100 ಎಕರೆಯಲ್ಲಿ ಅನಧಿಕೃತ ಬಡಾವಣೆ, ತೆರವಿಗೆ ಕ್ರಮ

100 ಎಕರೆಯಲ್ಲಿ ಅನಧಿಕೃತ ಬಡಾವಣೆ, ತೆರವಿಗೆ ಕ್ರಮ - Janathavaniದಾವಣಗೆರೆ, ಫೆ. 21- ದೂಡಾಗೆ ಶುಲ್ಕ ಕಟ್ಟದೆ, ನಿಯಮಾನುಸಾರ ರಸ್ತೆ, ಪಾರ್ಕುಗಳಗೆ ಜಾಗ ಬಿಡದೆ ನಗರದ ವಿವಿಧೆಡೆ ಸುಮಾರು 100 ಎಕರೆ ಪ್ರದೇಶದಲ್ಲಿ ಅನಧಿಕೃತ ಬಡಾವಣೆಗಳು ನಿರ್ಮಾಣವಾಗಿ ರುವುದನ್ನು ಪತ್ತೆ ಹಚ್ಚಲಾಗಿದ್ದು, ತೆರವುಗೊಳಿಸಲು 8 ದಿನಗಳ ಗಡುವು ನೀಡಲಾಗಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದರು.

ನಗರದಲ್ಲಿ ಖಾಸಗಿ ವ್ಯಕ್ತಿಗಳು ನಕಲಿ ದಾಖಲಾತಿ ಸೃಷ್ಟಿಸಿ ಹಲವಾರು ಕಡೆ ಆಸ್ತಿಗಳನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದರು. ದೇವರಾಜ ಅರಸು ಬಡಾವಣೆಯಲ್ಲಿ ಒತ್ತುವರಿ ಮಾಡಿ ಕೊಂಡಿದ್ದ 8 ನಿವೇಶನಗಳನ್ನು ತೆರವುಗೊಳಿ ಸಲಾಗಿದೆ. ಆರ್.ಟಿ.ಒ. ಕಚೇರಿ ಬಳಿಯ ಪೆಟ್ರೋಲ್ ಬಂಕ್ ಎದುರು ಒತ್ತುವರಿ 8 ನಿವೇಶನಗಳನ್ನು ತೆರವುಗೊಳಿಸಲಾಗಿದೆ.  ಯರಗುಂಟೆ, ಬೂದಾಳು, ಅಶೋಕ ನಗರ, ಹಳೇಪೇಟೆಯಲ್ಲಿ ನೂರಾರು ಎಕರೆ ಅನಧಿಕೃತ ಬಡಾವಣೆ ನಿರ್ಮಾಣವಾಗಿದ್ದು ವಾರದೊಳಗೆ ತೆರವುಗೊ ಳಿಸದಿದ್ದರೆ  ಪೊಲೀಸರ ಸಹಕಾರದಿಂದ ತೆರವು ಮಾಡಲಾಗುವುದು ಎಂದು ಹೇಳಿದರು.

ರಸ್ತೆ, ಪಾರ್ಕ್ ನಿರ್ಮಾಣಕ್ಕೆ ಜಾಗ ಬಿಡದೆ, ಸರ್ಕಾರಕ್ಕೆ ಫೀ ಕಟ್ಟದೆ ಖಾಸಗಿ ವ್ಯಕ್ತಿಗಳು,  ಭೂ ಮಾಫಿಯಾಗಳು ಕಡಿಮೆ ದರದಲ್ಲಿ ನಿವೇಶನ ನೀಡುವುದಾಗಿ ಹೇಳುತ್ತಿದ್ದಾರೆ. ಯಾರು ಎಲ್ಲಿಯೇ ಸೈಟ್ ಪಡೆದರೂ ದೂಡಾಕ್ಕೆ ಬಂದು  ಪರಿಶೀಲಿಸಬೇಕು. ಆಗ ಅದು ಅಧಿಕೃತವೋ, ಅನಧಿಕೃತವೋ ಎಂದು  ತಿಳಿಯುತ್ತದೆ. ಇಲ್ಲದಿದ್ದರೆ ಮುಂದೆ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.

1 ಎಕರೆ ಪ್ರದೇಶದಲ್ಲಿ ನಿವೇಶನ ಮಾಡುವುದಾದರೆ ದೂಡಾಗೆ 15-20 ಲಕ್ಷ ರೂ. ಶುಲ್ಕ ಕಟ್ಟಬೇಕು. ಅಲ್ಲದೆ, ಪಾರ್ಕ್ – ರಸ್ತೆ ಇತ್ಯಾದಿಗೆಂದು 20 ಲಕ್ಷ ರೂ. ಪಾವತಿ ಮಾಡಬೇಕಿದೆ. ಎರಡನ್ನೂ ಮಾಡದೆ ಎಕರೆಗೆ 50 ಲಕ್ಷ ರೂ. ಉಳಿಸಿಕೊಳ್ಳುತ್ತಾರೆ. 100 ಎಕರೆಗೆ 500 ಕೋಟಿ ರೂ. ದೂಡಾ ಆದಾಯ ಉಳಿಸಿಕೊಂಡಂತಾಗುತ್ತದೆ. ಪಾರ್ಕು, ರಸ್ತೆಗಳನ್ನು ಬಿಡದೆ ಅದನ್ನೂ ಮಾರಿಕೊಳ್ಳುವ ಮೂಲಕ ಎಕರೆಗೆ 50  ಲಕ್ಷ  ಉಳಿಸಿಕೊಳ್ಳುತ್ತಾರೆ. ಅದೂ ಸಹ 100  ಎಕರೆಗೆ 500 ಕೋಟಿ ರೂ.ಗಳಷ್ಟಾಗುತ್ತದೆ. ಎಲ್ಲಾ ಸೇರಿ 1 ಸಾವಿರ ಕೋಟಿ ರೂ. ಸರ್ಕಾರಕ್ಕೆ ನಷ್ಟವಾಗುತ್ತದೆ. ಇದೆಲ್ಲಾ ಭೂಗಳ್ಳರ ಪಾಲಾಗುತ್ತದೆ. ಈ ಆದಾಯ ಸರ್ಕಾರಕ್ಕೆ ಬಂದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಈಗಾಲೇ 50-60 ಕೋಟಿ ರೂ. ಆಸ್ತಿಯನ್ನು ದೂಡಾಗೆ ವಾಪಾಸ್ ತಂದಿರುವುದಾಗಿ ಹೇಳಿದ ಅವರು, 2-3 ತಿಂಗೊಳಗೆ ನಗರದಲ್ಲಿ ಯಾವುದೇ ಒಂದು ಅನಧಿಕೃತ ಬಡಾವಣೆ ಉಳಿಯದಂತೆ ಮಾಡಿ ತೋರಿಸುತ್ತೇನೆ. ಪಕ್ಷಕ್ಕೆ ಒಳಿತಾಗುವ, ನಾಯಕರಿಗೆ ಉತ್ತಮ ಹೆಸರು ಬರುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

error: Content is protected !!