ದಾವಣಗೆರೆ, ಸೆ.8- 121 ಕೆರೆಗಳ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ, 57 ಕೆರೆಗಳ ಜಗಳೂರು ಏತ ನೀರಾವರಿ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿ ಎಂದು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಜಿ.ಎಂ.ಐ.ಟಿ. ಅತಿಥಿ ಗೃಹದಲ್ಲಿ ಕರೆದಿದ್ದ ನೀರಾವರಿ ಯೋಜನೆಗಳ ಸಾಧಕ ಬಾಧಕಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಈ ಏತ ನೀರಾವರಿ ಯೋಜನೆಗಳಡಿ ಕೆಲಸ ಮಾಡಲು ಸಿಕ್ಕಿರುವ ಅವಕಾಶ ನಿಮ್ಮೆಲ್ಲರ ಪುಣ್ಯ ಎಂದು ಭಾವಿಸಿ ಕಾರ್ಯ ನಿರ್ವಹಿಸುವಂತೆ ಎಂಜಿನಿಯರ್ಗಳಿಗೆ ಕಿವಿ ಮಾತು ಹೇಳಿದರು.
ಕೆಲಸ ಮಾಡುವ ಇಚ್ಚಾಶಕ್ತಿ ನಿಮಗಿರಬೇಕು. ಆಗ ನಿಮ್ಮ ಈ ಕೆಲಸವನ್ನು ಮುಂದಿನ ತಲೆಮಾರು ನೆನಪಿನಲ್ಲಿಟ್ಟುಕೊಳ್ಳು ತ್ತದೆ. ಭರಮಸಾಗರ ಏತ ನೀರಾವರಿ ಯೋಜನೆಗೆ ಅನೇಕ ಅಡ್ಡಿ ಆತಂಕಗಳು ಎದುರಾದವು. ಅವನ್ನೆಲ್ಲಾ ಮೆಟ್ಟಿನಿಂತು ಕಳೆದ ಸೆ.29 ರಂದು ಭರಮಸಾಗರ ಕೆರೆಗೆ ನೀರು ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದೇ ಇಚ್ಚಾಶಕ್ತಿಯನ್ನು ಇತರೆಡಿಯಲ್ಲಿ ಪ್ರದರ್ಶಿಸಿ ಎಂದು ಹೇಳಿದರು.
ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯಡಿ ಯಾವುದೇ ಕಾರಣಕ್ಕೂ ಸಾಸ್ವೆಹಳ್ಳಿ ಬಳಿಯಿಂದ ಎತ್ತುವ ನೀರನ್ನು ಸೂಳೆಕೆರೆಯ ನೀರಿನೊಂದಿಗೆ ಮಿಶ್ರ ಮಾಡಬೇಡಿ. ಒಂದು ವೇಳೆ ಮಿಶ್ರಣ ಮಾಡಿದ್ದೇ ಆದಲ್ಲಿ ಈಗಾಗಲೇ ಅನೇಕ ಕುಡಿಯುವ ನೀರಿನ ಯೋಜನೆಗಳ ಆಗರವಾಗಿರುವ ಶಾಂತಿಸಾಗರ ಕೋಲಾಹಲಕ್ಕೆ ಕಾರಣವಾಗಬಹುದು ಎಂದು ಸಲಹೆ ನೀಡಿದರು.
ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸಾಸ್ವೆಹಳ್ಳಿ ಬಳಿ ತುಂಗ ಭದ್ರಾ ನದಿಯಿಂದ ಎತ್ತುವ ನೀರನ್ನು ಶಾಂತಿಸಾಗರಕ್ಕೆ ಹೊಂದಿಕೊಂಡಂತೆ ಸುಮಾರು 10-12 ಎಕರೆ ಜಾಗದಲ್ಲಿ ಸಮತೋಲನಾ ಜಲಾಶಯ ನಿರ್ಮಾಣ ಮಾಡಿ ಅದಕ್ಕೆ ತುಂಬಿಸಿ, ನಂತರ ಅಲ್ಲಿಂದ ಮುಂದಿನ ಕೆರೆಗಳಿಗೆ ನೀರು ಹರಿಸಿ ಎಂದು ಶ್ರೀಗಳು ಸಲಹೆ ನೀಡಿದರು.
ಏತ ನೀರಾವರಿ ಯೋಜನೆಯಡಿ ಬಂದೊದಗಬಹುದಾದ ಎಲ್ಲಾ ಸಮಸ್ಯೆಗಳು ಭರಮಸಾಗರ ಏತ ನೀರಾವರಿ ಯೋಜನೆಯಡಿ ಬಂದೊದಗಿದ್ದವು. ಅವುಗಳನ್ನೆಲ್ಲಾ ಖುದ್ದು ನಾನೇ ಮುಂದೆ ನಿಂತು ಪರಿಹರಿಸಿದ್ದೇನೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಸಭೆಯ ಗಮನಕ್ಕೆ ತಂದರು.
ನೀವು ಸಮಸ್ಯೆಗಳೇನೇ ಇದ್ದರೂ ನನ್ನ ಗಮನಕ್ಕೆ ತನ್ನಿ. ಸಮಸ್ಯೆಗಳನ್ನೇ ಹೇಳದಿದ್ದರೆ ನೀವು ಕೆಲಸ ಮಾಡುತ್ತಿಲ್ಲ ಎಂದರ್ಥ. ಕೆಲಸ ಮಾಡಲು ಆಸಕ್ತಿ ಇಲ್ಲದವರು ಬೇರೆ ಕಡೆ ವರ್ಗಾವಣೆ ಮಾಡಿಸಿಕೊಳ್ಳಿ. ಹಗಲು-ರಾತ್ರಿ ಎನ್ನದೇ ಕೆಲಸ ಮಾಡುವವರು ಮಾತ್ರ ಇದರಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿದರು.
ಶ್ರೀಗಳಿಗೆ ಏತ ನೀರಾವರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ವಿಶೇಷ ವಿದ್ವತ್ತು ಇದೆ. ನಮಗೆ ಊಹಿಸಲು ಸಾಧ್ಯವಾಗದಂತಹ ಸಮಸ್ಯೆಗಳನ್ನು ಪೂಜ್ಯರೂ ಊಹಿಸಬಲ್ಲರು. ರವಿ ಕಾಣದ್ದನ್ನು ಕವಿ ಕಂಡ ಎನ್ನುವ ರೀತಿ ಪೂಜ್ಯರು ಕವಿಗಳಿದ್ದ ಹಾಗೆ. ಅವರ ಮಾರ್ಗದರ್ಶನದಲ್ಲಿ ನಾವು ಮುಂದೆ ಸಾಗೋಣ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ನೀವು ನಮಗೆ ತಿಳಿಸಿದ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಪರಿಹರಿಸಿಕೊಟ್ಟಿದ್ದೇವೆ. ರೈಲ್ವೆ ಲೈನ್ ಕ್ರಾಸಿಂಗ್ ಅಥವಾ ಬೆಸ್ಕಾಂ ನ ಹೈಟೆನ್ಷನ್ ಲೈನ್ ಕೆಳಗೆ ಪೈಪ್ ಲೈನ್ ಹಾಕಲು ಅನುಮತಿ ಯಂತಹ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿದ್ದೇವೆ. ಇಂತಹ ಯಾವುದೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ಅಥವಾ ಆಯಾ ಭಾಗದ ಶಾಸಕರುಗಳ ಗಮನಕ್ಕೆ ತಂದರೆ ಹೆಚ್ಚಿನ ಕಾಳಜಿ ವಹಿಸಿ ಪರಿಹರಿಸುತ್ತಾರೆ ಎಂದರು.
ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ ಮಾತನಾಡಿ, ಅನೇಕ ಕಡೆ ಗ್ರಾಮಸ್ಥರ ಹಾಗೂ ರೈತರುಗಳ ಅಡಚಣೆಯನ್ನು ನಾನು ಪರಿಹರಿಸಿದ್ದೇನೆ ಎಂದರು.
ಶಾಸಕರುಗಳಾದ ಎಸ್.ವಿ.ರಾಮಚಂದ್ರ, ಪ್ರೊ. ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಸಿ.ಬಿ. ರಿಷ್ಯಂತ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಶಿವಾನಂದ ಬಣಕಾರ್, ಅಧೀಕ್ಷಕ ಅಭಿಯಂತರ ರಮೇಶ್, ಕೆ.ಪಿ.ಟಿ.ಸಿ.ಎಲ್. ಅಧೀಕ್ಷಕ ಅಭಿಯಂತರರಾದ ಸುಭಾಶ್ಚಂದ್ರ, ಕಾರ್ಯಪಾಲಕ ಅಭಿಯಂತರರುಗಳಾದ ಮಲ್ಲಪ್ಪ, ಸುರೇಶ್ ಸೇರಿದಂತೆ ಅನೇಕ ಅಧಿಕಾರಿಗಳು ಸಭೆಯಲ್ಲಿದ್ದರು.