ಪೊಲೀಸರಿಂದ ಸವಿನಯ ಮಾಸ್ಕ್‌ ಅಭಿಯಾನ

ಡ್ರಂ ಸೆಟ್, ಪಥಸಂಚಲನದೊಂದಿಗೆ ಜನರಿಗೆ ಮಾಸ್ಕ್‌ ವಿತರಿಸಿ ಅರಿವು ಮೂಡಿಸಿದ ಎಸ್ಪಿ ಹನುಮಂತರಾಯ

ದಾವಣಗೆರೆ, ಏ. 20 – ಕಳೆದ ಎರಡು ದಿನಗಳಿಂದ ದಂಡದ ಮೂಲಕ  ಕೊರೊನಾ ತಡೆಗಾಗಿ ಅಭಿಯಾನ ನಡೆಸುತ್ತಿದ್ದ ಜಿಲ್ಲಾಡಳಿತ, ಮಂಗಳವಾರದಂದು ಮನವೊಲಿಕೆಯ ಮೂಲಕ ಮಾಸ್ಕ್‌ ಧರಿಸುವಂತೆ ಪ್ರಚಾರ ನಡೆಸಿದೆ.

ಅದರಲ್ಲೂ ಕಠಿಣ ಕ್ರಮಗಳಿಗೆ ಹೆಸರಾದ ಪೊಲೀಸರೇ ಅತ್ಯಂತ ಸೌಜನ್ಯದಿಂದ ನಾಗರಿಕರು ಮಾಸ್ಕ್ ಧರಿಸುವಂತೆ ಮನವೊಲಿಸುವ ಪ್ರಯತ್ನ ನಡೆಸಿದ್ದು ವಿಶೇಷವಾಗಿತ್ತು.

ಎಸ್ಪಿ ಹನುಮಂತರಾಯ ಅವರ ನೇತೃತ್ವದಲ್ಲಿ ನಗರದ ಗಡಿಯಾರ ಕಂಬದಿಂದ ಮಾಸ್ಕ್ ಪರ ಅಭಿಯಾನ ನಡೆಸಲಾಯಿತು. ಮಾಸ್ಕ್‌ ಧರಿಸುವಂತೆ ಪೊಲೀಸ್ ಡ್ರಂ ಸೆಟ್‌ ಮೂಲಕ ಪಥ ಸಂಚಲನೆ ನಡೆಸಿದ್ದು ವಿಶೇಷವಾಗಿತ್ತು.

ಗಡಿಯಾರ ಕಂಬ, ಬಿನ್ನಿ ಕಂಪನಿ ರಸ್ತೆ ಹಾಗೂ ಚಾಮರಾಜ ಪೇಟೆಗಳಲ್ಲಿ ಈ ಅಭಿಯಾನ ನಡೆಸಲಾಯಿತು. ಈ ಸಂದರ್ಭದಲ್ಲಿ ಭಿತ್ತಿಪತ್ರಗಳನ್ನೂ ಪ್ರದರ್ಶಿಸಲಾಯಿತು.

ಮಾಸ್ಕ್ ಧರಿಸದವರಿಗೆ ಮಾಸ್ಕ್ ವಿತರಿಸುವ ಮೂಲಕ, ಕೊರೊನಾ ಪರಿಸ್ಥಿತಿಯಲ್ಲಿ ಮಾಸ್ಕ್ ಧರಿಸುವ ಅಗತ್ಯದ ಬಗ್ಗೆ ತಿಳಿ ಹೇಳಲಾಯಿತು. ಈ ಬಾರಿ ಯಾವುದೇ ದಂಡ ವಿಧಿಸದೇ ಕೇವಲ ವಿನಂತಿ ಹಾಗೂ ಮನವಿ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಹನುಮಂತರಾಯ, ಜನರು ಮಾಸ್ಕ್ ಧರಿಸುವ ಮೂಲಕ ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದಷ್ಟೇ ಅಲ್ಲದೇ, ಬೇರೆಯವರ ಆರೋಗ್ಯಕ್ಕೂ ನೆರವಾಗಬೇಕು. ದಂಡ ವಿಧಿಸುವ ಹಾಗೂ ಕಠಿಣ ಕ್ರಮ ಅನಿವಾರ್ಯವಾಗುವ ಪರಿಸ್ಥಿತಿ ತರಬಾರದು ಎಂದು ಹೇಳಿದರು.

error: Content is protected !!