ಒಳಮೀಸಲಾತಿಗೆ ಆಗ್ರಹಿಸಿ ಮಾರ್ಚ್ 25 ರಂದು ಪಾದಯಾತ್ರೆ

ಹರಿಹರ, ಫೆ.18- ಅಸ್ಪೃಶ್ಯ ಸಮಾಜದ ಸಂವಿಧಾನಿಕ ಹಕ್ಕುಗಳನ್ನು ಹಾಗೂ ನ್ಯಾಯ ಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಮಾಡುವ ಪಾದಯಾತ್ರೆ ಇದಾಗಿದ್ದು, ಇದು ಯಾವುದೇ ಒಬ್ಬ ವ್ಯಕ್ತಿಯ ನೇತೃತ್ವದಲ್ಲಿ ನಡೆ ಯುವ ಪಾದಯಾತ್ರೆಯಲ್ಲ ಎಂದು ಹಿರಿಯೂರು ಕೋಡಿಹಳ್ಳಿ ಆದಿಜಾಂಬವ ಪೀಠದ ಶ್ರೀ ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿಗಳು ಹೇಳಿದರು.

ಹನಗವಾಡಿ ಸಮೀಪದ ಪ್ರೊಫೆಸರ್ ಬಿ. ಕೃಷ್ಣಪ್ಪ ಸಾಂಸ್ಕೃತಿಕ ಭವನ, ಮೈತ್ರಿ ವನದಲ್ಲಿ ಅಸ್ಪೃಶ್ಯ ಸಮುದಾಯಗಳ ಮಠಾಧೀಶರ ಒಕ್ಕೂಟ ಕರ್ನಾಟಕದ ವತಿಯಿಂದ ನಡೆದ ಪಾದಯಾತ್ರೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಶ್ರೀಗಳು ಮಾತನಾಡಿದರು.

ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಅಂಗೀಕರಿಸಿ ಒಳಮೀಸಲಾತಿ ಜಾರಿಗೊಳಿಸಲು ಸರ್ಕಾರಕ್ಕೆ ಆಗ್ರಹಿಸಿ ಹೋರಾಟಗಾರರು ಹಾಗು ಸಮುದಾಯದ ಶ್ರೀಗಳಿಂದ ಮಾರ್ಚ್ 25 ರಂದು ಹರಿಹರದಿಂದ ಆರಂಭಿಸಿ ಏಪ್ರಿಲ್ 21 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಾದಯಾತ್ರೆ ಸಮಾರೋಪಗೊಳ್ಳಲಿದೆ ಎಂದರು.

ಒಳಮೀಸಲಾತಿಗಾಗಿ ಅಸ್ಪೃಶ್ಯ ಸಮುದಾಯ ಗಳ ಮಠಾಧೀಶರುಗಳ ಒಕ್ಕೂಟದ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಗೆ ಸಂಪೂರ್ಣ ಬೆಂಬಲಿಸುವ ಘೋಷಣೆ ವ್ಯಕ್ತವಾಯಿತು.

ಸಭೆಯ ಸಾನ್ನಿಧ್ಯ ವಹಿಸಿದ್ದ ಐಮಂಗಲ ಶ್ರೀ ಮಹಾ ಶಿವಶರಣ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಮಾತನಾಡಿ, ಕಳೆದ ಎರಡು ದಶಕಗಳ ಕಾಲ ಬರೀ ಹೋರಾಟ ಮಾಡಿದ್ದೆ ಆಗಿದೆ. ಕಡಿಮೆ ಜನಸಂಖ್ಯೆ ಇರುವ ಕೆಲವು ಜನರ ಬೇಡಿಕೆಗಳು ಈಡೇರುತ್ತವೆ. ಆದರೆ ನಮ್ಮ ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ ಏಕೆ? ಎಂದು ಪ್ರಶ್ನಿಸಿದರು.

ಸಭೆಯ ಸಾನ್ನಿಧ್ಯ ವಹಿಸಿದ್ದ ಕಲಘಟಗಿ ಬೀರವಳ್ಳಿ ಶ್ರೀ ಗುರುದೇವ ತಪೋವನದ ಗುರುಮಾತೆ ನಂದಾ ತಾಯಿ ಮಾತನಾಡಿ, ಈ ಪಾದಯಾತ್ರೆ ಕೊನೆಯ ಹೋರಾಟವಾಗಬೇಕು. ಇದು ಶಾಂತಿಯಿಂದ ಅಥವಾ ಕ್ರಾಂತಿಯಿಂದ ಆಗಬಹುದು, ಆದರೆ ಹೋರಾಟ ಮಾತ್ರ ಪ್ರಬಲವಾಗಿರಬೇಕು ಎಂದು ಹೇಳಿದರು.

ಸಮಾಜದ ಮುಖಂಡರುಗಳಾದ ಟಿ.ಡಿ. ರಾಜಗಿರಿ, ಮುತ್ತಣ್ಣ ಬೆಣ್ಣೂರ್, ಸಂತೋಷ್ ಸವಣೂರು, ನಗರಸಭೆ ಸದಸ್ಯ ಎನ್.ರಜಿನಿಕಾಂತ್, ಚನ್ನಗಿರಿಯ ಎಂ.ಕೆ ನಾಗಪ್ಪ, ಎಚ್ ಮಲ್ಲೇಶ್, ನಂದಕುಮಾರ್ ಬಾಂಬೆಕರ್, ಆನಂದ ಚದರಗೊಳ್ಳ, ಹುಲ್ಲೂರು ಕುಮಾರ್, ನಗರಸಭಾ ಮಾಜಿ ಅಧ್ಯಕ್ಷ ಕೆ. ಮರಿದೇವ, ಗ್ರಾ.ಪಂ. ಸದಸ್ಯ ಸಿದ್ಧಾರೂಢ, ಮಾಜಿ ಸದಸ್ಯ ನಿಜಗುಣ, ಎಪಿಎಂಸಿ ಮಾಜಿ ಸದಸ್ಯ ಎ.ಕೆ.ಶಿವರಾಮ್, ಹಳ್ಳಿಯಾಳ್ ಚಂದ್ರಶೇಖರ್, ಡಿ. ಹನುಮಂತಪ್ಪ, ಮಿಟ್ಲಕಟ್ಟೆ ಆರ್.ಮಂಜಪ್ಪ, ಪಿ.ಜೆ. ಮಹಾಂತೇಶ್, ಪತ್ರಕರ್ತರಾದ ಆರ್. ಮಂಜುನಾಥ್, ಡಾ.ಕೆ. ಜೈಮುನಿ, ವಿಶ್ವನಾಥ್ ಮೈಲಾಳ, ಜಿ.ಎಂ. ಮಂಜುನಾಥ್ ಹಾಗು ಇನ್ನಿತರರು  ಮಾತನಾಡಿದರು.

ಚನ್ನಗಿರಿ ಆರ್. ಪ್ರಭಾಕರ್ ಧಾರವಾಡದ ಶಶಿಕಲಾ ಎಂ.ಟಿ. ಪ್ಯಾಟಿ, ತಾ.ಪಂ. ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ರಾಜನಹಳ್ಳಿ ಗ್ರಾ.ಪಂ. ಸದಸ್ಯ ಎ.ಕೆ. ನಾಗೇಂದ್ರಪ್ಪ, ಮಂಜುನಾಥ್, ಜಿ. ಶಂಕರಮೂರ್ತಿ, ಶ್ರೀನಿವಾಸ್, ಎಂ.ಎಸ್. ಆನಂದ್ ಕುಮಾರ್, ಮಾಕನೂರು ಹನುಮಂತಪ್ಪ, ಕೊತ್ವಾಲ ಹನುಮಂತಪ್ಪ, ಮಂಜುನಾಥ್ ಕೊಪ್ಪಳ, ಎಸ್. ಕೇಶವ ಮತ್ತಿತರರು ಹಾಜರಿದ್ದರು.

error: Content is protected !!