ಗುತ್ತೂರು ಬಳಿ 130 ಬೆಡ್‌ನ ಕೋವಿಡ್ ಕೇರ್ ಸೆಂಟರ್

ಹರಿಹರ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ

ಹರಿಹರ, ಏ.20- ತಾಲ್ಲೂಕಿನಲ್ಲಿ ಕೋವಿಡ್ ರೋಗವನ್ನು ತಡೆಗಟ್ಟಲು ಕೋವಿಡ್ ವಾರ್ ರೂಮ್, ಕೋವಿಡ್ ಕೇರ್ ಸೆಂಟರ್ ತೆರೆಯುವ ಮೂಲಕ ಸಾರ್ವಜನಿಕರಿಗೆ ಲಸಿಕೆ ನೀಡುವುದ ರೊಂದಿಗೆ ನಿರಂತರವಾಗಿ ಪರೀಕ್ಷೆ ಮಾಡಲಾಗುತ್ತಿದೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ತಿಳಿಸಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಅಧಿಕ ಪ್ರಮಾಣದಲ್ಲಿ ಕೋವಿಡ್ ಸೋಂಕು ಹರಡುತ್ತಿದ್ದು, ಇಲ್ಲಿಯವರೆಗೆ ಸುಮಾರು ಕೋವಿಡ್ ಪ್ರಕರಣಗಳಿವೆ. ಅದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಈಗಾಗಲೇ ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ನಗರದ ಹೊರವಲಯದ ಗುತ್ತೂರು ಗ್ರಾಮದ ಬಳಿ ಇರುವ ಹಾಸ್ಟೆಲ್  ಆವರಣದಲ್ಲಿ 130 ಬೆಡ್‌ನ ಕೇರ್ ಸೆಂಟರ್ ಸ್ಥಾಪನೆಯನ್ನು ಶೀಘ್ರವಾಗಿ ಮಾಡಲಾಗುತ್ತದೆ ಎಂದರು.

ತಾಲ್ಲೂಕು ಆರೋಗ್ಯ ಕೇಂದ್ರ ಕಚೇರಿಯ ಆವರಣದಲ್ಲಿ ಇಂದಿನಿಂದ ಕೋವಿಡ್ ವಾರ್ ರೂಮ್ ತೆರೆಯಲಾಗಿದೆ.  

ಅಲ್ಲಿ ಬೆಳಿಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರು ಕೋವಿಡ್ ವಿಚಾರದಲ್ಲಿ ಕರೆ ಮಾಡಿ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕೊರೊನಾ ರೋಗವನ್ನು
ತಡೆಗಟ್ಟಲು ಅಧಿಕಾರಿಗಳು ಮತ್ತು ಸಿಬ್ಬಂದಿಯವರು  ಜಾಗೃತರಾದರೆ ಸಾಲದು, ಸಾರ್ವಜನಿಕರು ಸಹ ಈ ರೋಗವನ್ನು ತಡೆಗಟ್ಟಲು ಜಾಗೃತಿ ವಹಿಸುವುದು ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವುದು ಸೂಕ್ತವಾಗಿದೆ. ಇದರಿಂದಾಗಿ ಕೊರೊನಾ ರೋಗವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ತಾಲ್ಲೂಕು ಆರೋಗಾಧಿಕಾರಿ ಡಾ. ಚಂದ್ರಮೋಹನ್ ಮಾತನಾಡಿ, ತಾಲ್ಲೂಕಿನಲ್ಲಿ ಪ್ರತಿದಿನ 400 ಜನರಿಗೆ ಕೋವಿಡ್ ತಪಾಸಣೆ ಮಾಡಲಾಗುತ್ತದೆ. ನಗರದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ 13 ಆರೋಗ್ಯ ಕೇಂದ್ರಗಳಲ್ಲಿ ಇಲ್ಲಿಯವರೆಗೆ 17,559 ಸಾರ್ವಜನಿಕರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ಇಲ್ಲಿಯವರೆಗೆ ಲಸಿಕೆಯನ್ನು ಹಾಕಿಸಿಕೊಂಡಿರುವ ಯಾವುದೇ ವ್ಯಕ್ತಿಗಳಿಗೆ ಆರೋಗ್ಯದ ಅಡ್ಡಪರಿಣಾಮಗಳು ಬಂದಿರುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿ.ಸಿ.ಎಂ. ಹಾಸ್ಟೆಲ್ ವಿಸ್ತಾರಣಾಧಿಕಾರಿ ಎಚ್.ಬಿ. ಪಾಟೀಲ್, ರಂಗನಾಥ ಇನ್ನಿತರರಿದ್ದರು.

error: Content is protected !!