ಆನಗೋಡು ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ತರಳಬಾಳು ಶ್ರೀ ಸಲಹೆ
ದಾವಣಗೆರೆ, ಸೆ.8- ಕೆರೆಯ ನೀರು ಪವಿತ್ರವಾದದ್ದು. ಅದನ್ನು ಯಾವ ಕಾರಣಕ್ಕೂ ಅಶುದ್ಧಗೊಳಿಸಬೇಡಿ. ಪವಿತ್ರ ಭಾವನೆಯಿಂದಲೇ ಕೆರೆಗೆ ಬನ್ನಿ ಎಂದು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಆನಗೋಡು ಗ್ರಾಮದ 86 ಎಕರೆ ವಿಸ್ತೀರ್ಣದ ಕೆರೆಯು ಏತ ನೀರಾವರಿ ಹಾಗೂ ಇತ್ತೀಚೆಗೆ ಸುರಿದ ಮಳೆಯಿಂದಾಗಿ ತುಂಬಿದ ಹಿನ್ನೆಲೆಯಲ್ಲಿ ಶ್ರೀಗಳು, ಸಂಸದ ಜಿ.ಎಂ.ಸಿದ್ದೇಶ್ವರ ಅವರ ನೇತೃತ್ವದಲ್ಲಿ ಶುಕ್ರವಾರ ಬಾಗಿನ ಅರ್ಪಿಸಿ ಮಾತನಾಡಿದರು.
ಕೆರೆಗಳು ಒಣಗಿದ ಮೇಲೆ `ಊರಿಗೆ ಬಂದವಳು ನೀರಿಗೆ ಬಾರಳೇ’ ಎಂಬ ಗಾದೆ ಮಾತಿಗೆ ಅರ್ಥವಿಲ್ಲವಾಗಿದೆ. ಆದರೆ `ಊರಿಗೆ ಬಂದವನು ಬಾರಿಗೆ ಬರುವುದಿಲ್ಲವೇ?’ ಎಂಬ ಹೊಸ ಗಾದೆ ಹುಟ್ಟಿಕೊಂಡಿದೆ. ಈ ರೀತಿಯಾಗದೆ ಕೆರೆಯ ನೀರು ಬಳಸಿ ಆರ್ಥಿಕವಾಗಿ ಪ್ರಗತಿ ಸಾಧಿಸಿ, ಬಂದ ಹಣವನ್ನು ಬಾರ್‌ಗೆ ಹಾಕಿ ದರ್ಬಾರ್ ಮಾಡಬಾರದು ಎಂದು ಗ್ರಾಮಸ್ಥರಿಗೆ ಶ್ರೀಗಳು ಕಿವಿ ಮಾತು ಹೇಳಿದು.
ನೀರು ಸಿಗದೆ ಕೃಷಿ ಚಟುವಟಿಕೆ ಕಷ್ಟ. ಎಷ್ಟೋ ತೋಟಗಳಲ್ಲಿನ ಮರಗಳನ್ನು ಕಡಿದ ಉದಾಹರಣೆಗಳಿವೆ. ಮಾಡಿದ ಸಾಲಕ್ಕಾಗಿ ಎಷ್ಟು ಕಷ್ಟ ಪಟ್ಟಿದ್ದೀರಿ ಎಂಬುದೂ ನಮಗೆ ತಿಳಿದಿದೆ. ಇದೀಗ ಕೆರೆಗೆ ನೀರು ಹರಿದಿರುವುದು ನಿಮಗೆ, ನಮಗೆಲ್ಲಾ ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ಜವಾಬ್ದಾರಿಯಿಂದ ಉತ್ತಮ ಬೆಳೆಗಳನ್ನು ಬೆಳೆದು ಬಂದಂತಹ ಆದಾಯದಿಂದ ನಿಮ್ಮ ಕುಟುಂಬದವರಿಗೆ ಆಸರೆಯಾಗಿ ಉತ್ತಮ ಜೀವನ ಹೊಂದಬೇಕು ಎಂದರು.
ಹೆಂಡತಿಗೆ ಒಡವೆ ಮಾಡಿಸಿ
ದುಡಿದ ಹಣವನ್ನು ಕುಟುಂಬದ ಸದಸ್ಯರಿಗೆ ಹಂಚಿದಾಗ ನಿಮ್ಮ ಸಂಪತ್ತು ವೃದ್ಧಿಯಾಗುತ್ತದೆ. ಬಂದಿರುವ ಆದಾಯದಲ್ಲಿ ಪತಿಯಾದವರು ಪತ್ನಿಯರಿಗೆ ಒಡವೆ ಮಾಡಿಸಿ ಕೊಟ್ಟರೆ ಅದು ಬ್ಯಾಂಕ್ನಲ್ಲಿ ಡೆಪಾಸಿಟ್ ಮಾಡಿದ ಹಾಗೆ ಎಂದು ತರಳಬಾಳು ಶ್ರೀಗಳು ಹೇಳಿದರು.
ಒಬ್ಬ ಮಹಿಳೆಯು ಒಂದು ಬ್ಯಾಂಕ್ ಇದ್ದ ಹಾಗೆ. ಮಹಿಳೆಯರು ಹಣವನ್ನು ದುರುಪಯೋಗ ಮಾಡುವುದಿಲ್ಲ, ಬದಲಾಗಿ ಅವರು ಕೂಡಿಡುವ ಮನಸ್ಸುಳ್ಳವರು ಎಂದು ನಗೆ ಚಟಾಕಿ ಹಾರಿಸಿದಾಗ ಯುವಕರು ಶ್ರೀಗಳ ಮಾತಿಗೆ ಚಪ್ಪಾಳೆ ತಟ್ಟಿದರು.
ಮಲ್ಲಶೆಟ್ಟಿಹಳ್ಳಿ ಗ್ರಾಮದಲ್ಲಿ ದೇವ ಸ್ಥಾನಕ್ಕೆ ಸಂಬಂಧಿಸಿದ 20 ಎಕರೆಯಷ್ಟು ಜಾಗವನ್ನು ಗ್ರಾಮದ ಸಹಕಾರದಿಂದ ನೀರನ್ನು ಸಂಗ್ರಹಿಸುವುದಕ್ಕೆ ದೊಡ್ಡ ಕೆರೆ ನಿರ್ಮಿಸಿ ರೈತರಿಗೆ ಅನುಕೂಲವಾಗಿ ರುವುದನ್ನು ಶ್ರೀಗಳು ಸ್ಮರಿಸಿದರು.
ತರಳಬಾಳು ಡಾ.ಶ್ರೀಗಳ ಕೆರೆ ಹೋರಾಟ ಮತ್ತು ರೈತ ಪರ ಕಾಳಜಿಗೆ ಸಂಪೂರ್ಣ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದರು.
ತರಳಬಾಳು ಶ್ರೀಗಳವರ 22 ಕೆರೆ ಹೋರಾಟದಲ್ಲಿ ನಾವು ಯಾವ ಸಹಕಾರ ಬೇಕಾದರೂ ನೀಡಲು ಮುಂದಾಗುತ್ತೇವೆ ಎಂದು ಹೆಬ್ಬಾಳು ಮಠದ ಶ್ರೀ ಮಹಾಂತರುದ್ರೇಶ್ವರ ಸ್ವಾಮೀಜಿ ನುಡಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಗ್ರಾಮಗಳ ರೈತರ ಕಾಳಜಿಗಾಗಿ ಕೆರೆ ನೀರಿನ ಹೋರಾಟದಲ್ಲಿ ಡಾ.ಶ್ರೀಗಳವರು ಹಗಲಿರುಳು ಶ್ರಮಿಸುತ್ತಾ ಬಂದಿದ್ದಾರೆ. ಇಂತಹ ಸ್ವಾಮೀಜಿಯವರನ್ನು ಪಡೆದ ನಾವೇ ಧನ್ಯರು ಎಂದರು.
ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಜಿ.ಪಂ. ಮಾಜಿ ಸದಸ್ಯ ಕೆ.ಎಸ್. ಬಸವರಾಜ್, ಶಶಿಧರ ಹೆಮ್ಮನ ಬೇತೂರು ಮತ್ತಿತರರು ಉಪಸ್ಥಿತರಿದ್ದರು.