ದಾವಣಗೆರೆ, ಅ.11- ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ನಗರದ ಜಿಲ್ಲಾಡಳಿತ ಭವನದ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಸಲ್ಲಿಸಿದರು.
ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್ಗೆ 3500 ರೂ. ನಿಗದಿ ಮಾಡಬೇಕು ಮತ್ತು ಖರೀದಿ ಕೇಂದ್ರ ತೆರೆಯುವಂತೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆಗ್ರಹಿಸಿದರು.
ಕೇಂದ್ರ ಸರ್ಕಾರ ಈಗಾಗಲೇ ಮೆಕ್ಕೆ ಜೋಳಕ್ಕೆ 1860 ರೂ. ಬೆಂಬಲ ಬೆಲೆ ನಿಗದಿ ಪಡಿಸಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ರಸಗೊ ಬ್ಬರ, ಔಷಧಿ, ಡೀಸೆಲ್, ಪೆಟ್ರೋಲ್ ಬೆಲೆ ಮತ್ತು ಕೃಷಿ ಕಾರ್ಮಿಕರ ಕೂಲಿ ಕೂಡ ಹೆಚ್ಚಾ ಗಿದೆ. ವ್ಯವಸಾಯದ ಖರ್ಚು ಜಾಸ್ತಿಯಾಗಿ ರೈತರು ನಷ್ಟ ಅನುಭವಿಸುವಂತಾಗಿದೆ ಎಂದರು.
ದೇಶಾದ್ಯಂತ ಕಳೆದ 10 ತಿಂಗಳಿಂದ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದರೂ, ಕೇಂದ್ರ ಸರ್ಕಾರ ಗಮನಹರಿಸುತ್ತಿಲ್ಲ. ಈಗ ಕೇಂದ್ರ ಸರ್ಕಾರ 1860 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಖರೀದಿದಾರರು 1200 ರಿಂದ 1400 ರೂ. ನಂತೆ ಖರೀದಿಸುತ್ತಿದ್ದಾರೆ. ಇದರಿಂದ ಪ್ರತಿ ಕ್ವಿಂಟಾಲ್ ಮೆಕ್ಕೆಜೊಳಕ್ಕೆ 460 ರಿಂದ 660 ರೂ.ಗಳವರೆಗೆ ನಷ್ಟವಾಗುತ್ತದೆ. 100 ಕ್ವಿಂಟಾಲ್ ಬೆಳೆದ ರೈತನಿಗೆ 66000 ಸಾವಿರ ರೂ. ನಷ್ಟವಾಗುತ್ತದೆ.ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳಾದ ಗಂಗನಕಟ್ಟೆ ಷಣ್ಮುಖಪ್ಪ, ಹುಚ್ಚವ್ವನಹಳ್ಳಿ ಪ್ರಕಾಶ್, ಗುಮ್ಮನೂರು ಬಸವರಾಜ್, ಕೆಂಚಮ್ಮನಹಳ್ಳಿ ಹನುಮಂತಪ್ಪ, ತುಂಬಿಗೆರೆ ನಾಗರಾಜ್, ಶಿವಪುರ ಕೃಷ್ಣಮೂರ್ತಿ, ಆಲೂರು ಪರಶುರಾಮ್, ಕಾಡಜ್ಜಿ ಪ್ರಕಾಶ್, ನೀರ್ಥಡಿ ಭೀಮಣ್ಣ, ಕೋಲ್ಕುಂಟೆ ಹುಚ್ಚೆಂಗೆಪ್ಪ, ಕಿತ್ತೂರು ಹನುಮಂತಪ್ಪ, ಸಿದ್ದಪ್ಪ ನಾಯಕ ಮತ್ತಿತರರು ಪಾಲ್ಗೊಂಡಿದ್ದರು.