ದಾವಣಗೆರೆ, ಫೆ. 19 – ನವೀಕೃತ ರೈಲ್ವೆ ನಿಲ್ದಾಣದ ಉದ್ಘಾಟನೆಯನ್ನು ಮಾರ್ಚ್ 27 ಇಲ್ಲವೇ ಏಪ್ರಿಲ್ 3-4ರಂದು ನೆರವೇರಿಸಲಾ ಗುವುದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ.
ರೈಲ್ವೆ ನಿಲ್ದಾಣ ನವೀಕರಣ ಕಾಮಗಾರಿ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಇನ್ನು 20-25 ದಿನಗಳಲ್ಲಿ ಪೂರ್ಣವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಎಸ್ಕಲೇಟರ್‌ಗೆ 5 ಕೋಟಿ ರೂ. ಸೇರಿದಂತೆ ಒಟ್ಟು 20 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ಸುಂದರ ಹಾಗೂ ವಿಶಾಲವಾದ ನಿಲ್ದಾಣ ರೂಪುಗೊಂಡಿದೆ ಎಂದು ಹೇಳಿದರು.
ಮಂಡಿಪೇಟೆ ಕಡೆಯ ಎರಡನೇ ಪ್ರವೇಶ ದ್ವಾರ ಸುಂದರವಾಗಿ ಕಾಣಲು ಅಲ್ಲಿ ಅಡ್ಡವಾಗಿ ರುವ ಪಾಲಿಕೆಯ 8-9 ಅಂಗಡಿಗಳನ್ನು ತೆರವುಗೊಳಿಸಲು ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಡಿಸಿಎಂ ಲೇಔಟ್ ಬಳಿಯ ಕ್ರಾಸಿಂಗ್‌ನಲ್ಲಿ ರಸ್ತೆ ನೇರಗೊಳಿಸುವ ಕಾಮಗಾರಿಯೂ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ್ದು, ಮಾರ್ಚ್ 20ರ ಒಳಗೆ ಕೆಲಸ ಮುಗಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರೈಲ್ವೆ ನಿಲ್ದಾಣದ ಜೊತೆಗೆ ಅದನ್ನೂ ಉದ್ಘಾಟಿಸ ಲಾಗುವುದು ಎಂದವರು ಹೇಳಿದರು.
ಉಪ ವಿಭಾಗೀಯ ಕಚೇರಿಯನ್ನು ಎರಡು ತಿಂಗಳಲ್ಲಿ ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಿಸಿ ಆ ಜಾಗವನ್ನು ರೈಲ್ವೆಗೆ ವಹಿಸಲಾಗುವುದು. ಈ ಜಾಗದಲ್ಲಿ ಪ್ರವೇಶ ಹಾಗೂ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು. ಈ ಕಾಮಗಾರಿ ಸೇರಿದಂತೆ ರೈಲ್ವೆ ನಿಲ್ದಾಣಕ್ಕೆ ಎರಡನೇ ಮಹಡಿ ನಿರ್ಮಿಸುವ ಎರಡನೇ ಹಂತದ ಕಾಮಗಾರಿಗೆ ಪ್ರಸ್ತಾವನೆ ಕಳಿಸಲಾಗುವುದು ಎಂದವರು ತಿಳಿಸಿದರು.
ಹರಿಹರ ರೈಲ್ವೆ ನಿಲ್ದಾಣವನ್ನೂ ಸಹ ಉನ್ನತೀಕರಿಸುವ ಪ್ರಸ್ತಾವನೆ ಇದೆ. ಕೊರೊನಾ ಕಾರಣದಿಂದಾಗಿ ಈ ಪ್ರಸ್ತಾವನೆ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಶೀಘ್ರದಲ್ಲೇ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಮೆಡಿಕಲ್ ಕಾಲೇಜ್ ಬೇಡಿಕೆ : ಮುಂಬರುವ ರಾಜ್ಯ ಬಜೆಟ್‌ನಲ್ಲಿ ದಾವಣಗೆರೆಗೆ ವೈದ್ಯಕೀಯ ಕಾಲೇಜು, ಕತ್ತಲಗೆರೆ ಫಾರಂಗೆ ಕೃಷಿ ಕಾಲೇಜು, ಹಾಲು ಉತ್ಪಾದಕರ ಒಕ್ಕೂಟ ವಿಭಜನೆ ಮಾಡಿ ದಾವಣಗೆರೆ ಪ್ರತ್ಯೇಕ ಒಕ್ಕೂಟ ಮಾಡಿಕೊಡುವಂತೆ ತಾವು ಹಾಗೂ ಜಿಲ್ಲೆಯ ಬಿಜೆಪಿ ಶಾಸಕರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ಮನವಿ ಮಾಡಿಕೊಂಡಿರುವುದಾಗಿ ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಮೇಯರ್ ಬಿ.ಜಿ ಅಜಯ್ ಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ರೈಲ್ವೆ ಇಲಾಖೆ ಮೈಸೂರು ವಿಭಾಗದ ಡಿ.ಆರ್.ಎಂ. ರಾಹುಲ್ ಅಗರ್‌ವಾಲ್ ಮತ್ತಿತರರು ಉಪಸ್ಥಿತರಿದ್ದರು.