ದಾವಣಗೆರೆ, ಸೆ. 7 – ನಗರದ ಸಿ.ಜಿ. ಆಸ್ಪತ್ರೆಯಲ್ಲಿ ಪಿಎಂ – ಕೇರ್ಸ್ ನಿಧಿಯಿಂದ ಸ್ಥಾಪಿಸಲಾಗಿರುವ 2,000 ಲೀಟರ್ ಸಾಮರ್ಥ್ಯದ ಹಾಗೂ ಸರ್ಕಾರಿ ಸ್ವಾಮ್ಯದ ಪೆಟ್ರೋನೆಟ್ ಮೂಲಕ ಸ್ಥಾಪಿಸಲಾಗಿರುವ 1,000 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಘಟಕಗಳನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಿದ್ದಾರೆ.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೊರೊನಾ ಬಂದ ಸಂದರ್ಭಕ್ಕೆ ಹೋಲಿಸಿದರೆ ಈಗ ದೇಶದಲ್ಲಿ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ ಹಲವು ಪಟ್ಟು ಹೆಚ್ಚಾಗಿದೆ. ದೇಶದ ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಉತ್ಪಾದನಾ ಘಟಕಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಮೂರು ಘಟಕಗಳಿಂದ ಪ್ರತಿ ನಿಮಿಷಕ್ಕೆ ಒಟ್ಟು 3 ಸಾವಿರ ಲೀಟರ್ ಆಕ್ಸಿಜನ್ ಲಭ್ಯವಾಗಲಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನರ ಜೀವ ಉಳಿಸಲು ಆಕ್ಸಿಜನ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಕ್ರಮ ತೆಗೆದುಕೊಂಡಿದ್ದಾರೆ ಎಂದವರು ಹೇಳಿದರು.
ಸಿ.ಜಿ. ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಖಾಸಗಿ ಸಹಭಾಗಿತ್ವದಲ್ಲಿ ಕಾಲೇಜು ಸ್ಥಾಪಿಸಲು ಈಗಾಗಲೇ ನಿರ್ಧರಿಸಲಾಗಿದೆ. ಇದಕ್ಕೆ ಕೆಲ ತಾಂತ್ರಿಕ ತೊಡಕುಗಳಿದ್ದು, ಅವುಗಳನ್ನು ಬಗೆಹರಿಸಲಾಗುವುದು. ನಂತರ ಟೆಂಡರ್ ಕರೆದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಪ್ರೊ. ಲಿಂಗಣ್ಣ, ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್‌ಪಿ ಸಿ.ಬಿ. ರಿಷ್ಯಂತ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಡಿ.ಹೆಚ್.ಒ. ಡಾ. ನಾಗರಾಜ್, ಡಿಸ್ಟ್ರಿಕ್ಟ್ ಸರ್ಜನ್ ಡಾ. ಜಯಪ್ರಕಾಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರುಗಳಾದ ತ್ಯಾವಣಗಿ ವೀರಭದ್ರಸ್ವಾಮಿ, ಜಯಣ್ಣ ಪದ್ಮನಾಭ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.