ತರಳಬಾಳು ಶ್ರೀಗಳಿಗೆ ಭಕ್ತರಿಂದ ಪುಷ್ಪ ನಮನ

ಸಿರಿಗೆರೆ, ಅ. 4 – ಇತ್ತೀಚಿನ ದಿನಗಳಲ್ಲಿ ಭರಮಸಾಗರ ಬಿಚ್ಚುಗತ್ತಿ ಭರಮಣ್ಣ ನಾಯಕ ದೊಡ್ಡಕೆರೆಗೆ ತುಂಗ ಭದ್ರೆಯ ನೀರು ಹರಿಸಲು ಶ್ರಮಿಸಿ, ಕಾರ್ಯ ಯಶಸ್ವಿಯಾದ ಫಲವಾಗಿ ಸೋಮವಾರ ಮಧ್ಯಾಹ್ನ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಬೆಂಗಳೂರಿನಿಂದ ಸಿರಿಗೆರೆ ಆಗಮಿಸಿದಾಗ ಭರಮಸಾಗರ ಹಾಗೂ ಸಿರಿಗೆರೆ ಸುತ್ತಮುತ್ತಲ ಹಳ್ಳಿಗಳ ಭಕ್ತಾದಿಗಳು ಭರಮಸಾಗರದ ಕೆರೆಯ ನೀರನ್ನು ಪಾದಗಳಿಗೆ ಸ್ಪರ್ಷಿಸಿ, ಪುಷ್ಪ ನಮನ ಸಲ್ಲಿಸಿದರು.

ಗ್ರಾಮಕ್ಕೆ ಮಧಾಹ್ನ 1 ಗಂಟೆಗೆ ಸ್ವಾಮೀಜಿಯವರು ಆಗಮಿಸಿದಾಗ ಭಕ್ತಿ ಸಮರ್ಪಿಸಲು ತಂಡೋಪ ತಂಡ ವಾಗಿ  ಬಂದಿದ್ದ ಸುತ್ತಮುತ್ತಲ ರೈತರು, ಶಾಲೆಯ ವಿದ್ಯಾರ್ಥಿಗಳು, ಮಹಿಳೆ ಯರು ಹೂವಿನ ಮಳೆ ಸುರಿಸಿದರು.

ಪೊಲೀಸ್ ಉಪಠಾಣೆಯಿಂದ ಸ್ವಾಮೀಜಿಯವರ ಜತೆಯಲ್ಲಿ ಭಕ್ತರು ಪಾದಯಾತ್ರೆಯ ಮೂಲಕ ಐಕ್ಯಮಂಟಪಕ್ಕೆ ಭೇಟಿ ನೀಡಿದರು.  ಸ್ವಾಮೀಜಿಯವರು ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಕಂಚಿನ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿದರು. ಪಕ್ಕದ ಕಾರಂಜಿಗೆ ತುಂಗಭದ್ರೆಯ ನೀರನ್ನು ಅರ್ಪಿಸಿ ಸಂತಸ ವ್ಯಕ್ತಪಡಿಸಿದರು.

ನಂತರ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪಕ್ಕೆ ತೆರಳಿದಾಗ, ದೊಡ್ಡಘಟ್ಟ ಗ್ರಾಮದ ಓಂಕಾರಪ್ಪ, ಭರಮಸಾಗರ ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್ ಅನಿಸಿಕೆ ವ್ಯಕ್ತಪಡಿಸಿ, ಶ್ರೀಗಳನ್ನು ಶ್ಲ್ಯಾಘಿಸಿದರು. ಬ್ಯಾಲಾಳು ಗ್ರಾಮದ ಶರಣ್ ಕುಮಾರ್,  ನಾನು ನಮ್ಮ ತೋಟದಲ್ಲಿ 80 ಸಲ ಬೋರ್ ಎತ್ತಿ ಇಳಿಸಿದ್ದು, ಸುಮಾರು 7ಲಕ್ಷ ರೂಪಾಯಿ ಕಳೆದುಕೊಂಡಿದ್ದೇನೆ. ಕೆರೆಗೆ ನೀರು ತಂದ ಶ್ರೀಗಳ ಕಾರ್ಯ ಮಹೋನ್ನತವಾದದ್ದು, ನಾನು ವೈಯಕ್ತಿಕವಾಗಿ ಪ್ರತಿವರ್ಷ 50 ಸಾವಿರ ರೂಗಳನ್ನು ದೇಣಿಗೆ ರೂಪದಲ್ಲಿ ಶ್ರೀಮಠಕ್ಕೆ ಅರ್ಪಿಸುತ್ತೇನೆ ಎಂದು ತಿಳಿಸಿದರು.

10 ಕೋಟಿ ರೂ. ದೇಣಿಗೆಯ ರಿಸರ್ವ್ ಫಂಡ್  : ಸಿರಿಗೆರೆ ಗ್ರಾಮದ ಸಿ.ಆರ್.ನಾಗರಾಜ್ ಮಾತನಾಡಿ, ಈ ಯೋಜನೆಗೆ ಸುತ್ತಮುತ್ತಲೆಲ್ಲಾ ಗ್ರಾಮಸ್ಥರು ಸೇರಿ ಸಂಘದ ರೂಪದಲ್ಲಿ ಸುಮಾರು 10 ಕೋಟಿ  ರೂ.ದೇಣಿಗೆ ಮೂಲಕ ಸಂಗ್ರಹಿಸಿ ರಿಸರ್ವ್ ಫಂಡ್ ಅನ್ನು  ಶ್ರೀ ಗುರುಗಳ ಅಧ್ಯಕ್ಷತೆಯಲ್ಲಿ ಇರಿಸುತ್ತೇವೆ. ಯೋಜನೆಗೆ ಏನಾದರೂ ಸಮಸ್ಯೆಗಳಾದರೆ ಈ ಹಣ ಉಪಕಾರಿಯಾಗಲಿದೆ ಎಂದು ಹೇಳಿದರು.

ರೋಮ್ ನಲ್ಲಿ ಭರಮಸಾಗರ ಕೆರೆಯ ನೀರಿನ ವಿಡಿಯೋ ತುಣುಕು:  ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡುತ್ತಾ, ಇಂದು ನಮಗೆ ಇಟಲಿಯ ರಾಜಧಾನಿ ರೋಮ್ ನಲ್ಲಿ ವರ್ಚ್ಯುಯಲ್ ಮೂಲಕ ಸಭೆ ಇದ್ದು,  ಸಭೆಯಲ್ಲಿ ಭರಮಸಾಗರ ಕೆರೆಗೆ ಬಂದ ನೀರಿನ ವಿಡಿಯೋ ತುಣುಕುಗಳನ್ನು ಕಳಿಸಲಾಗುವುದು ಎಂದು ತಿಳಿಸಿದರು. 

1721 ಅಕ್ಟೋಬರ್ ರಲ್ಲಿ (ಸುಮಾರು 300 ವರ್ಷಗಳ ಹಿಂದೆ) ಬಿಚ್ಚುಗತ್ತಿ ಭರಮಣ್ಣ ನಾಯಕರಿಂದ ಜನರ ಕಾಳಜಿ ಹಾಗೂ ಮುಂದಾಲೋಚನೆಯಿಂದ ಯಾವ ಆಧುನಿಕ ಉಪಕರಣಗಳಿಲ್ಲದೆ 1000 ಎಕರೆ ಕೆರೆ ನಿರ್ಮಾಣ ಮಾಡಿದ್ದು, ಇಂತಹ ಕೆರೆಗೆ ನೀರು ಹರಿಸಿದ ಕಾರ್ಯ ಅದ್ಭುತವೆನಿಸಿದೆ. ಅಕ್ಟೋಬರ್ ಕೊನೆಯ ಭಾಗ, ಇಲ್ಲವೇ ನವೆಂಬರ್ ಮಧ್ಯದ ಭಾಗದಲ್ಲಿ ಕೆರೆಗೆ ಸಂಪೂರ್ಣ ನೀರು ಬರುವ ನಿರೀಕ್ಷೆ ಇದೆ ಎಂದು ಹೇಳಿದರು.

7 ರಂದು  ಕೆರೆ ವೀಕ್ಷಣೆ : ಇದೇ ಅ.7 ರಂದು  ಮಧ್ಯಾಹ್ನ 3 ಗಂಟೆಗೆ ಶ್ರೀಗಳು ಭರಮಸಾಗರ ಕೆರೆಯ ವೀಕ್ಷಣೆ ನಡೆಸಲಿದ್ದು,  ಸಂಸದರು, ಶಾಸಕರು ಮತ್ತು ಇತರೆ ರಾಜಕೀಯ ಮುಖಂಡರು ಆಗಮಿಸಲಿದ್ದಾರೆ.

error: Content is protected !!