ದಾವಣಗೆರೆ, ಫೆ. 21- ಕುಂದುವಾಡ ಬಳಿ ದೂಡಾದಿಂದ ನಿರ್ಮಿಸಲಾಗುವ ಹೊಸ ಬಡಾವಣೆಯಲ್ಲಿ ಸೈನಿಕ ತರಬೇತಿ ಕೇಂದ್ರ, ಸೈನಿಕ ಸಮುದಾಯ ಭವನ ನಿರ್ಮಾಣಕ್ಕೆ ಎರಡು ಎಕರೆ ಜಾಗ ಕಾಯ್ದಿರಿಸಿ ನೀಡಲು ಕ್ರಮ ಕೈಗೊಳ್ಳುವುದಾಗಿ ಸಂಸದ ಜಿ.ಎಂ. ಸಿದ್ದೇಶ್ವರ ಭರವಸೆ ನೀಡಿದ್ದಾರೆ.
ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ನಿರ್ಮಿಸಲಾಗುತ್ತಿರುವ ಹುತಾತ್ಮ ಯೋಧರ ಸ್ಮಾರಕ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ದೇಶಕ್ಕೆ ಸೈನಿಕರು ಹಾಗೂ ರೈತರು ಇಬ್ಬರೂ ಮುಖ್ಯ. ಸೈನಿಕರ ಬೇಡಿಕೆಗಳನ್ನು ಈಡೇರಿಸುವುದು ನಮ್ಮ ಕರ್ತವ್ಯ ಎಂದರು.
ಪ್ರಸ್ತುತ 62 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ ಸೇರಿದಂತೆ ವಿವಿಧ ಕೆಲಸಗಳು ನಡೆಯಲಿವೆ. ಮುಂದೆ 1 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕದ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಸೈನಿಕರಲ್ಲಿ ಹುಮ್ಮಸ್ಸು ತುಂಬುವ ಮೂಲಕ ಅವರ ಹಿತ ಕಾಪಾಡುವಲ್ಲಿ ನಿರತರಾಗಿದ್ದಾರೆ. ದೇಶ ಭಕ್ತ ಪ್ರಧಾನಿ ದೊರೆತಿರುವುದು ಸೈನಿಕರ ಹಾಗೂ ನಾಗರಿಕರ ಪುಣ್ಯ ಎಂದರು.
ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಸೈನಿಕರು ದೇಶ ಕಾಯದೇ ಇದ್ದರೆ ನಾವೆಲ್ಲಾ ನೆಮ್ಮದಿಯಾಗಿ ಇರಲು ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ಗೌರವ ಸೂಚಿಸುವ ಸಲುವಾಗಿ ಯೋಧರ ಸ್ಮಾರಕ ನಿರ್ಮಾಣದ ಬಗ್ಗೆ ಚಿಂತನೆ ನಡೆದಿತ್ತು. ಬೇರೆ ಕಡೆ ಇರುವ ಸ್ಮಾರಕಗಳನ್ನು ನೋಡಿ, ಸಲಹೆ ಪಡೆದು ರಾಜ್ಯಕ್ಕೆ ಮಾದರಿಯಾಗುವಂತಹ ಸ್ಮಾರಕ ನಿರ್ಮಿಸುವಂತೆ ಸಲಹೆ ನೀಡಿದರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ ಮಾತನಾಡಿ, ಸೈನಿಕರಿಗೆ ಗೌರವ ಕೊಡುವುದು ಹಾಗೂ ಅವರ ಗೌರವ ಕಾಪಾಡುವುದು ಪ್ರತಿ ಭಾರತೀಯನ ಆಧ್ಯ ಕರ್ತವ್ಯ.ಸೈನಿಕ ಸ್ಮಾರಕ ನೋಡಲು ಬಂದವರಿಗೆ ಪ್ರೇರಣೆ ಸಿಗಲಿ ಎಂಬ ದೃಷ್ಟಿಯಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರ ಪ್ರತಿಮೆಗಳನ್ನು ನಿರ್ಮಿಸಿ, ಫಲಕ ಹಾಕಿದರೆ ಉತ್ತಮ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ದೂಡ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಯೋಧರ ಬೇಡಿಕೆಯಂತೆ ಇಲ್ಲಿನ ಖಾಲಿ ನಿವೇಶನವನ್ನು ಗುರುತಿಸಿ, ಸೈನಿಕರ ಉದ್ಯಾನವನಕ್ಕೆ ಮೀಸಲಿರಿಸಲಾಯಿತು. ಕಾಂಪೌಂಡ್, ವಾಕಿಂಗ್ ಪಾತ್ ಮುಂತಾದ ಕೆಲಸಗಳಿಗಾಗಿ ಸದ್ಯ 62 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ದೇಶದ ವಿವಿಧೆಡೆ ಇರುವ ಸೈನಿಕ ಸ್ಮಾರಕಗಳ ಮಾಹಿತಿ ಪಡೆದು, ಮಾಜಿ ಯೋಧರ ಸಭೆ ಕರೆದು ಚರ್ಚಿಸಿ, ಯಾವ ರೀತಿ ಸ್ಮಾರಕ ಅಭಿವೃದ್ದಿ ಸಾಧ್ಯ ಎಂದು ಚಿಂತಿಸಿ ಅಭಿವೃದ್ಧಿಗಾಗಿ 1 ಕೋಟಿ ರೂ. ಮೀಸಲಿರಿಸಲಾಗಿದೆ. ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇದು ಪುಣ್ಯ ಸ್ಥಳವಾಗಲಿದೆ ಎಂದರು. ಆಸ್ಪತ್ರೆ ಮುಂತಾದ ಕೆಲಸ ಕಾರ್ಯಗಳಿಗಾಗಿ ಬಸಾಪುರದಲ್ಲಿ 10 ಗುಂಟೆ ನಿವೇಶನವಿದ್ದು, ಒಪ್ಪಿದಲ್ಲಿ ನೀಡಲು ಕ್ರಮ ವಹಿಸುವುದಾಗಿ ಶಿವಕುಮಾರ್ ಹೇಳಿದರು.
ಕುಂದುವಾಡ ಬಳಿ ಹೊಸ ಬಡಾವಣೆ ನಿರ್ಮಿಸಲು 53 ಎಕರೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕರೆ ಮತ್ತೆ ಎರಡನೇ ಹಂತದಲ್ಲಿ 53 ಎಕರೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಆ ಪ್ರದೇಶದಲ್ಲಿ ಸೈನಿಕ ತರಬೇತಿ ಕೇಂದ್ರಕ್ಕೆ ಜಾಗ ಮೀಸರಿಸಲಾಗುವುದು ಎಂದರು.
ನಿವೃತ್ತ ಯೋಧರ ಸಂಘದ ಅಧ್ಯಕ್ಷ ಸತ್ಯಪ್ರಕಾಶ್, ನಿರ್ದೇಶಕ ಪ್ರಮೋದ್ ಕುಮಾರ್, ದೂಡಾ ಆಯುಕ್ತ ಬಿ.ಟಿ. ಕುಮಾರ ಸ್ವಾಮಿ, ದೂಡಾ ಸದಸ್ಯರಾದ ದೇವೀರಮ್ಮ, ಸೌಭಾಗ್ಯಮ್ಮ, ಜಯರುದ್ರೇಶ್, ಪಾಲಿಕೆ ಸದಸ್ಯೆ ಹೆಚ್.ಸಿ. ಜಯಮ್ಮ ಹಾಗೂ ಇತರರು ಉಪಸ್ಥಿತರಿದ್ದರು.