ಬಿಬಿಎಂಪಿ ನೌಕರರ ಮುಷ್ಕರ ಬೆಂಬಲಿಸಿ ಪಾಲಿಕೆ ನೌಕರರ ಪ್ರತಿಭಟನೆ

ದಾವಣಗೆರೆ, ಫೆ. 18- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರಿಗೆ ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿ ಆಗಿರುವ ಅನಾನೂಕೂಲತೆಗಳ ವಿರುದ್ಧ ಬೆಂಗಳೂರಿನಲ್ಲಿನ ಬಿಬಿಎಂಪಿ ನೌಕರರ ಮುಷ್ಕರ ಬೆಂಬಲಿಸಿ ನಗರದಲ್ಲಿಂದು ನಗರ ಪಾಲಿಕೆ ನೌಕರರು ಪ್ರತಿಭಟನೆ ನಡೆಸಿದರು.

ನಗರ ಪಾಲಿಕೆ ಆವರಣದಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್ ನೇತೃತ್ವದಲ್ಲಿ ಜಮಾಯಿಸಿದ್ದ ನೌಕರರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. 

ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿ `ಎ’ ಶ್ರೇಣಿಯ ಅಧಿಕಾರಿ ಅಥವಾ 74 ಸಾವಿರ ಮೇಲ್ಪಟ್ಟು ವೇತನ ಶ್ರೇಣಿ ಇರುವ ಅಧಿಕಾರಿಗಳ ನೇಮಕಾತಿಯನ್ನು ಸರ್ಕಾರ ಪ್ರಾಧಿಕಾರ ನೀಡಿರುವುದನ್ನು ಕೈಬಿಡಬೇಕು. ಕೋವಿಡ್ ಸೋಂಕಿನಿಂದ ಮೃತಪಟ್ಟ ನೌಕರರ ಅವಲಂಬಿತರಿಗೆ ಕೇಂದ್ರ ಸರ್ಕಾರ ಜಾರಿ ಮಾಡಿರುವ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಜೀವ ವಿಮೆ ಮೊತ್ತ 30 ಲಕ್ಷಗಳನ್ನು ಮೃತ ನೌಕರರ ಅವಲಂಬಿತರಿಗೆ ಬಿಡುಗಡೆ ಮಾಡಿ ನಿವೃತ್ತಿ ವೇತನ ಮತ್ತು ಉಪಧನ, ಅನುಕಂಪದ ಆಧಾರದ ಮೇಲೆ ನೌಕರಿ ಹಾಗೂ ಇತರೆ ಆರ್ಥಿಕ ಸೌಲಭ್ಯಗಳನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ವಿರುದ್ಧವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಜಂಟಿ ಆಯುಕ್ತರು, ಉಪ ಆಯುಕ್ತರು, ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು, ಆರೋಗ್ಯ ಪರಿವೀಕ್ಷಕರುಗಳು ಹಾಗೂ ಪಾಲಿಕೆಯಲ್ಲಿ ಎರವಲು ಸೇವೆ ಮೇಲೆ 3 ವರ್ಷಗಳ ಮೇಲ್ಪಟ್ಟು ಕಾನೂನು ಬಾಹಿರವಾಗಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಕೂಡಲೇ ಮಾತೃ ಇಲಾಖೆಗೆ ಹಿಂದಿರುಗಿಸಬೇಕು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 702 ವಿವಿಧ
ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ತುಂಬಬೇಕು ಸೇರಿದಂತೆ 17 ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದ ರಾಜ್, ಉಪಾಧ್ಯಕ್ಷ ಕೆ.ಸಿ. ಹಾಲೇಶ್, ಪ್ರಧಾನ ಕಾರ್ಯದರ್ಶಿ ಕೆ. ಬಸವರಾಜ್, ಖಜಾಂಚಿ ಎಸ್.ಬಿ. ಗುತ್ಯಪ್ಪ, ಎಸ್.ಕೆ. ಪಾಂಡುರಂಗ, ಗೋವಿಂದ ನಾಯ್ಕ್, ನಾಗರತ್ನಮ್ಮ, ಸುರೇಶ್ ಪಾಟೀಲ್, ಬಿ. ವಿನಾಯಕ, ಬಿ.ಹೆಚ್‌. ಸುನೀಲ್ ಸೇರಿದಂತೆ, ಇತರರು ಭಾಗವಹಿಸಿದ್ದರು.

error: Content is protected !!