ಎಲ್ಲೆಡೆ ರಾಮ ನವಮಿ

ಕೊರೊನಾ ಹಿನ್ನೆಲೆ ಕುಂದಿದ ಸಂಭ್ರಮ

ದಾವಣಗೆರೆ, ಏ.21- ಕೊರೊನಾ ಎರಡನೇ ಅಲೆಯ ಏರಿಕೆಯ ಕರಿ ನೆರಳು ಇಂದಿನ ಶ್ರೀರಾಮ ನವಮಿ ಸಂಭ್ರಮದ ಮೇಲೆ ಬಿದ್ದಿತ್ತು. ಶ್ರೀರಾಮನ ದೇವಸ್ಥಾನಗಳಲ್ಲಿ ರಾಮನವಮಿ ಸಂಭ್ರಮ ಕಳೆ ಕುಂದಿತ್ತು. ದೇವರ ದರ್ಶನಕ್ಕೆ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಬೆಳಗ್ಗೆ ಸಮಯದಲ್ಲೇ ವಿರಳವಾಗಿದ್ದು ಕಂಡು ಬಂತು. 

ಕೆಲವರು ಮನೆಯಲ್ಲೇ ಶ್ರೀರಾಮ ನವಮಿ ಪ್ರಯುಕ್ತ ರಾಮ ನಾಮ ಸ್ಮರಣೆಯೊಂದಿಗೆ ಆರಾಧಿಸಿದ್ದಾರೆ. ಪಾನಕ, ಕೋಸುಂಬರಿ ಪ್ರಸಾದ ತಯಾರಿಸಿ ಸೇವಿಸಿದ್ದಾರೆ. 

ನಗರದ ಶ್ರೀರಾಮನ ದೇವಸ್ಥಾನಗಳಲ್ಲಿ ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ಸರಳವಾಗಿ ನೆರವೇರಿವೆ. ತೊಟ್ಟಿಲು ಪೂಜೆ ಸಹ ಸಾಂಗವಾಗಿ ನೆರವೇರಿತು. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಪಾನಕ, ಕೋಸುಂಬರಿ ಪ್ರಸಾದ ವಿನಿಯೋಗ ಕಂಡುಬರಲಿಲ್ಲ.

ಪಿಜೆ ಬಡಾವಣೆಯಲ್ಲಿನ ಶ್ರೀರಾಮ ದೇವಸ್ಥಾನದಲ್ಲಿ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಜೊತೆಗೆ ತುಳಸಿ, ಹೂವಿನ ಅಂಕಾರ ಮಾಡಲಾಗಿತ್ತು. ದೇವಸ್ಥಾನದ ಒಳಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಪ್ರವೇಶ ದ್ವಾರದಲ್ಲಿ ನಿಂತು ಭಕ್ತರು ದೂರದಲ್ಲೇ ದೇವರ ದರ್ಶನ ಪಡೆದು ಕೃಪೆಗೆ ಪಾತ್ರರಾದರು.

ಚಾಮರಾಜಪೇಟೆಯಲ್ಲಿನ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ದೇವರಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು. ಭಕ್ತರ ಸಂಖ್ಯೆ ಕಡಿಮೆ ಇತ್ತು. ಪಿಬಿ ರಸ್ತೆಯ ಆರ್.ಹೆಚ್. ಗೀತಾ ಮಂದಿರದ ಆವರಣದಲ್ಲಿನ ಶ್ರೀ ಕೋದಂಡರಾಮ ದೇವಸ್ಥಾನದಲ್ಲೂ ದೇವರಿಗೆ ವಿಶೇಷ ಪೂಜೆ, ಅಲಂಕಾರ ಮಾಡಿ ಕಂಗೊಳಿಸುವಂತೆ ಮಾಡಲಾಗಿತ್ತು. ಹಾಗೊಮ್ಮೆ ಹೀಗೊಮ್ಮೆ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ರಾಮನಾಮ ಸ್ಮರಣೆ ಮಾಡಿದರು.

error: Content is protected !!