ಬಜೆಟ್ ಇತಿಮಿತಿಯೊಳಗೆ ಅಗತ್ಯ ಯೋಜನೆಗಳಿಗೆ ಒತ್ತು

ಮಲೇಬೆನ್ನೂರು, ಫೆ.19- ಇಲ್ಲಿನ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ 2021-22 ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಾರ್ವಜನಿಕರ ಸಮಾಲೋಚನಾ ಸಭೆಯನ್ನು ಪುರಸಭೆ ಅಧ್ಯಕ್ಷೆ ನಾಹೀದ ಅಂಜುಂ ಸೈಯದ್ ಇಸ್ರಾರ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಪುರಸಭೆ ಸದಸ್ಯರು, ಸಾರ್ವಜನಿಕರು ಮತ್ತು ಪತ್ರಕರ್ತರು ಪಟ್ಟಣದಲ್ಲಿ ಅಗತ್ಯವಾಗಿ ಆಗಬೇಕಾದ ಕೆಲಸಗಳನ್ನು ಬಜೆಟ್‌ನಲ್ಲಿ ಸೇರಿಸಿ, ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು. 

ಪುರಸಭೆ ಸದಸ್ಯ ಬಿ. ಸುರೇಶ್ ಮಾತನಾಡಿ, ಬಜೆಟ್ ಸದಸ್ಯರ ಸಮ್ಮುಖದಲ್ಲಿ ಆಗಿಲ್ಲ. ಬಜೆಟ್ ಕುರಿತು ನಮಗೆ ಮಾಹಿತಿ ನೀಡಬೇಕು. ಬಜೆಟ್ ಅನ್ನು ಸಾಮಾನ್ಯ ಸಭೆಯ ನಂತರ ಮಂಡಿಸುವುದು ಸೂಕ್ತ ಎಂದರು. ಇದುವರೆಗೂ ಸಾಮಾನ್ಯ ಸಭೆ ಕರೆದಿಲ್ಲ. ಜೊತೆಗೆ ಸಭೆಯ ಬಗ್ಗೆ ಪ್ರಚಾರ ಮಾಡಿಲ್ಲ. ಪ್ರಚಾರ ಮಾಡಿ, ಸಭೆ ನಡೆಸಿರಿ ಎಂದು ಸುರೇಶ್ ದೂರಿದರು.

ಕಣ್ಣಾಳ್ ಹನುಮಂತಪ್ಪ ಮಾತನಾಡಿ ಬಾಪೂಜಿ ಹಾಲ್ ಪುನರ್‌ ನಿರ್ಮಾಣಕ್ಕೆ ಗಮನ ಹರಿಸದಿದ್ದಲ್ಲಿ ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಜಿಗಳಿ ವೃತ್ತದಲ್ಲಿ ಕನ್ನಡ ಧ್ವಜಾರೋಹಣಕ್ಕೆ ಸೂಕ್ತ ಸ್ಥಳವನ್ನು ನಿಗದಿ ಮಾಡಿಕೊಡುವಂತೆ ಕರವೇ ಕಾರ್ಯಕರ್ತ ಗಾಂಧೀ ಒತ್ತಾಯಿಸಿದರು.

ಭೋವಿ ಕುಮಾರ್ ಮಾತನಾಡಿ, ಸಂತೆ ಮೈದಾನದ ಸುತ್ತ ಮಳಿಗೆಗಳನ್ನು ನಿರ್ಮಿಸಿದರೆ ಪುರಸಭೆಗೆ ಆದಾಯ ಬರುತ್ತದೆ ಎಂಬ ಸಲಹೆ ನೀಡಿದರು. ಜಾಮಿಯಾ ಮಸೀದಿ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ, ಫಿಲ್ಲರ್ ಹಾಕಿರುವ ಬಗ್ಗೆ ಪಟೇಲ್ ಬೀಡಿ ರೋಷನ್ ಪುರಸಭೆ ಗಮನಕ್ಕೆ ತಂದರು.

7ನೇ ವಾರ್ಡ್‌ನಲ್ಲಿ ನೀರಿನ ಪೈಪ್ ಒಡೆದಿರುವ ಬಗ್ಗೆ ಪಾನಿಪೂರಿ ಸಿದ್ಧೇಶ್ ಗಮನಕ್ಕೆ ತಂದರು. ಗುತ್ತಿಗೆದಾರ ಎಸ್. ದಾದಾವಲಿ ಪಟ್ಟಣದ ಅಭಿವೃದ್ಧಿಗೆ ವಿಶೇಷ ಅನುದಾನ ತರುವಂತೆ ಸಲಹೆ ನೀಡಿದರು.

ನಂತರ ಮಾತನಾಡಿದ ಮುಖ್ಯಾಧಿಕಾರಿ ಉದಯಕುಮಾರ್ ಎನ್. ತಳವಾರ ಸದಸ್ಯರ ಸಲಹೆಯಂತೆ ಇನ್ನೊಂದು ಸಾರ್ವಜನಿಕ ಸಭೆ ಮತ್ತು ಸಾಮಾನ್ಯ ಸಭೆ ನಡೆಸಿ ಬಜೆಟ್ ಮಂಡಿಸುವ ಕುರಿತು ಶೀಘ್ರವೇ ನಿರ್ಧರಿಸಲಾಗುವುದು. ಖಾಲಿ ನಿವೇಶನ ಸ್ವಚ್ಛವಾಗಿಟ್ಟುಕೊಳ್ಳಲು ಮಾಲೀಕರಿಗೆ ನೋಟಿಸ್ ನೀಡಲಾಗುವುದು. ಬಾಪೂಜಿ ಹಾಲ್ ಪುನರ್ ನಿರ್ಮಾಣಕ್ಕೆ ಸ್ವಚ್ಛ ಭಾರತ ಯೋಜನೆಯ 50 ಲಕ್ಷ ರೂ. ಅನುದಾನ ಬಳಕೆ ಮಾಡುವ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ, ತಿಳಿಸುವುದಾಗಿ ಹೇಳಿದರು. ಬಜೆಟ್ ಇತಿಮಿತಿಯೊಳಗೆ ಪಟ್ಟಣದ ಅಭಿವೃದ್ಧಿಗಾಗಿ ಅಗತ್ಯ ಯೋಜನೆಗಳಿಗೆ ಒತ್ತು ನೀಡುವುದಾಗಿ ಉದಯಕುಮಾರ್ ಭರವಸೆ ನೀಡಿದರು.

ಪುರಸಭೆ ಉಪಾಧ್ಯಕ್ಷೆ ಅಂಜಿನಮ್ಮ, ಸ್ಥಾಯಿಸಮಿತಿ ಅಧ್ಯಕ್ಷ ಮಹಾಂತೇಶ್ ಸ್ವಾಮಿ, ಸದಸ್ಯರಾದ ಎ. ಆರೀಫ್ ಅಲಿ, ಯೂಸುಫ್, ಮಹಾಲಿಂಗಪ್ಪ, ಲತೀಫ್‌ಸಾಬ್, ಮಾಸಣಗಿ ಶೇಖರಪ್ಪ, ಸಾಕಮ್ಮ ರವಿಕುಮಾರ್, ಶಶಿಕಲಾ ಕೇಶವಾಚಾರಿ, ನಾಗರಿಕರಾದ ಭೋವಿ ಶಿವು, ಪಿ. ನ್ಯಾಮತ್‌ವುಲ್ಲಾ, ಪಾಳೇಗಾರ್ ನಾಗರಾಜ್, ಎಂ.ಎನ್. ಮಂಜುನಾಥ್, ಅಧಿಕಾರಿಗಳಾದ ದಿನಕರ್, ಉಮೇಶ್, ಗುರುಪ್ರಸಾದ್, ಪ್ರಭು, ನವೀನ್, ಇಮ್ರಾನ್ ಇನ್ನಿತರರು ಉಪಸ್ಥಿತರಿದ್ದರು.

error: Content is protected !!