ದೇವಸ್ಥಾನಕ್ಕೆ ಗೋಪುರ – ಕಳಸಗಳು ಬಹುಮುಖ್ಯ

ಹರಪನಹಳ್ಳಿ ತಾಲ್ಲೂಕಿನ ಕಾರ್ಯಕ್ರಮದಲ್ಲಿ ಹಿರೇಹಡಗಲಿಯ ಶ್ರೀ ಅಭಿನವ  ಹಾಲಸ್ವಾಮೀಜಿ

ಹರಪನಹಳ್ಳಿ, ನ.11- ಪ್ರತಿಯೊಬ್ಬರಿಗೂ ಮೊಬೈಲ್ ಎಷ್ಟು ಅವಶ್ಯಕತೆ ಇದೆಯೋ, ಅದೇ ರೀತಿ  ದೇವಸ್ಥಾನಗಳಿಗೆ ಗೋಪುರ-ಕಳಸಗಳು  ಅಷ್ಟೇ ಪ್ರಮುಖವಾದವು ಎಂದು ಹಿರೇಹಡಗಲಿಯ ಶ್ರೀ ಅಭಿನವ  ಹಾಲಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ನಿನ್ನೆ ಏರ್ಪಾಡಾಗಿದ್ದ ಶ್ರೀ ಹೊನ್ನತ್ತೆಮ್ಮ ದೇವಿ ಗೋಪುರ ಹಾಗೂ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. 

 ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿ ಜಾತಿ ಹಾಗೂ  ರಾಜಕೀಯದ ಗೀಳು ಜಾಸ್ತಿ ಆಗಿದ್ದು, ಚುನಾವಣೆ ಮುಗಿಯುವ ತನಕ ರಾಜಕೀಯ ಮಾಡಬೇಕು. ರಾಜಕೀಯವೇ ಜೀವನವಾಗಬಾರದು ಎಂದು  ಶ್ರೀಗಳು ಕಿವಿಮಾತು ಹೇಳಿದರು.

ಕಂಚಿಕೇರಿಯಿಂದ ಹಳ್ಳಿಕೇರಿಯವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಇಲ್ಲಿಯ ಶಾಸಕ ಹಾಗೂ ಸಂಸದರಿಗೆ ರಸ್ತೆ ಸರಿಪಡಿಸುವಂತೆ ನಾನೇ ಒತ್ತಾಯ ಮಾಡುತ್ತೇನೆ ಎಂದು ಶ್ರೀಗಳು ತಿಳಿಸಿದರು.

ನಿಚ್ಚವ್ವನಹಳ್ಳಿಯ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಾತನಾಡಿ, ಹಳ್ಳಿಕೇರಿಯ ಜನರು ಶ್ರಮ ಜೀವಿಗಳು, ಕಾಯಕದಿಂದ ಮುಖ್ಯವಾಹಿನಿಗೆ ಬಂದಿದ್ದಾರೆ. ಇಲ್ಲಿ ಮಳೆ ಬೆಳೆ ಸಮೃದ್ಧಿಯಾಗಿ, ಸುಖ, ಶಾಂತಿ ತರಲಿ ಎಂದು ಹರಸಿದರು.

ಎಂ.ಪಿ. ಪ್ರಕಾಶ್‌ ಸಮಾಜ ಮುಖಿ ಟ್ರಸ್ಟ್‌ ಅಧ್ಯಕ್ಷರಾದ ಎಂ.ಪಿ.  ವೀಣಾ ಮಹಾಂತೇಶ್‌  ಚರಂತಿಮಠ್ ಮಾತನಾಡಿ, ಮನುಷ್ಯನ ದಿನನಿತ್ಯದ ಜಂಜಾಟದಲ್ಲಿ ಮಾನಸಿಕ ಶಾಂತಿ, ನೆಮ್ಮದಿಗಾಗಿ  ದೇವಸ್ಥಾನಗಳು ಬೇಕೇ ಬೇಕು ಎಂದು ಹೇಳಿದರು. 

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರೆಡ್ಡಿ ಶಾಂತಕುಮಾರ್‌ ಮಾತನಾಡಿದರು. ಮಾನಿಹಳ್ಳಿಯ ಶ್ರೀ ಮಳೆಯೋಗೀಶ್ವರ ಸ್ವಾಮೀಜಿ, ಹಿರೇಹಡಗಲಿಯ ಶ್ರೀ ಸಣ್ಣ ಹಾಲಸ್ವಾಮೀಜಿ, ಆಡವಿ ಹಳ್ಳಿಯ ಶ್ರೀ ವೀರಗಂಗಾಧರ ಹಾಲಸ್ವಾಮೀಜಿ. ಎನ್.ಎಂ. ವೀರಯ್ಯ, ವೇ. ಸಿದ್ಧಲಿಂಗ ಸ್ವಾಮೀಜಿ ಕಂಚಿಕೇರಿಯ ಸಿದ್ಧಲಿಂಗಸ್ವಾಮಿ ಸಾನ್ನಿಧ್ಯ ವಹಿಸಿದ್ದರು.

ಕಂಚಿಕೇರಿ ಗ್ರಾ.ಪಂ. ಅಧ್ಯಕ್ಷರಾದ ಹನುಮಂತಮ್ಮ, ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ,  ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್. ರಾಜಪ್ಪ,  ಗ್ರಾ.ಪಂ. ಸದಸ್ಯರಾದ ರೆಡ್ಡಿ ಹೇಮನಗೌಡ, ಕೆ. ಮಂಜಪ್ಪ, ನೀಲಮ್ಮ, ವಿದ್ಯಾಶ್ರೀ ಬಸವರಾಜ, ಮುಖಂಡರಾದ  ಶಶಿಧರ ಪೂಜಾರ್, ಬೇಲೂರು ಅಂಜಪ್ಪ, ಎಂ.ಎನ್. ಕೊಟ್ರಯ್ಯ, ರೆಡ್ಡಿ ಚಂದ್ರಶೇಖರ್‌, ಅಂಜಿನಪ್ಪ, ಎ.ಕೆ. ಹಾಲಪ್ಪ , ಕುಮಾರ್‌ ಇನ್ನಿತರರಿದ್ದರು.

error: Content is protected !!