ದಾವಣಗೆರೆ,ಅ.10- ರಾಜಸ್ಥಾನ ರಾಜ್ಯದ ಜೈಪುರದಲ್ಲಿ ಮೊನ್ನೆ ನಡೆದ `ಮಿಸೆ ಸ್ ಇಂಡಿಯಾ ಐ ಆಮ್ ಪವರ್‌ಫುಲ್’ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆಯ ಮೂಲದವರಾದ ಶ್ರೀಮತಿ ರಶ್ಮಿ ರಂಗಪ್ಪ ಅವರು ಐ ಆಮ್ ಪವರ್‌ಫುಲ್ ವರ್ಲ್ಡ್ ವಿಭಾಗದಲ್ಲಿ ಕಿರೀಟ ಧರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸ್ಪರ್ಧೆಯಲ್ಲಿ ರಶ್ಮಿ ರಂಗಪ್ಪ ಅವರಲ್ಲದೇ, ಶಿಲ್ಪಾ ಸುಧಾಕರ್, ಸುಪ್ರೀತಾ ಹಾಗೂ ಕಾವ್ಯ ಅವರುಗಳು ಪ್ರಶಸ್ತಿ ಗೆದ್ದುಕೊಂಡರು.
ಮಿಸೆಸ್ ಇಂಡಿಯಾ ಐ ಆಮ್ ಪವರ್‌ಫುಲ್ ಯೂನಿವರ್ಸ್ ವಿಭಾಗದ ಕಿರೀಟವನ್ನು ಶಿಲ್ಪಾ ಗೆದ್ದುಕೊಂಡರೆ, ಐ ಆಮ್ ಪವರ್‌ಫುಲ್ ವರ್ಲ್ಡ್ ವಿಭಾಗದಲ್ಲಿ ರಶ್ಮಿ ರಂಗಪ್ಪ, ಏಷ್ಯಾ ವಿಭಾಗದಲ್ಲಿ ಸುಪ್ರೀತಾ, ಕವಿರ್ ವರ್ಲ್ಡ್ ವಿಭಾಗದಲ್ಲಿ ಕಾವ್ಯ ಕಿರೀಟ ಜಯಿಸಿದರು.
ಉಳಿದಂತೆ ನಿರ್ಮಲಾ, ಹೇಮಾ, ಸ್ನೇಹ, ಸಿಂಧು ರನ್ನರ್ ಅಪ್ ಆದರು. ನಂದಿನಿ ನಾಗರಾಜ್ ಹಾಗೂ ಜಸ್ಟೀತ್ ಅವರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ 10 ಜನ ರೂಪದರ್ಶಿಯರ ತಂಡ ಜೈಪುರಕ್ಕೆ ತೆರಳಿತ್ತು. ಒಟ್ಟು 40 ಜನ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ವಿಂಟೇಜ್, ಗೌನ್, ಎಥ್ನಿಕ್, ಟ್ಯಾಲೆಂಟ್ ಸುತ್ತುಗಳಲ್ಲಿ ರೂಪದರ್ಶಿಯರು ರಾಂಪ್ ಮೇಲೆ ಹೆಜ್ಜೆ ಹಾಕಿ ನೆರೆದಿದ್ದ ಪ್ರೇಕ್ಷಕರ ಕಣ್ಮನ ತಣಿಸಿದರು. `ತೆಳ್ಳಗೆ, ಬೆಳ್ಳಗೆ ಇರುವವರು ಅಥವಾ ಎತ್ತರ, ದಪ್ಪ, ವಯಸ್ಸನ್ನು ನೋಡಿ ಈ ಸ್ಪರ್ಧೆಗೆ ಆಯ್ಕೆ ಮಾಡಲಾಗಿಲ್ಲ. ಬದಲಾಗಿ ಅವರಿಗೆ ಇರುವಂಥ ಅರ್ಹತೆ ಹಾಗೂ ಆತ್ಮವಿಶ್ವಾಸವೇ ನಮ್ಮ ಸ್ಪರ್ಧೆಯ ಮಾನದಂಡವಾಗಿತ್ತು’ ಎಂದು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದ ನಂದಿನಿ ನಾಗರಾಜ್ ಅವರು ತಿಳಿಸಿದರು.
ಬೆಂಗಳೂರಿನಿಂದ ಆಗಮಿಸಿದ್ದ ತಂಡವು ಜೈಪುರದಲ್ಲಿ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಈ ತಂಡ ಬರುವ ವರ್ಷ 2022ರ ಏಪ್ರಿಲ್‌ನಲ್ಲಿ ಸಿಂಗಪುರದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವುದರ ಮೂಲಕ ಭಾರತವನ್ನು ಪ್ರತಿನಿಧಿಸಲಿದೆ.
ರಶ್ಮಿ ರಂಗಪ್ಪ : ಐ ಆಮ್ ಪವರ್‌ಫುಲ್ ವರ್ಲ್ಡ್ ವಿಭಾಗದಲ್ಲಿ ಕಿರೀಟ ಧರಿಸಿರುವ ರಶ್ಮಿ ಅವರು ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದವರಾದ ಪೊಲೀಸ್ ಡಿವೈಎಸ್ಪಿ ಟಿ. ರಂಗಪ್ಪ ಅವರ ಧರ್ಮಪತ್ನಿ. ರಂಗಪ್ಪ ಅವರೀಗ ದೊಡ್ಡಬಳ್ಳಾಪುರ ನಗರ ಪೊಲೀಸ್ ಉಪಾಧೀಕ್ಷಕರಾಗಿದ್ದು, ಅವರ ಪತ್ನಿ ರಶ್ಮಿ ಮೂಲತಃ ಶಿವನಿಯವರಾಗಿದ್ದಾರೆ.