ನೀರಾವರಿ ಯೋಜನೆಗಳ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಿ : ಸಂಸದ ಸಿದ್ದೇಶ್ವರ

ನೀರಾವರಿ ಯೋಜನೆಗಳ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಿ : ಸಂಸದ ಸಿದ್ದೇಶ್ವರ - Janathavaniದಾವಣಗೆರೆ, ಏ. 22- ಜಿಲ್ಲೆಯ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಪಂಪ್‍ಹೌಸ್‍ಗಳು, ಡೆಲಿವರಿ ಚೇಂಬರ್‍ಗಳು, ಎಲೆಕ್ಟ್ರಿಕಲ್ ಸಬ್‍ಸ್ಟೇಷನ್‍ಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ನಿರ್ಮಿಸಬೇಕಿರುವ ವಿದ್ಯುತ್ ಟವರ್‍ಗಳ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಭೂಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.

ಸಾಸ್ವೆಹಳ್ಳಿ ಸೇರಿದಂತೆ ವಿವಿಧ ಏತ ನೀರಾವರಿ ಯೋಜನೆಗಳ ಕುರಿತು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅಡೆತಡೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.

ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗಾಗಿ ಹೊನ್ನಾಳಿ ತಾಲ್ಲೂಕಿನಲ್ಲಿ 6 ಎಕರೆ 3 ಗುಂಟೆ ಹಾಗೂ ಚನ್ನಗಿರಿ ತಾಲ್ಲೂಕಿನಲ್ಲಿ 9 ಎಕರೆ 14 ಗುಂಟೆ ಸೇರಿದಂತೆ 15 ಎಕರೆ 17 ಗುಂಟೆ ಭೂ ಸ್ವಾಧೀನ ಮಾಡಿಕೊಳ್ಳಲಾಗುತ್ತದೆ.  ಈಗಾಗಲೇ ಸಾಸ್ವೆಹಳ್ಳಿ ಗ್ರಾಮದಲ್ಲಿ 3 ಎಕರೆ 3 ಗುಂಟೆಗೆ ಸಂಬಂಧಿಸಿದಂತೆ ಭೂಮಿ ಕಳೆದುಕೊಳ್ಳುವ ರೈತರಿಗೆ ಕಳೆದ ವರ್ಷ ಮೇ ತಿಂಗಳಿನಲ್ಲಿ ಶೇ. 50 ರಷ್ಟು ಪರಿಹಾರ ಹಣ ಪಾವತಿಸಲಾಗಿದೆ.  

ಅದೇ ರೀತಿ ಚನ್ನಗಿರಿ ತಾಲ್ಲೂಕು ಚಕ್ಕಲಿ ಗ್ರಾಮದ ಬಳಿ ಪಂಪ್‍ಹೌಸ್, ಎಲೆಕ್ಟ್ರಿಕಲ್ ಸಬ್‍ಸ್ಟೇಷನ್, ಅಪ್ರೋಚ್ ರಸ್ತೆಗೆ ಅಗತ್ಯವಿರುವ ಒಟ್ಟು 7 ಎಕರೆ ಭೂಮಿಗೆ ಸಂಬಂಧಿಸಿದಂತೆ ಕಳೆದ ವರ್ಷ ಮೇ ತಿಂಗಳಿನಲ್ಲಿ ಶೇ. 50 ರಷ್ಟು ಪರಿಹಾರ ಹಣ ಪಾವತಿಸಲಾಗಿದೆ.  ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮುತ್ತುಗದೂರು ಬಳಿ ಪಂಪ್‍ಹೌಸ್ ಹಾಗೂ ವಿದ್ಯುತ್ ಸಬ್‍ಸ್ಟೇಷನ್, ಚಿತ್ರದುರ್ಗ ತಾಲ್ಲೂಕು ಮದಕರಿ ಪುರ ಮತ್ತು ದೊಡ್ಡಿಗನಾಳ್ ಗ್ರಾಮಗಳ ಬಳಿ ಡೆಲಿವರಿ ಚೇಂಬರ್, ಅಪ್ರೋಚ್ ರಸ್ತೆಗಾಗಿ  ಸದ್ಯ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ನಿಗಮಕ್ಕೆ ಹಸ್ತಾಂತರ ಮಾಡುವ ಕಾರ್ಯ ಬಾಕಿ ಇದೆ.  ಭೂ ಸ್ವಾಧೀನ ಕಾರ್ಯವನ್ನು ವಿಳಂಬಕ್ಕೆ ಅವಕಾಶವಿಲ್ಲದಂತೆ ಶೀಘ್ರ ಪೂರ್ಣಗೊಳಿಸಬೇಕು ಎಂದರು.

ಹೊನ್ನಾಳಿ ತಾಲ್ಲೂಕಿನಲ್ಲಿ ಪಂಪ್‍ಹೌಸ್-1 ರ ಬಳಿ ನಿರ್ಮಿಸಲು ಉದ್ದೇಶಿಸಿರುವ ಎಲೆಕ್ಟ್ರಿಕಲ್ ಸಬ್‍ಸ್ಟೇಷನ್‍ಗೆ ವಿದ್ಯುತ್ ಸಂಪರ್ಕಕ್ಕಾಗಿ  49 ವಿದ್ಯುತ್ ಟವರ್‍ಗಳನ್ನು ನಿರ್ಮಿಸಬೇಕಿದ್ದು, 48 ಎಕರೆ ಭೂಮಿಯನ್ನು ಗುರುತಿಸಲಾಗಿದೆ.  ಇದಕ್ಕಾಗಿ  ರೈತರ  ಭೂಮಿ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಪರಿಹಾರ ಮೊತ್ತ ನಿಗದಿಪಡಿಸುವುದು ಬಾಕಿ ಇದೆ. ಹೊಳಲ್ಕೆರೆ ತಾಲ್ಲೂಕು ಸಾಸಲು ಗ್ರಾಮದ ಬಳಿಯ ಸಬ್‍ಸ್ಟೇಷನ್‍ಗೆ 20 ಟವರ್‍ಗಳ ನಿರ್ಮಾಣಕ್ಕೆ ಸರ್ವೇ ಪೂರ್ಣಗೊಂಡಿದೆ ಎಂದರು.

ಕೆರೆಬಿಳಚಿ ಗ್ರಾಮದ ಬಳಿ ವಿದ್ಯುತ್ ಸಬ್‍ಸ್ಟೇಷನ್‍ಗೆ ವಿದ್ಯುತ್ ಸಂಪರ್ಕಿಸಲು 4.50 ಕಿ.ಮೀ. ಮಾರ್ಗದಲ್ಲಿ 20 ವಿದ್ಯುತ್ ಟವರ್ ನಿರ್ಮಾಣಕ್ಕೆ ಜಕ್ಕಲಿ, ಸೋಮಲಾಪುರ, ಕೆರೆಬಿಳಚಿ ಗ್ರಾಮಗಳ ಸರ್ವೇ ಕಾರ್ಯವನ್ನು ಚನ್ನಗಿರಿ ತಹಸೀಲ್ದಾರರು ತ್ವರಿತವಾಗಿ ಮಾಡಿಸಬೇಕು ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಬಾಕಿ ಇರುವ ಸರ್ವೇ ಕಾರ್ಯವನ್ನು ಆಯಾ ತಹಸೀಲ್ದಾರರು ಪೂರ್ಣಗೊಳಿಸಬೇಕು. ಪರಿಹಾರ ಮೊತ್ತದ ದರವನ್ನು ಒಂದು ವಾರದೊಳಗೆ ನಿಗದಿಪಡಿಸಲಾಗುವುದು ಎಂದು ಭರವಸೆ ನೀಡಿದರು.  

ರಾಜನಹಳ್ಳಿ ಏತ ನೀರಾವರಿ ಯೋಜನೆಯಲ್ಲಿ ಮೊದಲನೆ ಹಂತದಲ್ಲಿ ಹರಿಹರ ತಾಲ್ಲೂಕಿನ ಹಲಸಬಾಳು ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ನೀರೆತ್ತಿ 28 ಕಿ.ಮೀ. ದೂರದಲ್ಲಿರುವ ದಾವಣಗೆರೆ ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದ ಹತ್ತಿರದ ಎರಡನೇ ಹಂತಕ್ಕೆ ನೀರೊದಗಿಸುವುದು.  ಎರಡನೇ ಹಂತದಲ್ಲಿ ಉದ್ದೇಶಿತ 22 ಕೆರೆಗಳಿಗೆ 150 ಕಿ.ಮೀ. ಪೈಪ್‍ಲೈನ್ ಮುಖಾಂತರ ನೀರೊದಗಿಸುವ ಯೋಜನೆ ಇದಾಗಿದೆ.  ಯೋಜನೆಯಡಿ ಸದ್ಯ 2022 ರ ಜುಲೈ 31 ರವರೆಗೆ ನಿರ್ವಹಣೆ ಗುತ್ತಿಗೆಯನ್ನು ನೀಡಲಾಗಿದೆ ಎಂದು ಯೋಜನೆಯ ಕಾರ್ಯಪಾಲಕ ಅಭಿಯಂತರ ಮಲ್ಲಪ್ಪ ಹೇಳಿದರು. 

ಹಲಸಬಾಳು ಪಂಪ್‍ಹೌಸ್‍ಗೆ ಸಂಪರ್ಕಿಸುವ 225 ಮೀ. ಉದ್ದ ಹಾಗೂ ಮಲ್ಲಶೆಟ್ಟಿಹಳ್ಳಿ ಬಳಿಯ 50 ಮೀ. ಉದ್ದದ ಇಂಟೇಕ್ ಚಾನಲ್‍ನ ಹೂಳನ್ನು ತೆಗೆಸಲು ಸೂಚನೆ ನೀಡಲಾಗಿದ್ದು, ಸದ್ಯ ಇಂಟೇಕ್‌ ಚಾನಲ್‍ನಲ್ಲಿ ನೀರು ಖಾಲಿಯಿದ್ದು, ಮಳೆಗಾಲ ಪ್ರಾರಂಭವಾಗುವುದರ ಒಳಗಾಗಿ ಹೂಳು ತೆಗೆಸಬೇಕು ಎಂದು ಸಂಸದರು ಸೂಚನೆ ನೀಡಿದರು.  

ಏತ ನೀರಾವರಿ ಯೋಜನೆಯ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿರುವ ಪೈಪ್‍ಲೈನನ್ನು ಸ್ಥಳಾಂತರಿಸುವ ಕಾಮಗಾರಿ ತ್ವರಿತವಾಗಿ ಕೈಗೊಳ್ಳದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಏತ ನೀರಾವರಿ ಯೋಜನೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ಪೈಪ್‍ಲೈನ್ ಸ್ಥಳಾಂತರಿಸುವ ಕಾರ್ಯ ಶೀಘ್ರ ಪೂರ್ಣಗೊಳ್ಳಬೇಕು ಎಂದರು.  ಉತ್ತರಿಸಿದ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು ಈಗಾಗಲೇ 12 ಕಿ.ಮೀ. ಪೈಕಿ 7.5 ಕಿ.ಮೀ. ಪೈಪ್‍ಲೈನ್ ಸ್ಥಳಾಂತರ ಪೂರ್ಣಗೊಂಡಿದ್ದು, ಇನ್ನೂ 4.5 ಕಿ.ಮೀ. ಕಾಮಗಾರಿ ಬಾಕಿ ಇದೆ.  ಭೂಮಿ ಹಸ್ತಾಂತರ ಪ್ರಕ್ರಿಯೆಯಲ್ಲಿ ಸಮಸ್ಯೆಯಿದ್ದು, ವಿಳಂಬವಾಗುತ್ತಿದೆ ಎಂದರು.  ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಭೂಮಿ ಸ್ವಾಧೀನಕ್ಕೆ ಪಡೆದು, ಪೊಲೀಸ್ ಬಂದೋಬಸ್ತ್ ತೆಗೆದುಕೊಂಡು ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ. ಲಿಂಗಣ್ಣ, ಕರ್ನಾಟಕ ನೀರಾವರಿ ನಿಗಮ ತುಂಗಾ ಮೇಲ್ದಂಡೆ ಯೋಜನಾ ವಲಯದ ಮುಖ್ಯ ಇಂಜಿನಿಯರ್ ಯತೀಶ್‍ಚಂದ್ರ, ಉಪವಿಭಾಗಾಧಿ ಕಾರಿ ಮಮತಾ ಹೊಸಗೌಡರ್ ಸೇರಿದಂತೆ ಬೆಸ್ಕಾಂ, ಕೆಪಿಟಿಸಿಎಲ್, ಲೋಕೋಪಯೋಗಿ ಇಲಾಖೆಗಳ ಇಂಜಿನಿಯರ್‍ಗಳು, ತಹಸೀಲ್ದಾರರು ಉಪಸ್ಥಿತರಿದ್ದರು.

error: Content is protected !!