ಮನಸ್ಸಿನಲ್ಲಿ ದಾರಿದ್ರ್ಯವಿದ್ದರೆ ಕನ್ನಡ ನಾಡಿನ ಬಗ್ಗೆ ತಿಳಿಯಲಾಗದು

ದಾವಣಗೆರೆ, ಫೆ.18- ಮನಸ್ಸಿನಲ್ಲಿ ದಾರಿದ್ರ್ಯವಿ ದ್ದರೆ ಕನ್ನಡ ನಾಡಿನ ಬಗ್ಗೆ ತಿಳಿಯಲಾಗದು ಎಂದು ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.

ಶಿಕ್ಷಣ ತಜ್ಞ ಡಾ.ಹೆಚ್.ವಿ. ವಾಮದೇವಪ್ಪ ಚಾರಿಟಬಲ್ ಮತ್ತು ಎಜುಕೇಷನಲ್ ಟ್ರಸ್ಟ್ ವತಿಯಿಂದ ನಗರದ ಮಾಗನೂರು ಬಸಪ್ಪ ಸಭಾ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ `ಗುರು ಚೇತನ’ ಹಾಗೂ `ಗುರು ಶ್ರೇಷ್ಠ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ಭಾಷೆ ಹಾಗೂ ಭಾವ ಸಂಪತ್ತಿನಲ್ಲಿ ಯಾವುದೇ ದಾರಿದ್ರ್ಯವಿಲ್ಲ. ನಾಡಿನ ಬಗ್ಗೆ ಅರಿತಿಲ್ಲ ವೆಂದರೆ ಮನಸ್ಸಿನಲ್ಲಿ ದಾರಿದ್ರ್ಯವಿದೆ ಎಂದರ್ಥ ಎಂದರು.  ಭಾವಕ್ಕೆ ಭಾಷೆ ಅಧೀನ. ಮನುಷ್ಯನಲ್ಲಿ ಭಾವನೆಗಳಿಲ್ಲ ದಿದ್ದರೆ ಪ್ರಯೋಜನವಿಲ್ಲ. ನಮ್ಮೆಲ್ಲರಿ ಗೂ  ಭಾವನಾತ್ಮಕ ಸಂಬಂಧಿಗಳಿವೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಯಾವುದೇ ದೇಶದ ಮುಖ್ಯಸ್ಥನಿಗೆ ಬುದ್ಧಿ ಹೇಳುವ ಶಕ್ತಿ ಶಿಕ್ಷಕನಿಗಿರುತ್ತದೆ. ಶಿಕ್ಷಕ ಡಾ.ಸರ್ವಪಳ್ಳಿ ರಾಧಾ ಕೃಷ್ಣನ್. ಅವರು ಸ್ಟಾಲಿನ್ ಭುಜದ ಮೇಲೆ ಕೈ ಇಟ್ಟುಬುದ್ದಿ ಹೇಳಿದ್ದರು. ಅಲ್ಲದೆ  ಮೋವೋ ಕೆನ್ನೆಗೆ ಒಡೆದು ತಿಳಿ ಹೇಳಿದ್ದರು. ನಂತರ ಅಲ್ಲಿನ ಜನತೆ ಈ ಘಟನೆಯನ್ನು ವಿರೋಧಿಸಿದ್ದಾಗ ನಾನು ಶಿಕ್ಷಕ ಮಾವೋ ನನ್ನ ವಿದ್ಯಾರ್ಥಿ ಎಂದು ಹೇಳಿದ್ದರು. ಈ ರೀತಿ ಶಿಕ್ಷಕನಾದವನಿಗೆ ಎಂತಹ ವ್ಯಕ್ತಿಗಳಿಗಾದರೂ ಬುದ್ದಿ ಹೇಳುವ ಸಾಮರ್ಥ್ಯವಿದೆ. ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ ಎಂದು ಹೇಳಿದರು.

ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿಕೊಳ್ಳುಬೇಕು. ಇಂತಹ ಸನ್ಮಾನ ಕಾರ್ಯಕ್ರಮಗಳು ಪ್ರತಿಭೆಗಳನ್ನು ಪರಿಚಯಿಸಲು ಸಹಕಾರಿಯಾಗಿವೆ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರೊ.ಶರಣಪ್ಪ ವಿ.ಹಲಸೆ, ಮೌಲ್ಯಾಧಾರಿತ ಜೀವನ ನಡೆಸಬೇಕು. ಮತ್ತೊಬ್ಬರಿಗೆ ತೊಂದರೆ ನೀಡಬಾರದು. ಜೀವನದ ಆರಂಭ ಹಾಗೂ ಕೊನೆಯ ಮಧ್ಯದಲ್ಲಿ ನಾವು ಮಾಡುವ ಉತ್ತಮ ಕೆಲಸಗಳೇ ಶಾಶ್ವತ ಎಂದರು.

ದೇವಮಾನರಾಗುವ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ. ಬಸವಣ್ಣನವರ ನಡೆ-ನುಡಿಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಮುನ್ನಡೆಯಬೇಕು. ಎಲ್ಲರೂ ತಾವು ಮಾಡುವ ಕಾಯಕದ ಮಹತ್ವ ಅರಿತರೆ ಸಂತೋಷ ಕಾಣಬಹುದು ಎಂದರು.

ಚಿಕ್ಕಮಗಳೂರಿನ ಎಂ.ಎಲ್.ಎಂ.ಎನ್. ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಜಿ.ಎಂ. ಗಣೇಶ್ ಅವರಿಗೆ `ಗುರು ಚೇತನ’ ಹಾಗೂ ಚನ್ನಗಿರಿ ತಾಲ್ಲೂಕು ಸರ್ಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಜಿ.ಪಿ. ಲಿಂಗೇಶ ಮೂರ್ತಿ ಅವರಿಗೆ `ಗುರು ಶ್ರೇಷ್ಠ’ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಮಹಾತ್ಮ ಫುಲೆ ಪ್ರಶಸ್ತಿ ಪುರಸ್ಕೃತೆ ಹೆಚ್.ಆರ್. ವಿಶಾಲಾಕ್ಷಿ ಹಾಗೂ ವಿದ್ಯಾ ಸರಸ್ವತಿ ಪ್ರಶಸ್ತಿ ಪುರಸ್ಕೃತೆ ಎ.ಸಿ. ಶಶಿಕಲಾ ಅವರಿಗೆ ಮತ್ತು 2019-20ನೇ ಸಾಲಿನಲ್ಲಿ ಶಿಕ್ಷಣ ಶಾಸ್ತ್ರದ ಪಿ.ಹೆಚ್.ಡಿ. ಪದವಿ ಪಡೆದವರಿಗೆ ಅಭಿನಂದಿಸಲಾಯಿತು.

ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಕಾರ್ಯದರ್ಶಿ ಎಂ.ಬಿ. ಸಂಗಮೇಶಗೌಡರು ಅಧ್ಯಕ್ಷತೆ ವಹಿಸಿದ್ದರು.  ಅಧ್ಯಕ್ಷ ಶಾಂತವೀರಪ್ಪ, ಗೌರವಾಧ್ಯಕ್ಷ ಹೆಚ್.ವಿ. ವಾಮದೇವಪ್ಪ ಇತರರು ಉಪಸ್ಥಿತರಿದ್ದರು. ಡಾ.ಕೆ.ಸಿ. ಶಿವರಾಜ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. 

error: Content is protected !!