ರಾತ್ರಿ 9ಕ್ಕೆ ಸ್ತಬ್ಧವಾದ ದಾವಣಗೆರೆ

ನೈಟ್ ಕರ್ಫ್ಯೂ ಹಿನ್ನೆಲೆ: ರಾತ್ರಿ ನಗರ ಸಂಚರಿಸಿದ ಡಿಸಿ 

ದಾವಣಗೆರೆ, ಏ.21- ಕೊರೊನಾ 2ನೇ ಅಲೆ ತಡೆಯುವ ನಿಟ್ಟಿನಲ್ಲಿ ರಾಜ್ಯವ್ಯಾಪಿ ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ ಜಾರಿಗೊಂಡ ಹಿನ್ನೆಲೆಯಲ್ಲಿ ಇಂದು ರಾತ್ರಿ 9 ಗಂಟೆಗೆ ನಗರ ಸ್ತಬ್ದವಾಗಿತ್ತು. 

ರಾತ್ರಿ ಕರ್ಫ್ಯೂಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು. ರಸ್ತೆಗಳಲ್ಲಿ ವಾಹನ ಸಂಚಾರ ಕ್ಷೀಣಿಸಿತ್ತು. 

ಡಿಸಿ ನೇತೃತ್ವದಲ್ಲಿ ನಗರ ಪ್ರದಕ್ಷಿಣೆ: ಮೊದಲನೇ ದಿನದ ನೈಟ್ ಕರ್ಪ್ಯೂ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಸೀಲ್ದಾರ್ ಗಿರೀಶ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಎಎಸ್ಪಿ ಎಂ. ರಾಜೀವ್, ನಗರ ಡಿವೈಎಸ್ಪಿ ನಾಗೇಶ್ ಐತಾಳ್ ಸೇರಿದಂತೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ನಗರ ಪ್ರದಕ್ಷಿಣೆ ಹಾಕಿದರು.

ನಗರದ ಹಳೆ ಮತ್ತು ಹೊಸ ಭಾಗದಲ್ಲಿ ರಸ್ತೆಗಿಳಿದು ತೆರೆದಿದ್ದ ಕೆಲ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿ, ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಓಡಾಡದಂತೆ, ಮಾಸ್ಕ್ ಹಾಕಿಕೊಳ್ಳದೆ ಓಡಾಡುವ ಜನರಿಗೆ ಮಾಸ್ಕ್ ಜಾಗೃತಿ ಮೂಡಿಸಿದರಲ್ಲದೇ, ಕೊರೊನಾ ಹಿನ್ನೆಲೆಯಲ್ಲಿ ಜಾಗೃತಿ ವಹಿಸುವಂತೆ ಮುನ್ಸೂಚನೆ ನೀಡಿದರು.

ಗಡಿಯಾರ ಕಂಬದಿಂದ ಪ್ರಮುಖ ರಸ್ತೆಗಳಲ್ಲಿ ಅಧಿಕಾರಿಗಳ ಜೊತೆ ಕಾಲ್ನಡಿಗೆ ಮುಖೇನ ಸಾಗಿದ ಜಿಲ್ಲಾಧಿಕಾರಿಗಳು,  ಭಾಷಾ ನಗರ, ಚಾಮರಾಜಪೇಟೆ, ಹಾಸಬಾವಿ ವೃತ್ತ, ಗಾಂಧಿ ನಗರ, ಅರಳೀಮರ ವೃತ್ತ ಸೇರಿದಂತೆ, ಹಳೇ ಭಾಗ ಹಾಗೂ ಜಯದೇವ ವೃತ್ತದಿಂದ ವಿದ್ಯಾರ್ಥಿ ಭವನ, ಸಿಜಿ ಆಸ್ಪತ್ರೆ ರಸ್ತೆ, ಡೆಂಟಲ್ ಕಾಲೇಜು ರಸ್ತೆ, ಎಂಸಿಸಿ ಬಿ ಬ್ಲಾಕ್, ಬಿಐಇಟಿ ಕಾಲೇಜು ರಸ್ತೆ, ನೂತನ ಕಾಲೇಜು ರಸ್ತೆ, ಹದಡಿ ರಸ್ತೆ, ಗುಂಡಿ ಮಹಾದೇವಪ್ಪ ವೃತ್ತದ ಬಳಿ ಸಂಚರಿಸಿ ಕರ್ಫ್ಯೂಗೆ ಜನರ ಸ್ಪಂದನೆಯನ್ನು ವೀಕ್ಷಿಸಿದರು.

ಎಲ್ಲೆಡೆ ಸ್ವಯಂ ಪ್ರೇರಣೆಯಿಂದ ಜನರೇ ರಾತ್ರಿ 9 ಗಂಟೆ ಹೊತ್ತಿಗೆ ಅಂಗಡಿ ಮುಂಗಟ್ಟು ಬಂದ್ ಮಾಡಿ, ಮನೆ ಕಡೆಗೆ ಹೊರಟು ನಿಂತಿದ್ದರು. ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಜಿಲ್ಲಾದ್ಯಂತ ಸಿಆರ್‍ಪಿಸಿ ಕಾಯ್ದೆ 1973ರ ಕಲಂ 144ರನ್ವಯ ನಿಷೇಧಾಜೆ ಜಾರಿಗೊಳಿಸಲಾಗಿದೆ. ಇದಕ್ಕೆ ಜನರೂ ಸಹ ಸ್ಪಂದಿಸಿದ್ದು ಗಮನಾರ್ಹ.

ಕರ್ಪ್ಯೂ ಸ್ಪಂದನೆಗೆ ಡಿಸಿ ಹರ್ಷ: ಮುಂದುವರಿಕೆಗೆ ಮನವಿ: ಇದೇ ವೇಳೆ ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ನಗರದ ಹಳೆ ಭಾಗದಲ್ಲಿ ಜನರನ್ನು ನಿಯಂತ್ರಿಸುವುದು, ಅಂಗಡಿ ಮುಂಗಟ್ಟುಗಳನ್ನು ಬಾಗಿಲು ಹಾಕಿಸುವುದೇ ಕಷ್ಟ ಎಂಬ ಮಾತನ್ನು ಸುಳ್ಳಾಗಿಸುವಂತೆ ಹಳೆ ಭಾಗದ ಜನರು ಸ್ವಯಂ ಪ್ರೇರಣೆಯಿಂದ ರಾತ್ರಿ ಕರ್ಫ್ಯೂಗೆ ಸ್ಪಂದಿಸಿದ್ದಾರೆ. ಸರ್ಕಾರದ ಕರೆಗೆ ಜನ ಸ್ಪಂದಿಸಿರುವುದಕ್ಕೆ ಡಿ.ಸಿ. ಮೆಚ್ಚುಗೆ ವ್ಯಕ್ತಪಡಿಸಿದರು.

ಕೊರೊನಾ ಕೊಂಡಿ ಕಳಚಬೇಕಿದೆ. ಅದಕ್ಕೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಮೇ 4ರವರೆಗೂ ಇರುವ ರಾತ್ರಿ ಕರ್ಫ್ಯೂಗೆ ಹೀಗೆಯೇ ಸ್ಪಂದಿಸಬೇಕು. ಹೊಸ ಭಾಗದ ಕೆಲವು ಪ್ರತಿಷ್ಟಿತ ಬಡಾವಣೆಗಳಲ್ಲಿ ಒಂದೊಂದು ಮನೆಯಲ್ಲೇ 3-4 ಕೇಸ್‌ಗಳು ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸುತ್ತಾ, ಇನ್ನಾದರೂ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದರು.

ನೈಟ್ ಕರ್ಪ್ಯೂ ಅಲ್ಲದೇ, ಹಗಲು ವೇಳೆಯೂ ಅಗತ್ಯ ವಸ್ತುಗಳ ಸೇವೆ ಬಿಟ್ಟು ಉಳಿದೆಲ್ಲವು ನಾಳೆ ಬಂದ್ ಆಗುವ ಬಗ್ಗೆ ನಾಳೆ ಮುಂಜಾನೆ 6 ಗಂಟೆಯಿಂದ ಜನರಿಗೆ ಮನವರಿಕೆ ಮಾಡುವಂತೆ ಪಾಲಿಕೆ ಆಯುಕ್ತರು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸ್ಥಳದಲ್ಲೇ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಕರ್ಫ್ಯೂ ಹಿನ್ನೆಲೆ ಭದ್ರತೆ: ಸರ್ಕಾರದ ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ ಕಂಡು ಬಂದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ವಿವಿಧ ಸೆಕ್ಷನ್‍ನಡಿ ಕೇಸ್ ದಾಖಲಿಸುವ ಎಚ್ಚರಿಕೆಯನ್ನೂ ಪೊಲೀಸ್ ಇಲಾಖೆ ನೀಡಿದೆ.

ಕರ್ಫ್ಯೂ ಹಿನ್ನೆಲೆಯಲ್ಲಿ ಅನಾವಶ್ಯಕ ಓಡಾಟ ಹಾಗೂ ಭದ್ರತೆಗಾಗಿ ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಸಂಗೊಳ್ಳಿ ರಾಯಣ್ಣ ವೃತ್ತ, ಎಂ.ಜಿ. ರಸ್ತೆ, ಜಯದೇವ ವೃತ್ತ, ವಿದ್ಯಾರ್ಥಿ ಭವನ, ಬಿಐಇಟಿ ರಸ್ತೆ, ಲೋಕಿಕೆರೆ ಕ್ರಾಸ್, ಆರ್ ಟಿಓ ವೃತ್ತ, ಮಂಡಿಪೇಟೆಯ ಎಸ್ ಬಿಐ ಬ್ಯಾಂಕ್ ರಸ್ತೆ, ಲಕ್ಷ್ಮಿ ವೃತ್ತ, ಅರಳಿಮರ ವೃತ್ತ ಸೇರಿದಂತೆ ಪ್ರಮುಖ ಮತ್ತು ಕೆಲ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಅನಾವಶ್ಯಕ ಓಡಾಟ ತಪ್ಪಿಸುವುದಾಗಿ ಎಎಸ್ಪಿ ಎಂ. ರಾಜೀವ್ ತಿಳಿಸಿದರು.

error: Content is protected !!