ಜಿಲ್ಲೆಯಲ್ಲಿ ಅಸ್ಪೃಷ್ಯತೆ ನಿವಾರಣೆಗೆ ಕ್ರಮ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಭರವಸೆ

ದಾವಣಗೆರೆ, ಅ.8- ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದು, ಪೊಲೀಸ್ ಇಲಾಖೆ ದೌರ್ಜನ್ಯ ತಪ್ಪಿಸುವಲ್ಲಿ ಕ್ರಮ ವಹಿಸಬೇಕು ಎಂದು ಎಸ್.ಸಿ., ಎಸ್.ಟಿ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರುಗಳು ಆಗ್ರಹಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ   ಎಸ್ಪಿ ಸಿ.ಬಿ. ರಿಷ್ಯಂತ್ ಅವರ ಅಧ್ಯಕ್ಷತೆಯಲ್ಲಿ  ಇಂದು ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯಲ್ಲಿ ಮುಖಂಡರುಗಳು ತಮ್ಮ ಅಳಲು ತೋಡಿಕೊಂಡರು.

ಎಸ್ಪಿ ರಿಷ್ಯಂತ್ ಮಾತನಾಡಿ, ಜಿಲ್ಲೆಯಲ್ಲಿ ಅಸ್ಪೃಷ್ಯತೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅಪರಾಧ ಪ್ರಕರಣಗಳು ಕಂಡುಬಂದರೆ ತಕ್ಷಣ 112ಕ್ಕೆ ಕರೆ ಮಾಡಿ. ಬೇಕಿದ್ದರೆ ತಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಹೀಗೆ ಕರೆ ಮಾಡುವುದರಿಂದ ಪೊಲೀಸರು ತಕ್ಷಣ ಸ್ಪಂದಿಸುತ್ತಾರೆ ಎಂದು ಹೇಳಿದರು.

ಜಗಳೂರು ತಾಲ್ಲೂಕಿನ ಮುಖಂಡ ಸತೀಶ್, ತಾಲ್ಲೂಕಿನ ಮಡ್ಡರಹಳ್ಳಿ ಚೌಡೇಶ್ವರಿ ದೇವಾಲಯದಲ್ಲಿ ಹಬ್ಬದ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಬೇವಿನುಡಿಗೆ, ನಾಲಿಗೆಗೆ ತಂತಿ ಸಿಕ್ಕಿಸಿಕೊಳ್ಳುವಂತಹ ಆಚರಣೆಗಳನ್ನು ಪರಿಶಿಷ್ಟ ಜಾತಿ ಜನಾಂಗದವರು ಹೆಚ್ಚಾಗಿ ಅನುಸರಿಸುತ್ತಿದ್ದು, ಅವರುಗಳಿಗೆ ಅಧಿಕಾರಿಗಳ ಮಟ್ಟದಲ್ಲಿ ಸೂಕ್ತ ತಿಳುವಳಿಕೆ ನೀಡಿ ಇಂತಹ ಅನಿಷ್ಟ ಪದ್ಧತಿಗಳಿಂದ ಹೊರ ತರಲು ಸರ್ಕಾರ ಪ್ರಯತ್ನಿಸಲಿ ಎಂದರು. ಪ್ರತಿಕ್ರಿಯಿಸಿದ ಎಸ್ಪಿ, ಇಂತಹ ಆಚರಣೆಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

ಜಗಳೂರು ಮುಖಂಡ ಹಾಲೇಶ್ , ಉಚ್ಚಂಗಿದುರ್ಗ ದೇವಸ್ಥಾನದಲ್ಲಿ ನಡೆಯುವ ಕಾರಹುಣ್ಣಿಮೆ ಹಬ್ಬಕ್ಕೆ ದೇವದಾಸಿಯರನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದು, ನಮ್ಮ ಭಾಗದಿಂದ ಹೆಚ್ಚು ಜನ ಹೋಗುತ್ತಿದ್ದಾರೆ. ಇದನ್ನು ತಡೆಯಬೇಕು ಎಂದರು. 

ಹರಿಹರ ತಾಲ್ಲೂಕಿನ ಮುಖಂಡರು ಭಾನುವಳ್ಳಿ ಗ್ರಾಮದಲ್ಲಿ 12 ಜನ ಮಾಜಿ ದೇವದಾಸಿಯರಿದ್ದು, ಅವರಿಗೆ ಮನೆ ಮಂಜೂರಾದರೂ ಇನ್ನೂ ಮನೆ ಕಟ್ಟಿಕೊಟ್ಟಿಲ್ಲ ಎಂದರು.  ನ್ಯಾಮತಿ ತಾಲ್ಲೂಕಿನ ರಂಗನಾಥ.ಎ.ಕೆ,  ಒಂದೂವರೆ ಎಕರೆ ಪ್ರದೇಶದಲ್ಲಿ ಹಿಂದೂ ಸ್ಮಶಾನ ಭೂಮಿ ನಿರ್ಮಿಸಿದ್ದು, ಪರಿಶಿಷ್ಟ ಜಾತಿಯ ಹೆಣ ಸುಡಲು ಸ್ಮಶಾನಕ್ಕೆ ಹೋದರೆ ಸುಡ ಲು ಅನುಮತಿ ನೀಡುವುದಿಲ್ಲ ಎಂದು ದೂರಿದರು.

ಉಪ ವಿಭಾಗಾಧಿಕಾರಿ ಶ್ರೀಮತಿ ಮಮತ ಹೊಸಗೌಡರ್ ಮಾತನಾಡಿ, ಮನುಷ್ಯ ಬದುಕಿದ್ದಾಗ ಸಮಾನತೆಯಿಂದ ಬದುಕಲ್ಲ, ಸತ್ತ ಮೇಲಾದರೂ ಸಮಾನತೆಯಿಂದ ಇರಬೇಕು ಎಂಬ ಆಶಯದೊಂದಿಗೆ ಇರುವ ಸುತ್ತೋಲೆ ಮೇರೆಗೆ ಹಿಂದೂ ರುದ್ರ ಭೂಮಿ ಒದಗಿಸಲಾಗಿದೆ ಎಂದರು. ಎಸ್.ಪಿ ಪ್ರತಿಕ್ರಿಯಿಸಿ  ಈ ರೀತಿ ಭೇದ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದರು. 

ನೀರ್ಥಡಿ ಗ್ರಾಮದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಇಂದಿಗೂ ಮಾದಿಗರನ್ನು ಒಳಗಡೆ ಪ್ರವೇಶಿಸಲು ಬಿಡದೆ ದೌರ್ಜನ್ಯವೆಸಗಲಾಗುತ್ತಿದೆ ಎಂದು ಮುಖಂಡರು ದೂರಿದರು. 

ಸಭೆಯಲ್ಲಿ  ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ,  ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೌಸರ್ ರೇಷ್ಮಾ, ಮಹಿಳಾ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ವಿಜಯ್‍ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಪರಿಶಿಷ್ಟ ಜಾತಿ ಪಂಗಡಗಳ ಸಂಘಟನೆ ಮುಖಂಡರಾದ ಗುಮ್ಮನೂರು ಮಲ್ಲಿಕಾರ್ಜುನ್, ಹೆಗ್ಗೆರೆ ರಂಗಪ್ಪ, ಆವರಗೆರೆ ವಾಸು, ತಿಮ್ಮಣ್ಣ, ಹನುಮಂತಪ್ಪ, ರುದ್ರೇಶ್, ಹರೀಶ್, ಸೋಮಲಾಪುರ ಹನುಮಂತಪ್ಪ, ಪಂಚಾಕ್ಷರಯ್ಯ ಮತ್ತಿತರರು ಉಪಸ್ಥಿತರಿದ್ದರು.

error: Content is protected !!