ಸಂಪ್ರದಾಯದ ತರಳಬಾಳು ಹುಣ್ಣಿಮೆ

ಸಂಪ್ರದಾಯದ ತರಳಬಾಳು ಹುಣ್ಣಿಮೆ - Janathavaniಸಿರಿಗೆರೆ, ಫೆ.19- ಹಿಂದಿನ ತರಳಬಾಳು ಹುಣ್ಣಿಮೆಯ ಸಂದರ್ಭದಲ್ಲಿ ಪ್ರಾರಂಭದ ದಿನದಲ್ಲಿ ಶಿವಧ್ವಜಾರೋಹಣ, ಡಾ.ಶಿವಮೂರ್ತಿ ಶಿವಾಚಾರ್ಯರು ಭಕ್ತರೊಂದಿಗೆ ಮುಖ್ಯ ರಸ್ತೆಗಳಲ್ಲಿ ಪಾದಯಾತ್ರೆ ಮಾಡುತ್ತಿದ್ದರು. ನಂತರ ಸಂಜೆ ಧ್ವಜಾರೋಹಣ, ಉದ್ಘಾಟನೆ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ತರಳ ಬಾಳು ಹುಣ್ಣಿಮೆ ಎಂದರೆ ಅದೊಂದು ನಾಡಹಬ್ಬವಾಗಿ ಪರಿಣಮಿಸಿ ಆಯೋಜಿತ ಸ್ಥಳ ತಳಿರು, ತೋರಣಗಳಿಂದ ಸಭಾ ಮಂಟಪ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು. ಅಲ್ಲದೆ ಈ ಕಾರ್ಯಕ್ರಮಕ್ಕಾಗಿಯೇ ದೂರದ ಸ್ಥಳಗಳಿಂದ ಬಹುಸಂಖ್ಯೆಯ ಭಕ್ತರು ಬಂದು ಸೇರುತ್ತಿದ್ದರು. ಆದರೆ ಈ ವರ್ಷ ಕೊರೊನಾ ಕಾರಣದಿಂದಾಗಿ ಇದಾವುದೂ ಇಲ್ಲದೇ ಮಠದಲ್ಲಿ ಕೇವಲ ಸರಳವಾಗಿ ಸಂಪ್ರದಾಯದ ಪ್ರಕಾರ ನಡೆಯುತ್ತಿರುವುದು ಕಂಡುಬಂದಿದೆ. 

ತರಳಬಾಳು ಬೃಹನ್ಮಠದಲ್ಲಿ ಶುಕ್ರವಾರದಿಂದ ಅಂತರ್ಜಾಲ ಪ್ರಸಾರದ ಮೂಲಕ  ತರಳಬಾಳು ಹುಣ್ಣಿಮೆ ಯು ಸರಳವಾಗಿ ಸಂಜೆ  ಆರಂಭಗೊಂಡಿತು.  ಇದರ ಪ್ರಯುಕ್ತವಾಗಿ ಬೆಳಿಗ್ಗೆ ಶಾಲಾ- ಕಾಲೇಜು ವಿದ್ಯಾರ್ಥಿಗಳ ಹಾಗೂ ಶಿಕ್ಷಕರಿಂದ ಶಿವಮಂತ್ರ ಲೇಖನ, ವಚನ ಪ್ರಾರ್ಥನೆ, ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ಪ್ರತಿಮೆಗೆ ಹಾಗೂ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಕಂಚಿನ ಪ್ರತಿಮೆಗೆ ಬೃಹನ್ಮಠದ ವಟುಗಳಿಂದ ಪೂಜೆ ನಡೆಯಿತು. 

ಸಂಜೆ ಅಂತರ್ಜಾಲ ಕಾರ್ಯಕ್ರಮ ಪ್ರಾರಂಭಗೊಂಡಿತು. ಅಂತರ್ಜಾಲ ವೀಕ್ಷಣೆಗಾಗಿ ಇಲ್ಲಿನ ಐಕ್ಯಮಂಟಪದಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು.

ಅಂತರ್ಜಾಲದಲ್ಲಿ  ತರಳಬಾಳು ಹುಣ್ಣಿಮೆಯ ಸಿಂಹಾವಲೋಕನ ಸಂದರ್ಭದಲ್ಲಿ 1965 ಚಿತ್ರದುರ್ಗ, 2000 ಶಿವಮೊಗ್ಗ, 2002 ಹರಿಹರ, 2003 ಚಿಕ್ಕಮಗಳೂರು, 2014 ಶಿಗ್ಗಾಂವ್‌ಗಳಲ್ಲಿ ನಡೆದ ಹುಣ್ಣಿಮೆಯ ಮಹೋತ್ಸವದ ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಿತ್ತರಿಸಲಾಯಿತು.

ಶಿಗ್ಗಾಂವ ಹುಣ್ಣಿಮೆ ಸ್ಮರಣೆ : 2014 ರಲ್ಲಿ ಶಿಗ್ಗಾಂ ವ್‌ನಲ್ಲಿ ನಡೆದ ಹುಣ್ಣಿಮೆಯ ಕಾರ್ಯಕ್ರಮದಲ್ಲಿ ಡಾ.ಶಿವ ಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಚನ ಬಿತ್ತರಿಸಲಾಯಿತು. ಈ ಆಶೀರ್ವಚನದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿ ಮಹಿಳೆ ಕೌಟುಂಬಿಕ ಜೀವನದಲ್ಲಿ ಹೆಣ್ಣು-ಗಂಡು ಬೇಧಬಾವ ಇಲ್ಲದೆ ಮಕ್ಕಳನ್ನು ಸಾಕುವ ಜವಾಬ್ದಾರಿ ಹೊಂದಬೇಕೆಂದು ಹಾಗೂ ಪುರು ಷರು ಮಹಿಳೆಯರ ಮೇಲೆ ಒತ್ತಡ ಹೇರದೆ ಮಕ್ಕಳ ಬಗ್ಗೆ ಸಮಾನ ಅವಕಾಶ ಕಲ್ಪಿಸಿ ಬೆಳೆಸಬೇಕೆಂದರು. ಮಹಿಳೆಗೆ ದೇಶದಲ್ಲಿ ಗೌರವ ಹೆಚ್ಚು ಸಿಗುವಂತಾಗಲಿ ಎಂದರು.

ಈ ವೇಳೆ ಸರ್ಕಾರದ ಜಾಹೀರಾತಿನಲ್ಲಿ ಕೀರ್ತಿಗೊಬ್ಬ ಮಗ, ಆರತಿಗೊಬ್ಬ ಮಗಳು ಎಂದು ಇತ್ತು. ಆದರೆ ಸರ್ಕಾರ ಇನ್ನುಮುಂದೆ ಆಸ್ತಿಗೊಬ್ಬ ಮಗ ಆಸರೆಗೊಬ್ಬ ಮಗಳು ಇರಬೇಕೆಂದು ಮಂಡನೆ ಮಾಡಲಿ ಎಂದು ಸರ್ಕಾರದ ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದ ವಿಚಾರ ಅಂತರ್ಜಾಲದಲ್ಲಿ ಗಮನ ಸೆಳೆಯಿತು. 

ಅಲ್ಲದೆ ವಿಭೂತಿ ಪುರುಷರು ವಜ್ರಕ್ಕಿಂತಲೂ ಕಠಿಣ, ಹೂವಿಗಿಂತಲೂ ಕೋಮಲ, ಕಾಠಿಣ್ಯ ಮತ್ತು ಕೋಮಲತೆ ಇವೆರಡೂ ವಿರುದ್ಧ ಪದಗಳು. ಒಂದೇ ಕಾಲದಲ್ಲಿ ಇವೆರಡೂ ಇರಲು ಸಾಧ್ಯವಿಲ್ಲ. ಆದರೆ ನಮ್ಮ ಹಿರಿಯ ಗುರುಗಳಲ್ಲಿ ಈ ಎರಡೂ ಗುಣಗಳನ್ನು ಕಂಡಿದ್ದೆವು. ಅವರು ಎಷ್ಟು ಕಠೋರವೋ ಅಷ್ಟೇ ಕೋಮಲ ಸ್ವಭಾವವುಳ್ಳವರು ಎಂದು ಸ್ಮರಿಸಿದ್ದು ಅಂತರ್ಜಾಲದಲ್ಲಿ ಬಿತ್ತರಗೊಂಡಿತು.

error: Content is protected !!