ದಾವಣಗೆರೆ, ಸೆ. 7 – ಡಯಾಲಿಸಿಸ್‌ಗೆ ಬರುವ ರೋಗಿಗಳು ಹೊರಗಡೆಯಿಂದ ಅಗತ್ಯ ಟ್ಯೂಬ್, ಔಷಧಿ ಹಾಗೂ ಚುಚ್ಚುಮದ್ದುಗಳನ್ನು ತರುವಂತೆ ಜಿಲ್ಲಾ ಸಿ.ಜಿ. ಆಸ್ಪತ್ರೆಯ ವೈದ್ಯರು ತಿಳಿಸುತ್ತಿರುವ ಬಗ್ಗೆ ಸಂಸದ ಜಿ.ಎಂ. ಸಿದ್ದೇಶ್ವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿ.ಜಿ. ಆಸ್ಪತ್ರೆಗೆ ಬಂದಿದ್ದ ಸಂಸದರನ್ನು ಭೇಟಿ ಮಾಡಿದ ರೋಗಿಗಳ ಕುಟುಂಬದವರು, ಡಯಾಲಿಸಿಸ್ ಘಟಕದವರು ಔಷಧಿ ಹಾಗೂ ಚುಚ್ಚುಮದ್ದುಗಳನ್ನು ಹೊರಗಡೆಯಿಂದ ತರು ವಂತೆ ಬಾಯಿ ಮಾತಲ್ಲಿ ಹೇಳುತ್ತಾರೆ. ಆಸ್ಪತ್ರೆ ಯಲ್ಲಿ ಡಯಾಲಿಸಿಸ್ ಉಚಿತ ಎಂದರೂ, ಸಾವಿ ರದಷ್ಟು ಖರ್ಚಾಗುತ್ತಿದೆ ಎಂದು ಹೇಳಿದರು.
ಕೊರೊನಾದಿಂದ ಕೆಲಸ ಇಲ್ಲ ದಂತಾಗಿದೆ. ಇಂತಹ ಸಂದರ್ಭದಲ್ಲೇ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಇಷ್ಟರ ಮೇಲೂ ಹಣ ಖರ್ಚು ಮಾಡುವಂತೆ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಹೇಳುತ್ತಿದ್ದಾರೆ ಎಂದು ಹಲವಾರು ಮಹಿಳೆಯರು ಕಣ್ಣೀರಿಟ್ಟರು.
ಈ ಬಗ್ಗೆ ಅಸಮಾಧಾನಗೊಂಡ ಸಂಸದರು, ಸಮಸ್ಯೆ ಇವತ್ತಿನದಲ್ಲ, ಹಿಂದಿನಿಂದಲೂ ಇದೆ. ಸುಮಾರು ಬಾರಿ ದೂರು ಬಂದಿವೆ. ಹೀಗಾದರೆ ಸರ್ಕಾರಿ ಆಸ್ಪತ್ರೆ ಇರಬೇಕಾ? ಕೆಲಸ ಮಾಡಲು ಸಾಧ್ಯವಾಗದಿದ್ದರೆ ಮನೆಗೆ ಹೋಗಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಡಯಾಲಿಸಿಸ್‌ಗಾಗಿ ಇಂದು ಎಷ್ಟು ಹಣ ಕೊಟ್ಟಿದ್ದೀರಿ ಎಂದು ವಿವರ ಪಡೆದ ಸಂಸದರು, ಅವರಿಗೆ ತಮ್ಮ ಕೈಯಿಂದಲೇ ಆ ಹಣವನ್ನು ಮರು ಪಾವತಿಸಿದರು.
ಅಗತ್ಯ ಔಷಧಿಗಳಿಗೆ ಐದು ನಿಮಿಷಗಳಲ್ಲಿ ಒಪ್ಪಿಗೆ ಸಿಗುತ್ತದೆ. ತ್ವರಿತ ಕ್ರಮ ತೆಗೆದುಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದರು.
ಹರಿಹರದಲ್ಲೂ ಬಹಳ ದಿನಗಳಿಂದ ಡ ಯಾಲಿಸಿಸ್ ಯಂತ್ರ ಕೆಟ್ಟಿರುವ ಬಗ್ಗೆ ಅಧಿಕಾರಿ ಗಳಿಗೆ ತರಾಟೆಗೆ ತೆಗೆದುಕೊಂಡ ಬೀಳಗಿ, ತುರ್ತು ಕ್ರಮ ತೆಗೆದುಕೊಳ್ಳುವಂತೆ ಹೇಳಿದರು.