ಮಾರ್ಚ್‌ 5 ರಿಂದ ಆಮರಣಾಂತ ಉಪವಾಸಕ್ಕೆ ನಿರ್ಧಾರ

2ಎ ಬೇಡಿಕೆಗೆ ಸ್ಪಂದಿಸದ ಸರ್ಕಾರದ ವಿರುದ್ಧ ಹೋರಾಟ ಸಾರಿದ ಪಂಚಮಸಾಲಿ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ

ರಾಜಧಾನಿಯಲ್ಲಿ ಪಂಚಮಸಾಲಿ ಸಮಾಜದ ಬೃಹತ್ ಶಕ್ತಿ ಪ್ರದರ್ಶನ

ಬೆಂಗಳೂರು, ಫೆ. 21 – 2ಎ ಮೀಸಲಾತಿ ಗಾಗಿ ಪಂಚಮಸಾಲಿ ಸಮುದಾಯ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಶಕ್ತಿ ಪ್ರದರ್ಶನ ನಡೆಸಿದ್ದು, ಮೀಸಲಾತಿ ನೀಡಲೇಬೇಕೆಂದು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದೆ.

ಮೀಸಲಾತಿಗಾಗಿ ಕ್ರಮ ತೆಗೆದುಕೊಳ್ಳಲು ಸಮಯ ನೀಡುವಂತೆ ಸಚಿವರ ಮೂಲಕ ರಾಜ್ಯ ಸರ್ಕಾರ ಮಾಡಿಕೊಂಡ ಮನವಿಯನ್ನು ತಳ್ಳಿ ಹಾಕಿರುವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮಾ. 4ರವರೆಗೆ ಬೆಂಗಳೂರಿನಲ್ಲಿ ಧರಣಿ ಹಾಗೂ ಆನಂತರವೂ ಬೇಡಿಕೆ ಈಡೇರದಿದ್ದರೆ ಆಮರಣಾಂತ ಉಪವಾಸ ನಡೆಸುವುದಾಗಿ ಘೋಷಿಸಿದ್ದಾರೆ.

ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ 39 ದಿನಗಳ ಕಾಲ ಪಾದಯಾತ್ರೆಯಲ್ಲಿ ಬಂದಿದ್ದರು. ನಂತರ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು.

ಸರ್ಕಾರ ಸಮಯ ಕೇಳಿದ್ದರಿಂದ ಅಸಮಾ ಧಾನಗೊಂಡ ಪಂಚಮಸಾಲಿ ಸಮುದಾಯದ ವರು, ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶದ ಸ್ಥಳದಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿ ಗೆಯನ್ನೂ ನಡೆಸಿದರು.

ಮೊದಲು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿತ್ತು. ಆದರೆ, ಪೊಲೀಸರು ಅಲ್ಲಿ 144ನೇ ಸೆಕ್ಷನ್ ಹೇರಿದ್ದರು. ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಮನವೊಲಿಕೆ ಮಾಡಿದ ನಂತರ ಫ್ರೀಡಂ ಪಾರ್ಕ್‌ ಕಡೆ ಮೆರವಣಿಗೆಯಲ್ಲಿ ತೆರಳಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಯಮೃತ್ಯುಂಜಯ ಶ್ರೀಗಳು, ಸರ್ಕಾರ 39 ದಿನಗಳ ಪಾದಯಾತ್ರೆಗೆ ಸ್ಪಂದನೆ ಮಾಡಿಲ್ಲ. ನಾವು ಮಾರ್ಚ್ 4ರವರೆಗೆ ಮೌರ್ಯ ಸರ್ಕಲ್‌ನಲ್ಲಿ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಧರಣಿ ಸತ್ಯಾಗ್ರಹಕ್ಕೆ ಕೂರುತ್ತವೆ. ಆನಂತರವೂ ಸ್ಪಂದನೆ ಮಾಡದಿದ್ದರೆ ಮಾ.5ರಿಂದ ಆಮರಣಾಂತ ಉಪವಾಸ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಸಚಿವರಾದ ಸಿ.ಸಿ. ಪಾಟೀಲ್, ಮುರುಗೇಶ್ ನಿರಾಣಿ ಹಾಗೂ  ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಬೇಡಿಕೆಗೆ ಸಮಯ ಕೇಳಿದ್ದಾರೆ. ಆದರೆ, ಸಮುದಾಯದ ಜನರು ಹೋರಾಟ ಮುಂದುವರೆಯಬೇಕು ಎಂದು ತೀರ್ಮಾನಿಸಿದ್ದಾರೆ ಎಂದು ಶ್ರೀಗಳು ಹೇಳಿದರು.

ಮುಖ್ಯಮಂತ್ರಿ ಸಭೆ : ಸಮಾವೇಶದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸೂಚನೆಯಂತೆ ಸಚಿವ ಸಿ.ಸಿ. ಪಾಟೀಲ್ ಅವರ ನಿವಾಸದಲ್ಲಿ ಸಭೆಯೊಂದನ್ನು ನಡೆಸಲಾಯಿತು. ಸಭೆಯಲ್ಲಿ ಲಿಂಗಾಯತ ಸಮುದಾಯದ ಸಚಿವರು ಹಾಗೂ ಶಾಸಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬೊಮ್ಮಾಯಿ, ಮೀಸಲಾತಿಗೆ ಸಂಬಂಧಿಸಿದಂತೆ ಹಿಂದುಳಿದ ಆಯೋಗ ಸಭೆ ನಡೆಸಿ ಸಮಾಲೋಚನೆ ನಡೆಸುತ್ತಿದೆ. ಸಂವಿಧಾನದ ಪ್ರಕಾರ ಆಯೋಗದ ಮೂಲಕವೇ ಶಿಫಾರಸ್ಸು ಬರಬೇಕು ಎಂದಿದ್ದರು.

ಮೀಸಲಾತಿಗೆ ಸ್ವಾಮೀಜಿ ಗಡುವು ನೀಡಿದ ಬಗ್ಗೆ ಸಭೆಯಲ್ಲಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು ಎಂದೂ ಹೇಳಲಾಗುತ್ತಿದೆ.

ಸಚಿವ ಸಿ.ಸಿ. ಪಾಟೀಲ್ ನಿವಾಸದಲ್ಲಿ ಸಭೆ ನಡೆಸಿದ ನಂತರ, ಮುಖ್ಯಮಂತ್ರಿ ಯಡಿಯೂರಪ್ಪ ಸಚಿವರು ಮತ್ತು ಶಾಸಕರ ಜೊತೆ ಸಭೆ ನಡೆಸಿದರು.

ಇಂದು ಪತ್ರಿಕಾಗೋಷ್ಠಿ : ನಾಳೆ ಸೋಮವಾರ ಪಂಚಮಸಾಲಿ ಸಮುದಾಯದ ಸಚಿವರು ಹಾಗೂ ಶಾಸಕರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಭಾನುವಾರದ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಪತ್ರಿಕಾಗೋಷ್ಠಿ ಪ್ರಾಮುಖ್ಯತೆ ಪಡೆದುಕೊಂಡಿದೆ.

error: Content is protected !!