ನಗರಸಭೆ ಅಂದು ಹೇಗಿತ್ತೋ ಇಂದು ಸಹ ಹಾಗೆಯೇ ಇದೆ. ಹಿಂದೆ ಮ್ಯಾನ್ಯುಯಲ್ ವರ್ಕ್ ಆಗಿದ್ದರೂ ಬೇಗನೆ ಕೆಲಸ ಆಗುತ್ತಿತ್ತು. ಆದರೆ ಈಗ ಎಲ್ಲಾ ಕೆಲಸವನ್ನು ಕಂಪ್ಯೂಟರ್ ಮಾಡುತ್ತಿದ್ದರೂ, ಒಂದು ದಾಖಲೆ ಪಡೆಯಲು ಆರು ತಿಂಗಳು ಬೇಕಾಗುತ್ತಿದೆ.-– ಎ. ವಾಮನಮೂರ್ತಿ, ನಗರಸಭೆ ಸದಸ್ಯ
ಕಳೆದ ಸಾಲಿನ ಬಜೆಟ್ನಲ್ಲಿ ಜಾರಿ ಮಾಡಿರುವ ಅನೇಕ ಕೆಲಸ ಕಾರ್ಯಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದರ ಪರಿಣಾಮವಾಗಿ ನಗರವು ಯಾವುದೇ ರೀತಿಯ ಅಭಿವೃದ್ಧಿ ಕಾಣದಾಗಿದೆ. ಸಾರ್ವಜನಿಕರು ಕಟ್ಟಡ ಲೈಸೆನ್ಸ್, ಅಂಗಡಿ ಪರವಾನಗಿ ಪತ್ರ, ಖಾತೆ ಎಕ್ಸ್ಟ್ರಾಕ್ಟ್ ಪಡೆಯಲು ಹರ ಸಾಹಸ ಪಡಬೇಕಾಗಿದೆ. ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಚಾಟಿ ಬೀಸುವ ಮೂಲಕ ಉತ್ತಮ ಆಡಳಿತ ವ್ಯವಸ್ಥೆ ತರಬೇಕು ಎಂದು ಹೇಳಿದರು.
– ಶಂಕರ್ ಖಟಾವ್ಕರ್, ನಗರಸಭೆ ಸದಸ್ಯ
ಹರಿಹರ, ಫೆ.19- ನಗರಸಭೆ ಸದಸ್ಯರು ಸರ್ಕಾರದ ಮೇಲೆ ಒತ್ತಡವನ್ನು ಹಾಕಿ ಹಣ ವನ್ನು ಬಿಡುಗಡೆ ಮಾಡಿಸಿದಾಗ ನಗರದ ಅಭಿ ವೃದ್ಧಿಗೆ ಪೂರಕ ಕಾರ್ಯಗಳನ್ನು ಮಾಡಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಭಿಪ್ರಾಯಪಟ್ಟರು.
ನಗರಸಭೆ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ 2021-22 ನೇ ಸಾಲಿನ ಆಯವ್ಯಯದ ಪ್ರಮುಖ ಅಂಕಿ-ಅಂಶಗಳ ಹಾಗೂ ವಿಶೇಷ ಅಭಿವೃದ್ಧಿ ಯೋಜನೆಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಡಿಯುವ ನೀರು, ಸ್ವಚ್ಛತೆ, ವಾಹನ ನಿಲುಗಡೆ, ವಿದ್ಯುತ್ ದೀಪಗಳ ಆಳವಡಿಕೆ, ರಂಗಮಂದಿರ ನಿರ್ಮಾಣ, ಸುಸಜ್ಜಿತ ಹಣ್ಣು, ತರಕಾರಿ, ಹೂವು ಮಾರುಕಟ್ಟೆ ನಿರ್ಮಾಣ, ಹಂದಿ ಹಾಗೂ ಬಿಡಾಡಿ ದನಗಳ ಹಾವಳಿ ತಡೆಗಟ್ಟುವಿಕೆ, ಕಸದ ಬುಟ್ಟಿ ವಿತರಣೆ, ಐತಿಹಾಸಿಕ ಪ್ರವಾಸಿ ಕೇಂದ್ರ ಆಗಬೇಕು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಜಗಜೀವನ್ ರಾಮ್ ಭವನ ನಿರ್ಮಾಣ, ದೇಶದ ಒಳಿತಿಗಾಗಿ ಶ್ರಮಿಸಿರುವ ವ್ಯಕ್ತಿಗಳ ಪುತ್ಥಳಿ ನಿರ್ಮಾಣ, ನೂತನ ನಗರಸಭೆ ಕಟ್ಟಡ ನಿರ್ಮಾಣ, ಕನ್ನಡ ಭವನ, ಪತ್ರಕ ರ್ತರ ಭವನ, ವಿವಿಧ ರಸ್ತೆಯಲ್ಲಿ ನಾಮ ಫಲಕಗಳ ಅಳವಡಿಕೆ ಮುಂತಾದ ಹಲವಾರು ಕಾಮಗಾರಿಗಳ ಕುರಿತು ಸಾರ್ವಜನಿಕರು, ಜನ ಪ್ರತಿನಿಧಿಗಳು ತಿಳಿಸಿದ್ದಾರೆ.
ಯಾವುದೇ ರೀತಿಯಲ್ಲಿ ನಗರವು ಅಭಿವೃದ್ಧಿ ಹೊಂದಬೇಕಾದರೆ ಅದಕ್ಕೆ ಪೂರಕ ವಾಗಿ ಹಣದ ಅವಶ್ಯಕತೆ ಇರುವುದರಿಂದ ಆದಾಯ ಹೆಚ್ಚಿನ ಪ್ರಮಾಣದಲ್ಲಿ ನಗರಸಭೆಗೆ ಹರಿದು ಬರುವ ನಿಟ್ಟಿನಲ್ಲಿ ಮೊದಲ ಆದ್ಯತೆಯನ್ನು ನೀಡಿ. ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿ ನಗರದ ಜನತೆಗೆ ಮೂಲಭೂತ ಸೌಕರ್ಯಗಳ ಕೊರತೆ ಬರದ ರೀತಿಯಲ್ಲಿ ಈ ಸಾಲಿನ ಆಯವ್ಯಯ ಮಾಡಿ ಅಭಿವೃದ್ಧಿ ಮಾಡಲಾಗುತ್ತದೆ. ಇದಕ್ಕೆ ಸಾರ್ವಜನಿಕರು ಸಹ ಅಷ್ಟೇ ಉತ್ತಮವಾದ ಸಹಕಾರ ನೀಡಬೇಕೆಂದು ಹೇಳಿದರು.
ಪತ್ರಕರ್ತ ಶೇಖರಗೌಡ ಮಾತನಾಡಿ, ಕಳೆದ ಸಾಲಿನಲ್ಲಿ ಬಜೆಟ್ ಮಂಡಿಸಿದ ಸಮಯದಲ್ಲಿ ಅನೇಕ ಯೋಜನೆಯನ್ನು ಜಾರಿಗೆ ತರುವುದಕ್ಕೆ ವ್ಯವಸ್ಥೆ ಮಾಡಲಾಯಿತು. ಆದರೆ ಅವುಗಳಲ್ಲಿ ಒಂದೂ ಸಹ ಆಡಳಿತಾತ್ಮಕವಾಗಿ ಜಾರಿಗೆ ಬಂದಿಲ್ಲ . ಕೇವಲ ಲೆಕ್ಕ ಪುಸ್ತಕಕ್ಕೆ ಮಾತ್ರ ಸೀಮಿತವಾಗಿ ಬಜೆಟ್ ಮಾಡಲಾಗಿದೆ. ದಾವಣಗೆರೆ ಹಿಡಿತದಲ್ಲಿ ಇರುವ ಅಗಸನಕಟ್ಟೆ ಮತ್ತು ದಾವಣಗೆರೆ ವಾಟರ್ ವರ್ಕ್ಸ್ ಸ್ಥಳವನ್ನು ನಗರಸಭೆಗೆ ಹಸ್ತಾಂತರ ಮಾಡುವ ಮೂಲಕ ಇಲ್ಲಿನ ಜನತೆಗೆ ಅನುಕೂಲ ಮಾಡಬೇಕು.
ಜೆಡಿಎಸ್ ಪಕ್ಷದ ಮುಖಂಡ ಅಂಗಡಿ ಮಂಜುನಾಥ್, ದೂಡ ಮಾಜಿ ಸದಸ್ಯ ಹೆಚ್. ನಿಜಗುಣ, ನಗರಸಭೆ ಮಾಜಿ ಸದಸ್ಯ ಜಿ .ವಿ. ವೀರೇಶ್, ಹಬೀಬುಲ್ಲಾ, ನಗರಸಭೆ ಸದಸ್ಯರಾದ ಗುತ್ತೂರು ಜಂಬಣ್ಣ, ಹನುಮಂತಪ್ಪ, ಮೋಹನ್ ದುರುಗೋಜಿ, ದಾದಾಪೀರ್ ಭಾನುವಳ್ಳಿ, ಅಮ್ಜದ್ ಅಲಿ, ಹೆಚ್.ಕೆ. ಕೊಟ್ರಪ್ಪ, ಪತ್ರಕರ್ತ ಹೆಚ್. ಸುಧಾಕರ್, ಕೆ. ಮರಿದೇವ, ಪತ್ರಕರ್ತ ಚಿದಾನಂದ ಕಂಚಿಕೇರಿ, ಅಲಿ, ಮಂಜುಳಾ ಇನ್ನಿತರರು ವಿವಿಧ ವಿಷಯಗಳ ಕುರಿತು ಸಭೆಯ ಗಮನ ಸೆಳೆದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತ ಉದಯ ಕುಮಾರ್ ತಳವಾರ್, ಎಇಇ ಬಿರಾದಾರ, ನಗರಸಭೆ ಸದಸ್ಯರಾದ ಉಷಾ ಮಂಜು ನಾಥ್, ಅಶ್ವಿನಿ ಕೃಷ್ಣ, ನಿಂಬಕ್ಕ ಚಂದಪೂರ್, ಕೆ.ಜಿ. ಸಿದ್ದೇಶ್, ಎಂ.ಎಸ್. ಬಾಬುಲಾಲ್, ಮೆಹಬೂಬ್ ಬಾಷಾ, ಮುಜಾಮಿಲ್ ಬಿಲ್ಲು, ದಾದಾ ಖಲಂದರ್, ನೀತಾ ಮೆಹರ್ವಾಡೆ, ನಾಗರತ್ನ, ಪಕ್ಕೀರಮ್ಮ, ಉಷಾ ಮೋಹನ್ ಮತ್ತಿತರರು ಹಾಜರಿದ್ದರು.