ಆಕ್ಸಿಜನ್ ಕೊರತೆಯಿಂದ ಕಂಗಾಲು

ಟ್ಯಾಂಕರ್‌ಗಳಿಗೆ ಪೊಲೀಸ್ ಭದ್ರತೆ ಕಲ್ಪಿಸಲು ಉತ್ತರ ಪ್ರದೇಶದ ನಿರ್ಧಾರ

ನವದೆಹಲಿ, ಏ. 21 – ದೇಶದಲ್ಲಿ ಒಂದೇ ದಿನ ಸುಮಾರು ಮೂರು ಲಕ್ಷದಷ್ಟು ಕೊರೊನಾ ಸೋಂಕಿತರು ಕಂಡು ಬಂದ ಬೆನ್ನಲ್ಲೇ, ಸಾವಿರಾರು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ತಾರಕಕ್ಕೇರಿದೆ. ಈ ನಡುವೆಯೇ, ಮಹಾರಾಷ್ಟ್ರದ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಸಿಲಿಂಡರ್ ಸೋರಿಕೆಯಾಗಿ 24 ಜನ ಸಾವನ್ನಪ್ಪಿದ ಘಟನೆಯೂ ನಡೆದಿದೆ.

ದೇಶದಲ್ಲಿ 7,500 ಮೆಟ್ರಿಕ್ ಟನ್ ಆಕ್ಸಿಜನ್ ಪ್ರತಿದಿನ ಉತ್ಪಾದನೆಯಾಗುತ್ತಿದೆ. ಇದರಲ್ಲಿ 6,600 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ವೈದ್ಯಕೀಯ ಬಳಕೆಗಾಗಿ ರಾಜ್ಯಗಳಿಗೆ ಕಳಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಆಕ್ಸಿಜನ್ ಕೊರತೆ ಎದುರಿಸುತ್ತಿರುವ ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಆರೋಪ – ಪ್ರತ್ಯಾರೋಪದಲ್ಲಿ ತೊಡಗಿವೆ. ರಾಜಧಾನಿಯ ಸರ್ ಗಂಗಾ ರಾಮ್, ಸೆಂಟ್ ಸ್ಟೀಫನ್ ಹಾಗೂ ಹೋಲಿ ಫ್ಯಾಮಿಲಿ ಆಸ್ಪತ್ರೆ ಸೇರಿದಂತೆ ಹಲವಾರು ಆಸ್ತ್ರತ್ರೆಗಳಲ್ಲಿ ಒಂದೆರಡು ಗಂಟೆಗಳಿಗೆ ಆಗುವಷ್ಟು ಮಾತ್ರ ಆಕ್ಸಿಜನ್ ಉಳಿದಿತ್ತು. ನಂತರ ಹೇಳಿಕೆ ನೀಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕೇಂದ್ರ ಸರ್ಕಾರ ದೆಹಲಿಯ ಆಕ್ಸಿಜನ್ ಕೋಟಾ ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ಹೇಳಿಕೆ ನೀಡಿರುವ ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್, ತಮ್ಮ ರಾಜ್ಯದಲ್ಲಿ ಹೆಚ್ಚುವರಿ ಆಕ್ಸಿಜನ್ ಇದ್ದರೆ ಬೇರೆ ರಾಜ್ಯಗಳಿಗೆ ಪೂರೈಸಲಾಗುವುದು. ಪಾಣಿಪತ್‌ನಿಂದ ಫರೀದಾ ಬಾದ್‌ಗೆ ಆಸ್ಪತ್ರೆ ಬಳಕೆಗೆಂದು ರವಾನಿಸಲಾಗುತ್ತಿದ್ದ ಆಕ್ಸಿಜನ್ ಟ್ಯಾಂಕರ್ ಅನ್ನು ದೆಹಲಿ ಸರ್ಕಾರ ಲೂಟಿ ಮಾಡಿದೆ. ಇನ್ನು ಮುಂದೆ ಎಲ್ಲಾ ಆಕ್ಸಿಜನ್ ಟ್ಯಾಂಕರ್‌ಗಳನ್ನು ಪೊಲೀಸ್ ಭದ್ರತೆಯಲ್ಲಿ ಕಳಿಸಲಾಗುವುದು ಎಂದಿದ್ದಾರೆ.

ಮಹಾರಾಷ್ಟ್ರದ ಲಾತೂರ್‌ನಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಕೊರತೆ ಕಂಡು ಬಂದ ನಂತರ, ಸೋಂಕಿತರ ಸಂಬಂಧಿಗಳು ಬೀದಿಗಳಿದು ಪ್ರತಿಭಟನೆ ನಡೆಸಿದ್ದಾರೆ.

ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್, ವಿಶ್ವದಲ್ಲಿ ಅತಿ ಹೆಚ್ಚು ಆಕ್ಸಿಜನ್ ಉತ್ಪಾದಿಸುವ ದೇಶಗಳಲ್ಲಿ ಒಂದಾದ ಭಾರತದಲ್ಲಿ ಈ ಪರಿಸ್ಥಿತಿ ಉಂಟಾಗಿರುವುದು ದುರಾದೃಷ್ಟಕರ ಎಂದಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರಿಗೆ ಪತ್ರ ಬರೆದಿರುವ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ರಾಜ್ಯಕ್ಕೆ 145 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುವಂತೆ ಮನವಿ ಸಲ್ಲಿಸಿದ್ದಾರೆ.

ತಮಿಳುನಾಡಿನಿಂದ ಬೇರೆ ರಾಜ್ಯಗಳಿಗೆ ಆಕ್ಸಿಜನ್ ಪೂರೈಸುತ್ತಿರುವುದನ್ನು ಆಕ್ಷೇಪಿಸಿ ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಸರ್ಕಾರ ಪತ್ರ ಬರೆದಿದೆ. ಆಕ್ಸಿಜನ್ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸಬೇಕು ಹಾಗೂ ಭದ್ರತೆ ನೀಡಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.

ಭಾರತದಲ್ಲಿ ಬುಧವಾರ ಒಂದೇ ದಿನ 2.95 ಲಕ್ಷ ಸೋಂಕಿತರು ಕಂಡು ಬಂದಿದ್ದಾರೆ. ಇದೇ ದಿನ 2 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

error: Content is protected !!