ದಾವಣಗೆರೆ, ಏ. 22 – ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿರ್ಬಂಧಗಳ ಮಾರ್ಗಸೂಚಿ ಅನ್ವಯ ವಾರದ ದಿನಗಳಾದ ಸೋಮವಾರದಿಂದ ಶುಕ್ರವಾರದವರೆಗೆ ಕಟ್ಟಡ ನಿರ್ಮಾಣ, ಕೃಷಿ ಹಾಗೂ ಕೈಗಾರಿಕೆ ಸೇರಿದಂತೆ ಕೆಲ ಚಟುವಟಿಕೆಗಳಿಗೆ ಅನುಮತಿ ಇದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಮೇ 4ರವರೆಗೆ ಜಾರಿಯಲ್ಲಿರುವ ವಾರದ ದಿನಗಳ ನಿರ್ಬಂಧ ಮಾರ್ಗಸೂಚಿಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿರುವ ಅವರು, ಕಟ್ಟಡ ಕಾಮಗಾರಿಗಳಿಗೆ ಅನು ಮತಿ ಇದೆ. ಕಟ್ಟಡ ಕಾಮಗಾರಿ ಗಳಿಗೆ ಅಗತ್ಯವಾದ ಕಬ್ಬಿಣ, ಸಿಮೆಂಟ್, ಗಾಜು, ಮರ, ಪೇಂಟ್ ಇತ್ಯಾದಿ ಅಂಗಡಿಗಳು ಹಾಗೂ ಸಾಮಿಲ್ಗಳಂತಹ ಘಟಕಗಳು ಕಾರ್ಯ ನಿರ್ವಹಿಸ ಬಹುದು ಎಂದರು.
ಅದೇ ರೀತಿ ಕೃಷಿ ಹಾಗೂ ಅದಕ್ಕೆ ಸಂಬಂಧಿತ ಎಲ್ಲ ಚಟು ವಟಿಕೆಗಳಿಗೆ ಕಂಟೈನ್ಮೆಂಟ್ ವಲಯದ ಹೊರಗೆ ಅನುಮತಿ ಇದೆ. ಎಲ್ಲಾ ಕೈಗಾರಿಕಾ ಘಟಕಗಳು ಹಾಗೂ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸಬಹುದು ಎಂದು ಹೇಳಿದರು.
ವಾರದ ದಿನಗಳಲ್ಲಿ ದಿನಸಿ ಅಂಗಡಿಗಳು, ಪಡಿತರ ಅಂಗಡಿಗಳು, ಆಹಾರ ಸಂಸ್ಕರಣಾ ಘಟಕಗಳು, ಹಣ್ಣು – ತರಕಾರಿ, ಹಾಲು, ಮಾಂಸ, ಮೀನು ಹಾಗೂ ಮೇವಿನ ಪೂರೈಕೆಗೆ ಅನುಮತಿ ಇದೆ. ಸಗಟು ತರಕಾರಿ, ಹಣ್ಣು, ಹೂವುಗಳ ಮಾರಾಟಕ್ಕೂ ಅನುಮತಿ ಇದೆ.
ಹೋಟೆಲ್ ಹಾಗೂ ರೆಸ್ಟೋರೆಂಟ್ಗಳು ರಾತ್ರಿ 9 ಗಂಟೆಯವರೆಗೆ ಪಾರ್ಸಲ್ ಸೇವೆ ನೀಡಬಹುದು. ರಾತ್ರಿ 9 ಗಂಟೆಯ ಒಳಗೆ ಆಹಾರ ಪಡೆಯುವ ಸ್ವಿಗ್ಗಿ – ಜೊಮ್ಯಾಟೋ ಮುಂತಾದ ಆಹಾರ ಪೂರೈಕೆ ಸಂಸ್ಥೆಗಳು ರಾತ್ರಿ 11ರವರೆಗೆ ಕಾರ್ಯ ನಿರ್ವಹಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಜಿಲ್ಲಾಡಳಿತದಿಂದ ಗುರುತಿನ ಚೀಟಿ ಇಲ್ಲ
ರಾಜ್ಯ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿ ಪ್ರಕಾರ, ಸಾರ್ವಜನಿಕರು ಸಂಚಾರಕ್ಕಾಗಿ ಜಿಲ್ಲಾಡಳಿತದಿಂದ ಪ್ರತ್ಯೇಕ ಗುರುತಿನ ಚೀಟಿ ಪಡೆಯುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸ್ಪಷ್ಟಪಡಿಸಿದ್ದಾರೆ. ವಾರದ ದಿನಗಳಲ್ಲಿ ಚಟುವಟಿಕೆಗಳಿಗೆ ಅವ ಕಾಶ ಪಡೆದಿರುವ ಕೈಗಾರಿಕೆಗಳು ಮತ್ತಿತರೆ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ ಯೊಂದೇ ಸಾಕು ಎಂದವರು ಹೇಳಿದ್ದಾರೆ.
ವಾರಾಂತ್ಯದ ಕರ್ಫ್ಯೂನಲ್ಲಿ ಮದ್ಯ ಮಾರಾಟ ಇಲ್ಲ
ದಾವಣಗೆರೆ, ಏ. 22 – ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿರ್ಬಂಧ ಮಾರ್ಗ ಸೂಚಿ ಅನ್ವಯ ವಾರಾಂತ್ಯದ ಕರ್ಫ್ಯೂ ಅವಧಿ ಯಲ್ಲಿ ಮದ್ಯದ ಅಂಗಡಿಗಳು ಬಂದ್ ಆಗಿ ರಲಿವೆ. ವಾರದ ದಿನಗಳಾದ ಸೋಮ ವಾರ ದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಯ ವರೆಗೆ ಮದ್ಯದಂಗಡಿಗಳು ಪಾರ್ಸಲ್ ರೂಪದಲ್ಲಿ ಮಾತ್ರ ಮದ್ಯ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಇಂಟರ್ನೆಟ್ ಸೇವೆಗೆ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಅಂಗಡಿಗಳನ್ನು ತೆರೆಯಲೂ ಅನುಮತಿ ನೀಡಲಾಗಿದೆ ಎಂದು ಬೀಳಗಿ ತಿಳಿಸಿದ್ದಾರೆ.
ಬ್ಯಾಂಕು, ವಿಮೆ, ಮುದ್ರಣ – ಎಲೆಕ್ಟ್ರಾನಿಕ್ ಮಾಧ್ಯಮ, ಇ – ಕಾಮರ್ಸ್ ಸರಕು ಪೂರೈಕೆ, ಗೋದಾಮು ಸೇವೆ, ಖಾಸಗಿ ಭದ್ರತಾ ಸೇವೆಗಳಿಗೆ ಅನುಮತಿ ಇದೆ. ಕಟಿಂಗ್ ಶಾಪ್, ಬ್ಯೂಟಿ ಪಾರ್ಲರ್ ಹಾಗೂ ಸೆಲೂನ್ಗಳು ಕೊರೊನಾ ಸಮಯೋಚಿತ ವರ್ತನೆಯೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದವರು ಹೇಳಿದ್ದಾರೆ.
ಲಸಿಕೆಗೆ ಬೇಡಿಕೆ : ಲಸಿಕೆ ನೀಡಲು ಆರಂಭಿಸಿದ ಮೊದಲ ದಿನಗಳಲ್ಲಿ ಕೆಲವರಷ್ಟೇ ಲಸಿಕೆ ಪಡೆಯಲು ಬರುತ್ತಿದ್ದರು. ಆಗ ಲಸಿಕೆ ಹೆಚ್ಚು ಪೋಲಾಗುತ್ತಿತ್ತು. ಈಗ ಪ್ರತಿದಿನ 5-6 ಸಾವಿರದಷ್ಟು ಲಸಿಕೆ ಬೇಡಿಕೆ ಇದೆ. ಹೆಚ್ಚು ಜನರು ಲಸಿಕೆ ಪಡೆಯುತ್ತಿರುವುದರಿಂದ ಪೋಲಾಗುವುದು ಕಡಿಮೆ ಆಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
80 ಲಕ್ಷ ರೂ. ದಂಡ : ಜಿಲ್ಲೆಯಲ್ಲಿ ಮಾಸ್ಕ್ ಹಾಕದೇ ಇರುವವರ ವಿರುದ್ದ ಒಟ್ಟು 48,882 ಪ್ರಕರಣಗಳನ್ನು ದಾಖಲು ಮಾಡಿ ಏ.21 ರವರೆಗೆ 80,73,837 ದಂಡ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಸಂಚಾರಕ್ಕೆ ಅಡ್ಡಿಯಲ್ಲ : ಲಾಕ್ಡೌನ್ ಹಾಗೂ ಈಗ ಜಾರಿಗೆ ತಂದಿರುವ ಮಾರ್ಗಸೂಚಿಗಳ ನಡುವಿನ ವ್ಯತ್ಯಾಸದ ಬಗ್ಗೆ ತಿಳಿಸಿದ ಎಸ್ಪಿ ಹನುಮಂತರಾಯ, ಈ ಬಾರಿ ಜನರ ಸಂಚಾರದ ಮೇಲೆ ನಿರ್ಬಂಧ ಇಲ್ಲ. ಆದರೆ, ಜನರು ಅಗತ್ಯವಾಗಿರುವ ಸಂದರ್ಭದಲ್ಲಿ ಮಾತ್ರ ಪ್ರಯಾಣ ಮಾಡಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್, ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.