ಮೇ 4ರವರೆಗೆ ರಾಜ್ಯಾದ್ಯಂತ ನಿರ್ಬಂಧ ಜಾರಿ
ಬೆಂಗಳೂರು, ಏ. 20 – ರಾಜ್ಯದಲ್ಲಿ ಕೊರೊನಾ ಉಲ್ಬಣಿಸುತ್ತಿರುವಂತೆಯೇ, ರಾಜ್ಯ ಸರ್ಕಾರ ರಾತ್ರಿ ಕರ್ಪ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಹೇರಿ ಆದೇಶ ಹೊರಡಿಸಿದೆ. ಇಂದು ಬುಧವಾರ ರಾತ್ರಿ 9 ಗಂಟೆಯಿಂದ ಮೇ 4ರವರೆಗೆ ನಿರ್ಬಂಧಗಳು ಜಾರಿಯಲ್ಲಿರಲಿವೆ.
ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯಪಾಲ ವಜೂಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕರೆಯಲಾಗಿದ್ದ ಸರ್ವ ಪಕ್ಷಗಳ ನಾಯಕರ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಾರದ ದಿನಗಳಲ್ಲಿ ಪ್ರತಿದಿನ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ವಾರಾಂತ್ಯದಲ್ಲಿ ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಆದರೆ, ರಾತ್ರಿ ಕಾರ್ಯನಿರ್ವಹಣೆ ಅಗತ್ಯವಿರುವ ಕೈಗಾರಿಕೆಗಳಿಗೆ ರಾತ್ರಿ ಕರ್ಫ್ಯೂದಿಂದ ವಿನಾಯಿತಿ ಇದೆ. ಟೆಲಿಕಾಂ, ವೈದ್ಯಕೀಯ ಸೇವೆ ಮತ್ತಿತರೆ ಸೇವೆಗಳಿಗೆ ನಿರ್ಬಂಧ ಇಲ್ಲ. ಸರಕು ಸಾಗಣೆ ಮೇಲೆ ನಿರ್ಬಂಧವಿಲ್ಲ. ದೂರ ಪ್ರಯಾಣದ ಬಸ್, ರೈಲು ಹಾಗೂ ವಿಮಾನಯಾನಕ್ಕೆ ಅನುಮತಿ ಇದೆ. ಇಂತಹ ಪ್ರಯಾಣಕ್ಕೆ ನೆರವಾಗಲು ಆಟೋ ಮತ್ತಿತರೆ ಸಾರಿಗೆಗೂ ಅವಕಾಶವಿದೆ.
ನವದೆಹಲಿ, ಏ. 20 – ಕೊರೊನಾ ಎದುರಿಸುವಲ್ಲಿ ಲಾಕ್ಡೌನ್ ಕೊನೆಯ ಅಸ್ತ್ರವಾಗಿರಬೇಕು ಎಂದು ಹೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಲಸೆ ಕಾರ್ಮಿಕರು ತಾವು ಕೆಲಸ ಮಾಡುತ್ತಿರುವ ಊರುಗಳಲ್ಲೇ ಇರುವಂತೆ ರಾಜ್ಯಗಳು ಮನವೊಲಿಸಬೇಕು ಎಂದು ಕರೆ ನೀಡಿದ್ದಾರೆ.
ದೇಶದಲ್ಲಿ ಕೊರೊನಾ ಉಲ್ಬಣಿಸುತ್ತಿರುವ ಹಾಗೂ ಹಲವಾರು ರಾಜ್ಯಗಳು ಲಾಕ್ಡೌನ್ಗೆ ಮುಂದಾಗುತ್ತಿರುವ ನಡುವೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ, ಕಳೆದ ವರ್ಷ ಸೋಂಕಿನ ಬಗ್ಗೆ ತಿಳಿದಿರಲಿಲ್ಲ. ಕಳೆದ ವರ್ಷ ದೇಶದಲ್ಲಿ ಕೊರೊನಾ ಲಸಿಕೆಯಾಗಲೀ, ಪಿಪಿಇ ಕಿಟ್ ಉತ್ಪಾದಿಸುವ ಮೂಲಭೂತ ಸೌಲಭ್ಯವಾಗಲೀ, ಇತರೆ ಅತ್ಯಗತ್ಯ ವೈದ್ಯಕೀಯ ಸರಕುಗಳಾಗಲೀ ಇರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ ಎಂದಿದ್ದಾರೆ.
20 ನಿಮಿಷಗಳ ಕಾಲ ಮಾತನಾಡಿದ ಅವರು, ಸದ್ಯಕ್ಕೆ ದೇಶವ್ಯಾಪಿ ಲಾಕ್ಡೌನ್ ಹೇರುವ ಸಾಧ್ಯತೆ ತಳ್ಳಿ ಹಾಕಿದ್ದಾರೆ. ಕಳೆದ ವರ್ಷ ಹೇರಿದ ಲಾಕ್ಡೌನ್ನಿಂದ ದೇಶದಲ್ಲಿ ಮಹಾ ವಲಸೆ ಉಂಟಾಗಿತ್ತು ಹಾಗೂ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿತ್ತು.
ಈಗಿನ ಪರಿಸ್ಥಿತಿಯಲ್ಲಿ ದೇಶವನ್ನು ಲಾಕ್ಡೌನ್ನಿಂದ ಕಾಪಾಡಬೇಕಿದೆ. ರಾಜ್ಯಗಳು ಲಾಕ್ಡೌನ್ ಅನ್ನು ಕೊನೆಯ ಅಸ್ತ್ರವಾಗಿ ಬಳಬೇಕು. ಲಾಕ್ಡೌನ್ ತಪ್ಪಿಸಲು ಗರಿಷ್ಠ ಪ್ರಯತ್ನ ಪಡಬೇಕು. ನಮ್ಮ ಗಮನ ಮೈಕ್ರೋ ಕಂಟೈನ್ಮೆಂಟ್ ವಲಯಗಳ ಕಡೆ ಇರಬೇಕು. ಕೊರೊನಾ ಶಿಷ್ಟಾಚಾರಗಳನ್ನು ಸರಿಯಾಗಿ ಪಾಲಿಸಿದರೆ ಲಾಕ್ಡೌನ್ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.
ದೆಹಲಿ ಸೇರಿದಂತೆ ಹಲವಾರು ರಾಜ್ಯಗಳು ಲಾಕ್ಡೌನ್ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ.
ಉದ್ಯಮಗಳು ಮೋದಿ ಭಾಷಣವನ್ನು ಸ್ವಾಗತಿಸಿದ್ದು, ಕೊರೊನಾ ವಿರುದ್ಧ ಹೋರಾಡಲು ದೇಶಕ್ಕೆ ಸರಿಯಾದ ಸಂದೇಶ ದೊರೆತಿದೆ. ವಲಸೆ ಕಾರ್ಮಿಕರಿಗೂ ಸಂದೇಶ ನೀಡಲಾಗಿದ್ದು, ಆರ್ಥಿಕತೆ ಕೊರೊನಾ ಅಲೆ ಎದುರಿಸಲು ನೆರವಾಗಲಿದೆ ಎಂದಿದ್ದಾರೆ.
ಲಸಿಕೆಗಳ ಕುರಿತೂ ಮಾತನಾಡಿರುವ ಪ್ರಧಾನಿ, ಭಾರತದಲ್ಲಿ ಅತಿ ದೊಡ್ಡ ಲಸಿಕಾ ಅಭಿಯಾನ ನಡೆಯುತ್ತಿದೆ. 12 ಕೋಟಿ ಲಸಿಕೆಯನ್ನು ವೇಗವಾಗಿ ನೀಡಿದ ದೇಶ ಭಾರತವಾಗಿದೆ ಎಂದಿದ್ದಾರೆ.
ದೇಶ ಸಂಕಷ್ಟ ಎದುರಿಸುತ್ತಿದೆ. ನಾವು ಪೂರ್ಣ ಬಲದಿಂದ ಹೋರಾಡಬೇಕಿದೆ ಎಂದಿರುವ ಪ್ರಧಾನಿ, ದೇಶದ ಜನರ ಪರಿಶ್ರಮದೊಂದಿಗೆ ಕೊರೊನಾ ವೈರಸ್ ಸೋಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಟ್ಟಡ, ಕೈಗಾರಿಕೆಗಳಿಗೆ ಅನುಮತಿ
ಎಲ್ಲಾ ರೀತಿಯ ಕಟ್ಟಡ ನಿರ್ಮಾಣ, ರಿಪೇರಿ ಚಟುವಟಿಕೆಗಳಿಗೆ ಅನುಮತಿ ಮುಂದುವರೆಸಲಾಗಿದೆ. ಮುಂಗಾರು ಪೂರ್ವ ಕಾಮಗಾರಿಗಳಿಗೂ ಅನುಮತಿ ಇದೆ.
ಎಲ್ಲಾ ರೀತಿಯ ಕೈಗಾರಿಕೆಗಳು ಹಾಗೂ ಉತ್ಪಾದನಾ ಘಟಕಗಳು ಕೊರೊನಾ ನಿಯಮಗಳ ಅನ್ವಯ ಕಾರ್ಯ ನಿರ್ವಹಿಸಬಹುದು.
ಪಡಿತರ ಅಂಗಡಿ, ಆಹಾರ, ದಿನಸಿ, ಹಣ್ಣು – ತರಕಾರಿ, ಹಾಲು, ಮಾಂಸ, ಮೀನು ಮತ್ತು ಮಾಂಸದ ಅಂಗಡಿಗಳಿಗೆ ಅನುಮತಿ ಇದೆ. ಸಗಟು ತರಕಾರಿ, ಹಣ್ಣು, ಹೂವಿನ ಮಾರುಕಟ್ಟೆಗಳು ತೆರೆದ ಬಯಲಿನಲ್ಲಿ ಕಾರ್ಯ ನಿರ್ವಹಿಸಬೇಕು. ಲಾಡ್ಜಿಂಗ್ ಹೋಟೆಲ್ನಲ್ಲಿ ಉಳಿದುಕೊಂಡವರಿಗೆ ಸೇವೆ ಒದಗಿಸಬಹುದು.
ಮದ್ಯದ ಅಂಗಡಿಗಳು ಪಾರ್ಸಲ್ ಸೇವೆ ಮೂಲಕ ಕಾರ್ಯ ನಿರ್ವಹಿಸಬೇಕು. ಬ್ಯಾಂಕ್, ವಿಮೆ ಹಾಗೂ ಎಟಿಎಂಗಳಿಗೆ ಅನುಮತಿ ಇದೆ.
ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ಅನುಮತಿ ಇದೆ. ಇ-ಕಾಮರ್ಸ್ ಮೂಲಕ ಪಾರ್ಸಲ್ ಪೂರೈಸಲು ಅವಕಾಶವಿದೆ. ಶೀತಲ ಘಟಕ, ಗೋದಾಮುಗಳಿಗೆ ಅವಕಾಶ ಇದೆ. ಕಟಿಂಗ್ ಶಾಪ್ಗಳು ಮಾರ್ಗಸೂಚಿ ಅನ್ವಯ ಕಾರ್ಯ ನಿರ್ವಹಿಸಬಹುದು.
ಸರ್ಕಾರಿ ಹಾಗೂ ಸ್ವಾಯತ್ತ ಸಂಸ್ಥೆಗಳು ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬೇಕು. ತುರ್ತು ಹಾಗೂ ಅಗತ್ಯ ಸೇವೆಯಲ್ಲಿ ತೊಡಗಿರುವವರು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಬಹುದು.
ಸಂಚಾರ, ಸಾಗಣೆಗೆ ಯಾವುದೇ ನಿರ್ಬಂಧವಿಲ್ಲ
ಸರಕು ಸಾಗಣೆಯ ಮೇಲೆ ಯಾವುದೇ ನಿರ್ಬಂಧ ಹೇರುವಂತಿಲ್ಲ. ಸರಕುಗಳ ಸಾಗಣೆಗೆ ಯಾವುದೇ ಪ್ರತ್ಯೇಕ ಅನುಮತಿ ಪಡೆಬೇಕಿಲ್ಲ. ಸರ್ಕಾರಿ ಸಾರಿಗೆ ಸೇರಿದಂತೆ ಖಾಸಗಿ ಬಸ್, ರೈಲು, ಟ್ಯಾಕ್ಸಿ, ಆಟೋ ರಿಕ್ಷಾ ಮತ್ತಿತರೆ ವಾಹನಗಳಿಗೆ ಅನುಮತಿ ಇದೆ. ಆದರೆ, ವಾಹನಗಳ ಸಾಮರ್ಥ್ಯದ ಅರ್ಧದಷ್ಟು ಜನರು ಮಾತ್ರ ಪ್ರಯಾಣಿಸಬಹುದು. ಎಲ್ಲಾ ರೀತಿಯ ಸರಕುಗಳ ಸಾಗಣೆಗೆ ಅನುಮತಿ ಇದೆ. ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳು, ಆರೋಗ್ಯ ಸೇವೆಗಳಿಗೆ ಅನುಮತಿ ಇದೆ. ಮದುವೆಗಳಲ್ಲಿ 50 ಹಾಗೂ ಅಂತ್ಯಸಂಸ್ಕಾರದಲ್ಲಿ 20 ಜನರು ಮಾತ್ರ ಭಾಗವಹಿಸಬಹುದು.
ವಾರಾಂತ್ಯದ ಕರ್ಫ್ಯೂ ವೇಳೆ ತುರ್ತು ಸೇವೆ ಒದಗಿಸುವ ಸರ್ಕಾರಿ ಕಚೇರಿಗಳು, 24 ಗಂಟೆ ಕಾರ್ಯ ನಿರ್ವಹಣೆ ಅತ್ಯವಿರುವ ಕೈಗಾರಿಕೆಗಳು, ದಿನಸಿ ಅಂಗಡಿಗಳು, ಅಗತ್ಯ ಸರಕುಗಳ ಅಂಗಡಿಗಳು, ಹೋಟೆಲ್ಗಳ ಪಾರ್ಸಲ್ ಸೇವೆ, ದೂರ ಪ್ರಯಾಣದ ಬಸ್, ರೈಲು ಹಾಗೂ ವಿಮಾನಗಳ ಸೇವೆಗೆ ಅವಕಾಶ ಇದೆ.
ಇವುಗಳ ಮೇಲೆ ನಿಷೇಧ : ಕರ್ಫ್ಯೂ ಜೊತೆಗೆ ಹಲವಾರು ಚಟುವಟಿಕೆಗಳ ಮೇಲೆ ನಿಷೇಧ ಹೇರಲಾಗಿದೆ. ಅದರಂತೆ ಶಾಲಾ – ಕಾಲೇಜು, ಶಿಕ್ಷಣ ಸಂಸ್ಥೆಗಳು ಬಂದ್ ಆಗಿರುತ್ತವೆ. (ಆನ್ಲೈನ್ ಹಾಗೂ ದೂರ ಶಿಕ್ಷಣಕ್ಕೆ ಅನುಮತಿ ಇದೆ)
ಚಿತ್ರಮಂದಿರ, ಶಾಪಿಂಗ್ ಮಾಲ್, ಜಿಮ್, ಯೋಗ, ಸ್ಪಾ, ಕ್ರೀಡಾ ಚಟುವಟಿಕೆ, ಸ್ಟೇಡಿಯಂ, ಈಜುಕೊಳ, ಮನರಂಜನೆ ಪಾರ್ಕ್, ಆಡಿಟೋರಿಯಂ ಬಂದ್ ಆಗಲಿವೆ. ಎಲ್ಲ ರೀತಿಯ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತಿತರೆ ಸಮಾವೇಶಗಳು ನಿಷಿದ್ಧ.
ಧಾರ್ಮಿಕ ಸ್ಥಳಗಳು ಸಾರ್ವಜನಿಕರಿಗೆ ಬಂದ್ ಆಗಿರುತ್ತವೆ. ಆದರೆ, ಪೂಜಾ ವಿಧಿಗಳು ಮುಂದುವರೆಯಲಿವೆ. ರೆಸ್ಟೋರೆಂಟ್ ಹಾಗೂ ಹೋಟೆಲ್ಗಳಲ್ಲಿ ಪಾರ್ಸಲ್ಗೆ ಮಾತ್ರ ಅವಕಾಶ ಇರಲಿದೆ.
ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಹೇರಿಕೆ ಮಾಡುವಂತೆ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ, ಲಾಕ್ಡೌನ್ಗೆ ರಾಜ್ಯ ಸರ್ಕಾರ ಒಲವು ತೋರಿಲ್ಲ. ಅಲ್ಲದೇ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೂ ಸಹ ಲಾಕ್ಡೌನ್ ಕಡೆಯ ಅಸ್ತ್ರವಾಗಬೇಕು ಎಂದು ಹೇಳಿರುವುದು ಗಮನಾರ್ಹವಾಗಿದೆ.