ದಾವಣಗೆರೆ, ಅ.11- ಮನೆ ಮನೆಗೂ ಹೋಗಿ ಜಾಗೃತಿ ಮೂಡಿಸಿದರೂ ಕೂಡ ಅನೇಕ ಜನರು ತಮ್ಮ ತಪ್ಪು ಕಲ್ಪನೆಯಿಂದ ಲಸಿಕೆ ಪಡೆಯಲು ಈಗಲೂ ಹಿಂಜರಿಯುತಿದ್ದಾರೆ. ವಾಸ್ತವ ಸತ್ಯವನ್ನು ತಿಳಿಸುವ ಸಲುವಾಗಿ ಮತ್ತು ಇಡೀ ನಗರವನ್ನು ಜಾಗೃತಿಗೊಳಿಸುವ ಸಲುವಾಗಿ ಅ.11 ರಿಂದ 13 ರವರಗೆ ಮೂರು ದಿನಗಳ ಕಾಲ ವಿಶೇಷ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ನಗರದ ಗಡಿಯಾರ ಕಂಬ ವೃತ್ತದಲ್ಲಿ ಜಿಲ್ಲಾಡಳಿತ, ಮಹಾನಗರಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ವಿಶೇಷ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಗೆ ಸುಮಾರು 12 ಲಕ್ಷ ಕೋವಿಡ್ ಲಸಿಕೆ ನೀಡುವ ಗುರಿ ನೀಡಲಾಗಿತ್ತು. ಈಗಾಗಲೇ ಸುಮಾರು 9.40 ಲಕ್ಷ ಲಸಿಕೆ ನೀಡಲಾಗಿದೆ. ಇನ್ನು ಸುಮಾರು 3 ಲಕ್ಷ ಜನರಿಗೆ ಮೊದಲ ಹಂತದ ಲಸಿಕೆ ಹಾಗೂ 1.66 ಲಕ್ಷ ಜನರಿಗೆ 2 ನೇ ಡೋಸ್ ಲಸಿಕೆ ನೀಡುವುದು ಬಾಕಿ ಇದೆ. ಇದರಲ್ಲಿ ಬಹುಪಾಲು ಹಳೆ ದಾವಣಗೆರೆ ಭಾಗದಲ್ಲಿನ ಹೆಚ್ಚಿನ ಜನರು ಲಸಿಕೆ ಪಡೆಯಲು ಹಿಂಜರಿ ಯುತ್ತಿದ್ದಾರೆ. ಆದ್ದರಿಂದ ವಿಶೇಷವಾಗಿ ಈ ಭಾಗದಲ್ಲಿ ಲಸಿಕಾ ಜಾಗೃತಿ ಹಮ್ಮಿಕೊಳ್ಳ ಲಾಗಿದೆ ಎಂದರು.
ಅ.13 ರವರೆಗೆ ಪ್ರತಿದಿನ ಕನಿಷ್ಠ 30 ರಿಂದ 40 ಸಾವಿರ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ ಲಸಿಕಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ನಗರದಲ್ಲಿ ಸುಮಾರು 60 ರಿಂದ 70 ಲಸಿಕಾ ಕೇಂದ್ರ ಗಳನ್ನು ತೆರೆಯಲಾಗಿದೆ ಸಾರ್ವಜನಿಕರು ತಮ್ಮ ಹತ್ತಿರದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಪಡೆಯಬೇಕು ಎಂದರು.
ಲಸಿಕೆ ಪಡೆದರೆ ಮಕ್ಕಳಾಗುವುದಿಲ್ಲ ಎಂಬುದು ತಪ್ಪು ಕಲ್ಪನೆ. ಲಸಿಕೆ ಪಡೆದರೆ ಕೋವಿಡ್ ಬಂದರೂ ಸಾವಿನ ಸಂಭಾವ್ಯತೆಯನ್ನು ಶೇ.95 ರಷ್ಟು ಯಶಸ್ವಿಯಾಗಿ ತಡೆಯಬಹುದು. ಈಗಾಗಲೇ ಮುಸಲ್ಮಾನ ಧರ್ಮಗುರುಗಳ ಸಭೆ ಮಾಡಿ ಮಸೀದಿಗಳಲ್ಲಿ ಆಜಾನ್ ಸಮಯದಲ್ಲಿ ಕೋವಿಡ್ ಲಸಿಕೆ ಪಡೆಯುವಂತೆ ಸೂಚಿಸಬೇಕು ಮತ್ತು ಭಿತ್ತಿ ಪತ್ರಗಳನ್ನು ಉರ್ದು ಭಾಷೆಯಲ್ಲಿ ಮುದ್ರಿಸಿ ಮಸೀದಿಗಳ ಗೋಡೆ ಮತ್ತು ಅಂಗಡಿಗಳ ಮುಂದೆ ಸಾರ್ವಜನಿಕರಿಗೆ ಕಾಣುವಂತೆ ಅಂಟಿಸಬೇಕು ಎಂದು ಮನವಿ ಮಾಡಲಾಗಿದೆ ಎಂದರು.
ಅಭಿಯಾನದಲ್ಲಿ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಮಮತ ಹೊಸಗೌಡರ್ ಅವರು `ಲಗಾಯೇಂಗೆ ಲಗಾಯೇಂಗೆ ಕೋವಿಡ್ ಲಸಿಕೆ ಲಗಾಯೇಂಗೆ’ ಘೋಷಣೆ ಕೂಗುತ್ತಾ ಗಡಿಯಾರ ಕಂಬ, ಕಾಳಿಕಾದೇವಿ ರಸ್ತೆ, ಅಹಮದ್ ನಗರ, ಅರಳೀಮರ ವೃತ್ತ ಹಾಗೂ ಆಜಾದ್ ನಗರಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಾ ಸಾಗಿದರು.
ಡಿವೈಎಸ್ಪಿ ಬಿ.ಎಸ್.ಬಸವರಾಜ್, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಅಮಿತ್ ಬಿದರಿ, ಆರ್ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.