ಸಿರಿಗೆರೆ, ಅ.7- ಹತ್ತು ವರ್ಷಗಳಿಂದ ತುಂಬದ ಶಾಂತಿ ವನದ ಜಲಾಶಯ ಈಗ ವರುಣನ ಕೃಪೆಯಿಂದ ತುಂಬಿ ಹರಿಯುವ ಭಾಗ್ಯ ದೊರೆತಿರುವುದು ಸಂತಸದ ಸಂಗತಿ ಎಂದು ತರಳಬಾಳು ಬೃಹನ್ಮಠದ ಜಗದ್ಗುರು ಡಾ.ಶಿವ ಮೂರ್ತಿ ಶಿವಾಚಾರ್ಯ ಸ್ವಾಮೀಜಿ ಎಂದು ಹೇಳಿದರು.
ಜಲಾಶಯಕ್ಕೆ ಸುತ್ತ ಮುತ್ತಲಿನ ಗ್ರಾಮಸ್ಥರೊಂದಿಗೆ ಬಾಗಿನ ಅರ್ಪಿಸಿ ಶ್ರೀಗಳು ಮಾತನಾಡುತ್ತಾ, ಮನುಷ್ಯನ ಮೂಲಭೂತ ಅವಶ್ಯಕತೆಯೇ ನೀರು. ಈ ತರಹದ ಯೋಜನೆಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಆಗಬೇಕು. ಆಗ ಬಹುತೇಕ ರೈತರ ಸಮಸ್ಯೆಗಳು ನಿವಾರಣೆಯಾಗುತ್ತವೆ. ಜಲಾಶಯ ತುಂಬಿ ಹರಿದಿದ್ದು ನಮಗಿಂತ ಹೆಚ್ಚಾಗಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಂತೋಷವಾಗಿದೆ ಎಂದರು.
ಬುಧವಾರ ರಾತ್ರಿಯಿಂದಲೂ ಸುರಿದ ಮಳೆ ಗಾದ್ರಿಗುಡ್ಡ, ಮೆದಿಕೇರಿಪುರ ಗುಡ್ಡ, ಪಳಿಕೇಹಳ್ಳಿ ಗುಡ್ಡಗಳಿಗೆ ಹೆಚ್ಚು ಮಳೆಯಾಗಿರುವುದರಿಂದ ಜಲಾಶಯಕ್ಕೆ ನೀರು ಬರುವುದು ಖಚಿತವಾಗಿತ್ತು. ನೀರು ಮೂರು-ನಾಲ್ಕು ಹಳ್ಳಿಗಳ ಹಳ್ಳಗಳನ್ನು ದಾಟಿಬರುವ ಹೊತ್ತಿಗೆ ಜಲಾಶಯಕ್ಕೆ ನೀರು ಬರುತ್ತಿರಲಿಲ್ಲ. ಪ್ರಸ್ತುತ ವರ್ಷದಲ್ಲಿ ಮಳೆಯರಾಯ ಮಳೆ ಸುರಿಸಿ ಜಲಾಶಯ ತುಂಬಿ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ವರದಾನವಾಗಿದೆ. ಈ ಸಂತಸದ ಕ್ಷಣವನ್ನು ನೋಡಿ ಆನಂದಿಸಲು ಸುತ್ತಮುತ್ತಲಿನ ಭಾಗದ ರೈತರಿಗೆ ಮತ್ತು ಮಹಿಳೆಯರಿಗೆ ಗುರುವಾರ ಭೇಟಿ ಮಾಡಲು ತಿಳಿಸಿ, ಬಾಗಿನ ಅರ್ಪಿಸಲಾಯಿತು.
ಶಾಂತಿವನದ ಜಲಾಶಯ 2011 ರಲ್ಲಿ ಸಂಪೂರ್ಣ ತುಂಬಿತ್ತು, ಇತ್ತೀಚಿನ ದಿನಗಳಲ್ಲಿ ಹೆಚ್ಚು ನೀರು ಸಂಗ್ರಹವಾಗಲೆಂದು ಈ ಡ್ಯಾಂ ಆಳ ಪಡಿಸಲಾಗಿತ್ತು. ಹತ್ತು ವರ್ಷಗಳ ನಂತರ ಡ್ಯಾಮ್ ಸಮೃದ್ಧವಾಗಿ ತುಂಬಿರುವುದು ಈ ಭಾಗದ ರೈತರ ಬವಣೆ ತೀರಿದಂತಾಗಿದೆ, ಇನ್ನು 3 ವರ್ಷಗಳ ಕಾಲ ಅಂತರ್ಜಲ ಮಟ್ಟ ಸ್ಥಿರವಾಗಿರುತ್ತದೆ. ಹಳೇರಂಗಾಪುರ, ಸೀಗೇಹಳ್ಳಿ, ಹಳವುದರ, ಹಂಪನೂರು, ಲಿಂಗವ್ವನಾಗ್ತಿಹಳ್ಳಿ, ಅಳಗವಾಡಿ, ಅರಬಗಟ್ಟೆ, ಹೆಗ್ಗರೆ, ಕೊಳಹಾಳು ಗ್ರಾಮಗಳಿಗೆ ಅಂತರ್ಜಲ ಹೆಚ್ಚಾಗಿ ಬೋರ್ನಲ್ಲಿ ನೀರು ಹೆಚ್ಚು ಬರಲಿದೆ ಎಂದು ಅಂತರ್ಜಲ ತಜ್ಞರು ತಿಳಿಸಿದ್ದಾರೆ.
ಸಿರಿಗೆರೆಯ ಶ್ರೀಮಠದ ವತಿಯಿಂದ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಅಧ್ಯಕ್ಷತೆಯಲ್ಲಿ ‘ಶಾಂತಿವನ ಜಲಾಶಯ’ ವನ್ನು 2003 ರಲ್ಲಿ ನಿರ್ಮಿಸಿದ್ದು, ಈ ಡ್ಯಾಮ್ ಸುಮಾರು 2ಕಿ.ಮೀ. ನಷ್ಟು ಉದ್ದವಾಗಿದ್ದು, 37 ಅಡಿ ಆಳ ಹೊಂದಿದೆ. ಸಿರಿಗೆರೆ ಸುತ್ತಮುತ್ತಲಿನ ರೈತರಿಗೆ ಅನುಕೂಲ ಮಾಡಿಕೊಡುವ ಮಹೋನ್ನತ ಉದ್ದೇ ಶದಿಂದ ಸುಮಾರು 15 ಗ್ರಾಮಗಳ ರೈತರಿಗೆ, ಪಶು, ಪ್ರಾಣಿ -ಪಕ್ಷಿಗಳಿಗೆ ಯೋಜನೆ ತುಂಬಾ ಅನುಕೂಲಕರವಾಗಿದೆ.
ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಸ್.ಬಿ.ರಂಗನಾಥ್, ವಿಶೇಷಾಧಿಕಾರಿ ಡಾ. ಹೆಚ್.ವಿ. ವಾಮದೇವಪ್ಪ ಮತ್ತಿತರರ ಉಪಸ್ಥಿತರಿದ್ದರು.