ರೈಲ್ವೇ ಕೆಳಸೇತುವೆ ನೀರಿನ ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ

ಪಾಲಿಕೆ ಮುಂಭಾಗದ ರೈಲ್ವೇ ಕೆಳಸೇತುವೆಯ ಬಹುದಿನಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಉದ್ದೇಶಿಸಲಾಗಿದ್ದು, ಸುಮಾರು 50 ಲಕ್ಷ ರೂ. ವಚ್ಚದಲ್ಲಿ ಸೆನ್ಸಾರ್ ಮೋಟಾರ್‌ಗಳು, ಕೆಟಲ್ ಟ್ರ್ಯಾಪ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಇನ್ನು 15 ದಿನದೊಳಗೆ ಕಾಮಗಾರಿ ಮುಗಿದು ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ. 

– ಎಸ್.ಟಿ. ವೀರೇಶ್, ಮೇಯರ್ ಮಹಾನಗರ ಪಾಲಿಕೆ

ದಾವಣಗೆರೆ ಹಳೆಯ ಹಾಗೂ ಹೊಸ ಭಾಗಗಳ ಸಂಚಾರ ಸಂಪರ್ಕದ ಮುಖ್ಯಪಾತ್ರ ಧಾರಿಯಾಗಿದ್ದ ರೈಲ್ವೇ ನಿಲ್ದಾಣದ ಪಕ್ಕದ ಅಂಡರ್ ಬ್ರಿಡ್ಜ್‌ ಸಮಸ್ಯೆಗೆ ಅಂತೂ ಇಂತೂ ಮುಕ್ತಿ ದೊರೆಯುವ ಕಾಲ ಸನ್ನಿಹಿತವಾಗಿದೆ.

ಕೇವಲ ಒಂದು ತಾಸು ಮಳೆ ಸುರಿದರೂ ಸಾಕಿತ್ತು. ಮೂರ್ನಾಲ್ಕು ಅಡಿಗಳಷ್ಟು ನೀರು ಈ ಕೆಳ ಸೇತುವೆಯಲ್ಲಿ ತುಂಬಿಕೊಂಡು ಸಂಚಾರ ಪೂರ್ತಿ ಅಸ್ತವ್ಯಸ್ತವಾಗುತ್ತಿತ್ತು. ದಾವಣಗೆರೆಯ ಹಳೆಯ ಭಾಗದಿಂದ ಹೊಸ ನಗರಕ್ಕೆ ಅಥವಾ ಹೊಸ ನಗರದಿಂದ ಹಳೇ ಭಾಗಕ್ಕೆ ತುರ್ತಾಗಿ ಹೋಗಬೇಕೆಂದರೆ ಸುತ್ತುವರೆದು ಹೋಗಬೇಕಿತ್ತು. 

ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ಬೇಕೆನ್ನುವುದು ನಗರದ ನಾಗರಿಕರ ಹಲವು ದಶಕಗಳ ಕನಸಾಗಿತ್ತು. ಆದರೆ ಇದೀಗ ಕನಸು ನನಸಾಗುವ ಹಂತದಲ್ಲಿದೆ. ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಅವರ ಮುತುವರ್ಜಿಯಿಂದ ಶಾಶ್ವತ ಕಾಮಗಾರಿ ಆರಂಭಗೊಂಡಿದೆ.

ಇನ್ನು ಮುಂದೆ ಮಳೆ ಬಂದರೆ ಕೆಳ ಸೇತುವೆಯಡಿ ನೀರು ನಿಲ್ಲದಂತೆ ಕ್ರಮ ವಹಿಸಲಾಗುತ್ತಿದೆ. ಇದಕ್ಕಾಗಿ 10 ಹೆಚ್‌ಪಿ ಮೋಟರ್‌ಗಳು ಹಾಗೂ  3 ಸೆನ್ಸಾರ್ ಗಳನ್ನು ಅಳವಡಿಸಿದ್ದು, ನೀರು ತುಂಬಿದಾಕ್ಷಣ ಮೋಟರ್‌ಗಳು ಸ್ವಯಂ ಚಾಲಿತಗೊಳ್ಳಲಿವೆ. 

ಮಂಡಿಪೇಟೆ ಬಳಿಯ ಈಗಾಗಲೇ ಸ್ಮಾರ್ಟ್ ಸಿಟಿ ಕಾಮಗಾರಿಯಡಿ ಮಾಡಲಾಗಿ ರುವ ಮುಖ್ಯ ಡ್ರೈನೇಜ್‌ಗೆ ನೀರು ಹರಿದು ಹೋಗಲಿದೆ.  ಪ್ಲಾಸ್ಟಿಕ್ ಹೊರತುಪಡಿಸಿ, ಉಳಿದ ಕಸಕಡ್ಡಿಗಳನ್ನು ತುಂಡರಿಸಿ ಡ್ರೈನೇಜ್‌ಗೆ ಹರಿಸಲಾಗುವುದು ಎಂದು  ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಕೆಳ ಸೇತುವೆಯ ಎರಡೂ ತುದಿಗಳಿಂದ ಬರುವ ನೀರು ಕೆಳಗೆ ಸಾಗಲು ಎರಡೂ ಭಾಗದ ರಸ್ತೆಗಳಲ್ಲೂ ಸುಮಾರು 60 ಮೀಟರ್ ಉದ್ದದ ಕಬ್ಬಿಣದ ಕೆಟಲ್ ಟ್ರ್ಯಾಪ್ ಅಳವಡಿಸಲಾಗುತ್ತಿದೆ. ಅಲ್ಲದೇ ರಸ್ತೆಯ ಮಧ್ಯೆಯೂ ಸಹ 3 ಕೆಟಲ್ ಟ್ರ್ಯಾಪ್‌ ಅಳವಡಿಸಲಾಗುತ್ತಿದೆ. ಅದಕ್ಕೆ ಲಗತ್ತಾಗಿ ರಸ್ತೆ ಕಾಂಕ್ರೀಟೀಕರಣಗೊಳ್ಳಲಿದೆ. 

ಆಗಸ್ಟ್ ತಿಂಗಳಲ್ಲಿ ಈ ಶಾಶ್ವತ ಪರಿಹಾರದ ಕಾಮಗಾರಿ ಆರಂಭಗೊಂಡಿದ್ದು, ಇನ್ನು 10-15 ದಿನಗಳಲ್ಲಿ ಮುಗಿಯಲಿದೆ. ಕೆಟಲ್ ಟ್ರ್ಯಾಪ್ ಅಳವಡಿಕೆ ನಂತರ ಸಿಮೆಂಟ್ ಮಾಡಿದಾಗ ಕ್ಯೂರಿಂಗ್‌ಗೆ ಕೆಲ ದಿನಗಳ  ಬೇಕಾಗುತ್ತವೆ ಎನ್ನುತ್ತಾರೆ ಅಧಿಕಾರಿಗಳು.

ಒಟ್ಟಿನಲ್ಲಿ ಈ ತಿಂಗಳಾಂತ್ಯಕ್ಕೆ ದಾವಣಗೆರೆಯ ಮುಖ್ಯ ಸಮಸ್ಯೆಗಳಲ್ಲೊಂದಾಗಿದ್ದ ಕೆಳ ಸೇತುವೆ ಸಮಸ್ಯೆಗೆ ಮುಕ್ತಿ ದೊರೆಯುವ ಆಶಾಭಾವನೆ ನಾಗರಿಕರಲ್ಲಿದೆ.

ಇದೇ ರೀತಿ ಅಶೋಕ ರಸ್ತೆ ರೈಲ್ವೇ ಕ್ರಾಸಿಂಗ್ ಸಮಸ್ಯೆಗೂ ಶಾಶ್ವತ ಮುಕ್ತಿ ದೊರಕಲಿ. ಅಲ್ಲಿಯ ವರೆಗಾದರೂ ಶೀಘ್ರ ಅಶೋಕ ರಸ್ತೆ ದುರಸ್ತಿ ಪಡಿಸಲಿ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

error: Content is protected !!