಘಟಕದ ಅಧ್ಯಕ್ಷ ಬಿ. ಲೋಕೇಶ್, ಮುಖಂಡರಾದ ಭೈರೇಶ್, ಶಿವಕುಮಾರ್ ಸ್ವಾಮಿ, ಬಸವಾಪುರ ರವಿಚಂದ್ರ, ವೆಂಕಟೇಶ್, ಮಂಜುನಾಥ್, ರಮೇಶ್, ರೇವಣ್ಣ, ಗಿರೀಶ್ ಒಡೆಯರ್, ಮಹಿಳಾ ಕಾಂಗ್ರೆಸ್‌ನ ಸಾವಿತ್ರಮ್ಮ, ಕೆಂಚಮ್ಮ ಇನ್ನಿತರರಿದ್ದರು.